ತುಮಕೂರು : ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮಿಗಳ 7ನೇ ವರ್ಷದ ಪುಣ್ಯಸ್ಮರಣೆಯನ್ನು ಜನವರಿ 21ರ ಬುಧವಾರ 11 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಉಪ ರಾಷ್ಟ್ರಪತಿ ಸಿ.ಪಿ.ರಾಧಕೃಷ್ಣನ್ ಉದ್ಘಾಟಿಸಲಿದ್ದಾರೆಂದು ಆಡಳಿತಾಧಿಕಾರಿ ಜಯವಿಭವ ಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷತೆಯನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ವಹಿಸಲಿದ್ದು, ಸಮಾರಂಭದ ದಿವ್ಯಸಾನಿಧ್ಯವನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮಿಗಳು, ಶ್ರೀ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮಾನಿಟೇರಿಯನ್ ಮಿಷನ್ ನ ಸ್ಥಾಪಕರಾದ ಶ್ರೀ ಮಧುಸೂದನ ಸಾಯಿ ಮತ್ತು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳು ವಹಿಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕೇಂದ್ರದ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಲೋಕಸಭಾ ಸದಸ್ಯರಾದ ಗೋವಿಂದ ಎಂ.ಕಾರಜೋಳ, ಡಾ||.ಸಿ.ಎನ್.ಮಂಜಿನಾಥ, ಶಾಸಕರುಗಳಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಉಪರಾಷ್ಟ್ರಪತಿಗಳು ಬೆಳಿಗ್ಗೆ 10.40ಕ್ಕೆ ಸರಿಯಾಗಿಸಿದ್ದಗಂಗಾ ಮಠಕ್ಕೆ ಆಗಮಿಸಲಿದ್ದು, ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದು 11ಗಂಟೆಗೆ ಸರಿಯಾಗಿ ಸಮಾರಂಭದ ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದ ಅವರು, ಉಪರಾಷ್ಟ್ರಪತಿಗಳು ಆಗಮಿಸುತ್ತಿರುವುದರಿಂದ ಶ್ರೀಗಳ ಪುಣ್ಯಸ್ಮರಣೆಗೆ ಆಗಮಿಸುವ ಭಕ್ತರು ಬೆಳಿಗ್ಗೆ 10.30ರೊಳಗೆ ಆಗಮಿಸಬೇಕು, ಆ ನಂತರ ಕ್ಯಾತ್ಸಂದ್ರದಿಂದ ಮಠಕ್ಕೆ ಬರುವುದನ್ನು ಕಾರ್ಯಕ್ರಮ ಮುಗಿಯುವವರೆಗೂ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ವಾಹನಗಳ ನಿಲುಗಡೆಯನ್ನು ಮಠದ ದನಗಳ ಜಾತ್ರೆಯ ಮೈದಾನದಲ್ಲಿ ಅವಕಾಶ ಮಾಡಲಾಗಿದೆ, ಸುಮಾರು ಒಂದೂಕಾಲು ಲಕ್ಷ ಜನರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಪುಣ್ಯಸ್ಮರಣೆಗೆ ಬರುವವರು ನೀರಿನ ಬಾಟಲ್, ಕ್ಯಾಮರ, ವ್ಯಾನಿಟಿ ಬ್ಯಾಗ್ ಇತರೆ ವಸ್ತುಗಳನ್ನು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ, ವೇದಿಕೆ ಮುಂಭಾಗ ಎಂಟು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟಿ.ಕೆ.ನಂಜುಂಡಪ್ಪ, ಶಿವಕುಮಾರಯ್ಯ, ವಿಶ್ವನಾಥಯ್ಯ, ಪುರುಷೋತ್ತಮ್ ಉಪಸ್ಥಿತರಿದ್ದರು.