ತುಮಕೂರು : ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದ ಸ್ವೀಕೃತ ಅರ್ಜಿಗಳನ್ನು ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕ ಪಂಕಜ್ ಕುಮಾರ್ ಪಾಂಡೆ ಅವರು ಸೂಪರ್ ಚೆಕಿಂಗ್ ಕಾರ್ಯ ನಿರ್ವಹಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ 2023ರ ಜನವರಿ 1ಕ್ಕೆ ಅರ್ಹತಾ ದಿನಾಂಕವೆಂದು ಪರಿಗಣಿಸಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸುವ ಸಂಬಂಧ ಸ್ವೀಕೃತ ಅರ್ಜಿಗಳ ಬಗ್ಗೆ ಪರಿಶೀಲಿಸಿ ಆಯಾ ತಹಶೀಲ್ದಾರರಿಂದ ಮಾಹಿತಿ ಪಡೆದರು.
ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು ವೀಕ್ಷಕರಿಗೆ ಮಾಹಿತಿ ನೀಡುತ್ತಾ, ತಮ್ಮ ಉಪವಿಭಾಗ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಸಂಬಂಧ ಸ್ವೀಕೃತವಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಶೇ. 100ರಷ್ಟು ವಿಲೇವಾರಿ ಮಾಡಲಾಗಿದ್ದು, 2023ರ ಜನವರಿ 5ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಮತದಾರರ ಪಟ್ಟಿಯಲ್ಲಿ ಡಿಸೆಂಬರ್ 27ರವರೆಗೆ 1098754 ಪುರುಷರು, 1100722 ಮಹಿಳೆಯರು ಹಾಗೂ 100 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ 2199576 ಮತದಾರರಿದ್ದು, ಈ ಪೈಕಿ 34628 ಯುವ ಮತದಾರರು, 7471 ಗಣ್ಯ ವ್ಯಕ್ತಿಗಳು ಹಾಗೂ 29023 ವಿಕಲಚೇತನರು ಒಳಗೊಂಡಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ನಂತರ ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ನಡೆದ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಸಭೆಯಲ್ಲಿ ಹಾಜರಿದ್ದ ಬಿಜೆಪಿ ಪಕ್ಷದ ಪ್ರತಿನಿಧಿ ಹನುಮಂತರಾಜು ಅವರಿಂದ ಸಲಹೆ, ಅಭಿಪ್ರಾಯಗಳನ್ನು ಆಲಿಸಿದ ವೀಕ್ಷಕರು, 18 ವರ್ಷ ತುಂಬಿದ ಎಲ್ಲಾ ಅರ್ಹರು ಮತದಾರರ ಪಟ್ಟಿಗೆ ಹೆಸರು ಸೇರಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಅರ್ಹ ಮತದಾರರು ಪಟ್ಟಿಗೆ ಸೇರಿಸಲು ಅವಕಾಶವಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಮಾತನಾಡಿ, ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಅರಿವು ಮೂಡಿಸಿ 18 ವರ್ಷ ತುಂಬಿದವರನ್ನು ಪಟ್ಟಿಗೆ ಸೇರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿ, ಎಲ್ಲಾ ತಹಶೀಲ್ದಾರರು ಸೇರಿದಂತೆ ಮತ್ತಿತರರು ಹಾಜರಿದ್ದರು.
ಬಳಿಕ ಪಂಕಜ್ ಕುಮಾರ್ ಪಾಂಡೆ ಅವರು ಮತಗಟ್ಟೆ ಸಂಖ್ಯೆ 41-ಸತ್ಯಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮತಗಟ್ಟೆ ಸಂಖ್ಯೆ 248- ಕ್ಯಾತ್ಸಂದ್ರದ ಉಮಾಪ್ರಗತಿ ಕಾಲೇಜಿನ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ: ಕೆ. ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ವಿ. ಅಜಯ್, ಪಾಲಿಕೆ ಆಯುಕ್ತ ಯೋಗಾನಂದ್ ಸೇರಿದಂತೆ ಮತ್ತಿತರರು ಹಾಜರಿದ್ದರು.