ತುಮಕೂರು : ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಡಾ|| ಶ್ರೀ ಶಿವಕುಮಾರಸ್ವಾಮಿಗಳ 5ನೇ ವರ್ಷದ ಪುಣ್ಯ ಸಂಸ್ಮರಣೋತ್ಸವವನ್ನು ಜನವರಿ 21ರ ಭಾನುವಾರ ಬೆಳಿಗ್ಗೆ 11ಗಂಟೆಗೆ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧಗಂಗಾ ಸಂಸ್ಥೆಯ ಕಾರ್ಯದರ್ಶಿಗಳಾದ ನಂಜುಡಪ್ಪ ತಿಳಿಸಿದರು.
ಅಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ವಹಿಸಲಿದ್ದಾರೆ. ದಿವ್ಯ ನೇತೃತ್ವವನ್ನು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಮಹಾಸ್ವಾಮಿಗಳು ವಹಿಸಲಿದ್ದು, ದಿವ್ಯ ಸಾನಿಧ್ಯವನ್ನು ಡಾ.ಶ್ರೀ ತೋಂಟದ ಸಿದ್ಧರಾಮಸ್ವಾಮಿಗಳು ವಹಿಸಲಿದ್ದು, ಸಿದ್ಧಗಂಗಾ ಮಠದ ಉತ್ತರಾಧಿಕಾರಿಗಳಾದ ಶ್ರೀ ಶಿವಸಿದ್ಧೇಶ್ವರ ಸ್ವಾಮಿಗಳು ಉಪಸ್ಥಿತರಿರುವರು.

ಡಾ.ಶ್ರೀ ಶಿವಕುಮಾರಸ್ವಾಮೀಜಿ ಆಸ್ಪತ್ರೆಯ ಎಸ್.ಎಂ.ಸಿ.ಆರ್.ಐ. ಉದ್ಘಾಟನೆಯನ್ನು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಮಾಡಲಿದ್ದು, ಡಾ.ಶ್ರೀ ಶಿವಕುಮಾರಸ್ವಾಮೀಜಿರವರ ಸ್ಮøತಿವನ ಉದ್ಘಾಟನೆಯನ್ನು ಅರಣ್ಯ ಹಾಗೂ ಪರಿಸರ ವಿಜ್ಞಾನ ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಲಿದ್ದು, ಶ್ರೀ ಸಿದ್ಧಗಂಗಾ ಫಾರ್ಮಸಿ ಕಾಲೇಜು ನೂತನ ಕಟ್ಟಡವನ್ನು ಸಹಕಾರ ಸಚಿವರಾದ ಕೆ.ಎನ್.ರಾಜಣ್ಣನವರು ಉದ್ಘಾಟಿಸಲಿದ್ದಾರೆ.
ಸ್ನಾತಕೋತ್ತರ ವಿಭಾಗದ ಎಸ್.ಎಂ.ಸಿ.ಆರ್.ಐ., ಕಟ್ಟಡದ ಶಂಕುಸ್ಥಾಪನೆಯನ್ನು ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಎಂ.ಬಿ. ಪಾಟೀಲರು ನೆರವೇರಿಸಲಿದ್ದು, ವಸತಿ ಗೃಹಗಳ ಕಟ್ಟಡದ ಶಂಕುಸ್ಥಾಪನೆಯನ್ನು ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಎಸ್.ಎಸ್.ಮಲ್ಲಿಕಾಜುನಯ್ಯ ಅವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ, ಮುಖ್ಯಮಂತ್ರಿ ಸಲಹೆಗಾರರಾದ ಬಿ.ಆರ್.ಪಾಟೀಲ್, ಲೋಕಸಭಾ ಸದಸ್ಯರಾದ ಜಿ.ಎಸ್.ಬಸವರಾಜು ಹಾಗೂ ವಿಶೇಷ ಆಹ್ವಾನಿತರಾಗಿ ಶಾಸಕರುಗಳಾದ ಹೆಚ್.ಸಿ.ಬಾಲಕೃಷ್ಣಪ್ಪ, ಬಿ.ಸುರೇಶ್‍ಗೌಡ, ಜಿ.ಬಿ.ಜ್ಯೋತಿಗಣೇಶ್ ಮತ್ತು ಎನ್.ಶ್ರೀನಿವಾಸ್ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಶ್ರೀಗಳ ಸಂಸ್ಮರಣೋತ್ಸವ ಅಂಗವಾಗಿ ಅನ್ನ ದಾಸೋಹವನ್ನು ಏರ್ಪಡಿಸಿದ್ದು, ಬೆಳಿಗ್ಗೆ ಉಪಹಾರಕ್ಕೆ ಉಪ್ಪಿಟ್ಟು ಕೇಸರಿಬಾತು, ಊಟಕ್ಕೆ ಕೀರು, ಸಿಹಿಬೂಂದಿ, ಖಾರಬೂಂದಿ, ಚಿತ್ರನ್ನ, ಅನ್ನ ಸಾಂಬಾರು ವ್ಯವಸ್ಥೆ ಮಾಡಲಾಗಿದೆ ಎಂದು ಅನ್ನದಾಸೋಹದ ವ್ಯವಸ್ಥಾಪಕರಾದ ವಿಶ್ವನಾಥಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಕೈಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ಮಲ್ಲಿಕಾರ್ಜುನಯ್ಯ, ಎಸ್‍ಐಟಿಯ ಕೆಮಿಕಲ್ ಇಂಜಿನಿಯರ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು ಹಾಗೂ ಸಿದ್ಧಗಂಗೆ ಸಂಸ್ಥೆಯ ಸಹಕಾರ್ಯದರ್ಶಿಗಳಾದ ಶಿವಕುಮಾರಯ್ಯ, ಮಠದ ಪತ್ರಿಕಾ ಸಂಚಾಲಕರಾದ ಎಸ್‍ಐಟಿ ಮೋಹನಕುಮಾರ್ ಉಪಸ್ಥಿತರಿದ್ದರು.
ಸಿದ್ಧಗಂಗೆ ನೋಡ ಬನ್ನಿ,ದಾಸೋಹ ಸವಿಯ ಬನ್ನಿ:
ಸಿದ್ಧಗಂಗೆ ಎಂದರೆ ವಿದ್ಯೆ ಮತ್ತು ಅನ್ನದಾಸೋಹಕ್ಕೆ ಹೆಸರು ಪಡೆದಿದೆ, ಮಠಕ್ಕೆ ಬಂದವರಿಗೆ ಮೊದಲು ಅನ್ನ ನೀಡಿ ಹಸಿವು ನೀಗಿಸಿದ ನಂತರ ಇತರೆ ಕೆಲಸ ಕಾರ್ಯಗಳು ನಡೆಯುವಂತೆ ಪ್ರತಿ ದಿನ ನೋಡಿಕೊಳ್ಳಲಾಗುತ್ತಿದೆ.
ಡಾ||ಶ್ರೀ ಶಿವಕುಮಾರಸ್ವಾಮಿಗಳ ಜಯಂತೋತ್ಸವ ಇರಬಹುದು, ಪುಣ್ಯಸಂಸ್ಮರಣೋತ್ವವ ಇರಬಹುದು ಅಲ್ಲಿಗೆ ಬರುವ ಸಾವಿರ, ಲಕ್ಷ ಮಂದಿಗೆಲ್ಲಾ ಒಂದು ಸ್ವಲ್ಪವೂ ಬೇಜಾರಿಲ್ಲದೆ, ಹೊಟ್ಟೆ ತುಂಬಾ ಅನ್ನವನ್ನು ಬಡಿಸಲಾಗುತ್ತಿದೆ.
ಊಟದ ವ್ಯವಸ್ಥೆಯೂ ಸಹ ಅಷ್ಟೇ ಚೆನ್ನಾಗಿರುತ್ತದೆ, ರುಚಿಯೂ ಮತ್ತಷ್ಟು ಚೆನ್ನಾಗಿರುತ್ತದೆ, ಮಠದಲ್ಲಿ ತಯಾರಿಸುವ ಪಾಯಸ, ಸಿಹಿಬೂಂದಿ, ಚಿತ್ರನ್ನ, ಮಜ್ಜಿಗೆಯನ್ನು ಸವಿದು ನೋಡಿದರೇನೆ ಅದರ ಸಾರ ತಿಳಿಯುವುದು.
ಈ ಬಾರಿಯೂ ಅನ್ನ ದಾಸೋಹಕ್ಕೆ ಬೆಳಿಗ್ಗೆ ಉಪಹಾರಕ್ಕೆ ಉಪ್ಪಿಟ್ಟು ಕೇಸರಿಬಾತು, ಊಟಕ್ಕೆ ಕೀರು, ಸಿಹಿಬೂಂದಿ, ಖಾರಬೂಂದಿ, ಚಿತ್ರನ್ನ, ಅನ್ನ ಸಾಂಬಾರು ವ್ಯವಸ್ಥೆ ಮಾಡಲಾಗಿದೆ.
ಅನ್ನ ದಾಸೋಹವನ್ನು 5ಕಡೆ ವ್ಯವಸ್ಥೆ ಮಾಡಲಾಗಿದೆ, ಜನವರಿ 21ರಂದು ಬೆಳಿಗ್ಗೆ 7.30ಕ್ಕೆ ಉಪಹಾರದೊಂದಿಗೆ ಪ್ರಾರಂಭವಾದರೆ ದಾಸೋಹ ರಾತ್ರಿ 11ಗಂಟೆಯವರೆಗೆ ನಡೆಯಲಿದೆ, ಅನ್ನ ದಾಸೋಹ ಬಿಡುವಿಲ್ಲದೆ, ಬಾಳೆ ಎಲೆಯಲ್ಲಿ ಅಚ್ಚುಕಟ್ಟಾಗಿ ಬಡಿಸಲಾಗುವುದು, ಬಡಿಸಿದ ಅನ್ನವನ್ನು ಒಂದಗಳು ಬಿಡದಂತೆ ಸೇವಿಸಬೇಕೆಂಬುದೇ ಶ್ರೀ ಮಠದ ದ್ಯೇಯ ವಾಕ್ಯವಾಗಿದ್ದು, ಏಕೆಂದರೆ ಒಂದಗಳು ಅನ್ನ ಬೆಳೆಯಬೇಕಾದರೆ ರೈತ ಎಷ್ಟೊಂದು ಶ್ರಮ, ಶ್ರದ್ಧೆ ಇರುತ್ತದೆ ಎಂದು ಸ್ವತಃ ಡಾ||ಶ್ರೀ ಶಿವಕುಮಾರಸ್ವಾಮಿಗಳು ಸ್ವತಃ ಬೆಳೆÉ ಬೆಳೆದು ಕಂಡುಕೊಂಡವರು.
ಈ ಹಿನ್ನಲೆಯಲ್ಲಿ ಎಲೆಯಲ್ಲಿ ಅನ್ನ ಬಿಡದಂತೆ ಸೇವಿಸಿ, ಇತರರಿಗೂ ನೀಡಿ ಎಂಬುದು ಮಠದ ಆಶಯವಾಗಿದೆ.