ಜನವರಿ 29ಕ್ಕೆ ತುಮಕೂರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಉದ್ಘಾಟನೆ-ಗೃಹ ಸಚಿವರ ಖಡಕ್ ಆದೇಶ

ತುಮಕೂರು : ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಬೇಕು. ಯಾವುದೇ ತಾಂತ್ರಿಕ ತೊಂದರೆಗಳಿದ್ದಲ್ಲಿ ಬಗೆಹರಿಸಿ ಜನವರಿ 29ಕ್ಕೆ ಬಸ್ ನಿಲ್ದಾಣ ಉದ್ಘಾಟನೆಯಾಗಬೇಕು ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದರು.

ಅಧಿಕಾರಿಗಳು ಸಭೆಗಳಿಗೆ ಆಗಮಿಸುವಾಗ ತಮ್ಮ ಇಲಾಖೆಗೆ ಸಂಬಂಧಿಸಿದ ನಿಖರ ಮಾಹಿತಿಯನ್ನು ತರಬೇಕು. ಸಭೆಗೆ ಬಂದು ಸಬೂಬು ಹೇಳಬಾರದು. ಇನ್ನುಮುಂದೆ ಇಂತಹ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸನ್ಮಾನ್ಯ ಮುಖ್ಯಮಂತ್ರಿಗಳ ಜನವರಿ 29ರ ತುಮಕೂರು ಪ್ರವಾಸ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಇಲಾಖೆಗೆ ಮಂಜೂರಾಗಿರುವ ಯೋಜನೆ/ಕಾರ್ಯಕ್ರಮಗಳನ್ನು ನಿಗಧಿತ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು, ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮದ ಪಟ್ಟಿ ಅಂತಿಮಗೊಳ್ಳಬೇಕು. ಪ್ರತಿಯೊಂದು ಇಲಾಖಾ ಮುಖ್ಯಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಚರ್ಚಿಸುವಂತೆ ಸೂಚಿಸಿದರು. 

ತುಮಕೂರಿನ ಇತಿಹಾಸದಲ್ಲಿಯೇ ಹಿಂದೆಂದೂ ಕಾಣದಂತಹ ಕಾರ್ಯಕ್ರಮ ಇದಾಗಬೇಕು. ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ಸಂಭವವಿದ್ದು, ಈ ಪೈಕಿ 50ಸಾವಿರ ಫಲಾನುಭವಿಗಳಿರಬೇಕು. ಆಯಾ ಇಲಾಖೆಗಳೇ ಫಲಾನುಭವಿಗಳನ್ನು ಕರೆತರಬೇಕು. 

ಅಂದಾಜು 700 ಕೋಟಿ ರೂ.ಮೊತ್ತದಷ್ಟು ಸವಲತ್ತುಗಳನ್ನು ಸರ್ಕಾರದ ವತಿಯಿಂದ ನೀಡುವ ಕಾರ್ಯಕ್ರಮ ಇದಾಗಿದ್ದು, ಅಂದಿನ ದಿನ ನಾವು ಸುಮಾರು 50 ಸಾವಿರ ಫಲಾನುಭವಿಗಳು ಸವಲತ್ತುಗಳನ್ನು ಪಡೆದುಕೊಳ್ಳಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳು ಸರ್ಕಾರದಿಂದ ಅನುಮೋದನೆಯಾಗಿ, ಅನುದಾನ ಬಿಡುಗಡೆಯಾಗಿರುವಂತಹ ಕಾರ್ಯಕ್ರಮಗಳಾಗಿವೆ ಎಂದು ತಿಳಿಸಿದರು. 

ದೇಶದ ಪ್ರಮುಖ ನಗರಗಳಾದ ದೆಹಲಿ ಮತ್ತು ಮುಂಬೈನಲ್ಲಿ ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿದ್ದು, ಸದ್ಯ ಬೆಂಗಳೂರಿನಲ್ಲೂ ಸಹ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇಲ್ಲಿಯೂ ಸಹ ಮತ್ತೊಂದು ಅಂತರ ರಾಷ್ಟ್ರೀಯ ವಿಮಾ ನಿಲ್ದಾಣದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು. 

ತುಮಕೂರು ನಗರದ ವ್ಯಾಪ್ತಿಯಲ್ಲಿ ರಾತ್ರಿವೇಳೆ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಸುರಿಯಲಾಗುತ್ತಿದ್ದು, ಇದರಿಂದ ರೋಗರುಜಿನುಗಳು ಮತ್ತು ನಾಯಿಗಳ ಹಾವಳಿ ಹೆಚ್ಚಾಗುವ ಸಾಧ್ಯತೆಇರುವ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ರಾತ್ರಿ ಬೀಟ್‍ಗಳನ್ನು ಹೆಚ್ಚಿಸುವಂತೆ ಸೂಚಿಸಿದರು. 

ಕೃಷಿ ಇಲಾಖೆಯಲ್ಲಿ ಹನಿ ನೀರಾವರಿ ಯೋಜನೆಯಡಿ ಅರ್ಜಿ ಸಲ್ಲಿಸುವ ಎಲ್ಲರಿಗೂ ಸಹ ಸ್ಪ್ರಿಂಕ್ಲರ್ ಸೆಟ್‍ಗಳನ್ನು ವಿತರಿಸಬೇಕು ಮತ್ತು ಸ್ಮಾರ್ಟ್ ಸಿಟಿ ವತಿಯಿಂದ ಎಲ್ಲೆಲ್ಲಿ ಕೆರೆ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದೆಯೋ ಅಲ್ಲೆಲ್ಲಾ ವಾಕಿಂಗ್ ಟ್ರ್ಯಾಕ್ ಪಾರ್ಕ್ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಜಿಲ್ಲೆಯಾದ್ಯಂತ ಅಂದಾಜು 40 ರಿಂದ 60ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಮುಂದಿನ ದಿನಗಳಲ್ಲಿ ಅರ್ಹರಿಗೆ ವಿತರಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವಂತಹ ರಾಯದುರ್ಗ-ದಾವಣಗೆರೆ ಭೂಸ್ವಾಧೀನ ಪ್ರಕ್ರಿಯೆಗಳು ಚುರುಕುಗೊಳ್ಳಬೇಕು. ಕಳೆದ 4 ವರ್ಷಗಳಿಂದ ಎತ್ತಿನ ಹೊಳೆ ಯೋಜನೆ ಕುಂಟುತ್ತಾ ಸಾಗಿದೆ. ಈಗಾಗಲೇ 1300 ಎಕರೆ ಭೂಸ್ವಾಧೀನವಾಗಿದ್ದು, 1737 ಎಕರೆ ಭೂಸ್ವಾಧೀನವಾಗಬೇಕಿದೆ.  ಹಣ ಬಿಡುಗಡೆಯಾಗಬೇಕಿದ್ದು, ಮುಂದಿನ ದಿನಗಳಲ್ಲಿ ಈ ಕುರಿತಂತೆ ಸಮಗ್ರವಾಗಿ ಚರ್ಚಿಸಲು ಬೆಂಗಳೂರಿನಲ್ಲಿ ಸಭೆ ಕರೆಯಲಾಗುವುದು ಎಂದು ತಿಳಿಸಿದರು. 

ಸಭೆಯಲ್ಲಿ ಉಪಸ್ಥಿತರಿದ್ದ ಸಹಕಾರ ಸಚಿವರ ಕೆ.ಎನ್. ರಾಜಣ್ಣ ಅವರು ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ನಕಲಿ ಕಾರ್ಡುಗಳನ್ನು ವಿತರಿಸಿದಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮತ್ತು ಕಾರ್ಮಿಕರ ಮಕ್ಕಳಿಗೂ ಸಹ ಶೈಕ್ಷಣಿಕ ಸವಲತ್ತುಗಳನ್ನು ನೀಡುವ ಮೂಲಕ ಕೂಲಿ ಕಾರ್ಮಿಕರ ಮಕ್ಕಳಿಗೆ ಉತ್ತಮ ಬದುಕು ನೀಡುವಂತೆ ಕಾರ್ಮಿಕ ಅಧಿಕಾರಿ ತೇಜಾವತಿ ಅವರಿಗೆ ಸೂಚಿಸಿದರು. 

ಜೆಜೆಎಂ ಯೋಜನೆಯಡಿ ಶಾಶ್ವತ ನೀರಾವರಿ ಮೂಲಗಳನ್ನು ಕಂಡುಕೊಂಡ ನಂತರ ಯೋಜನೆಯ ಅನುಷ್ಟಾನಕ್ಕೆ ಮುಂದಾಗಬೇಕಿದೆ. ಕೊಳವೆ ಬಾವಿಗಳು ಶಾಶ್ವತವಲ್ಲ ಎಂದು ತಿಳಿಸಿದರು. 

ಸಭೆಯಲ್ಲಿ ಸಂಸದರಾದ ಜಿ.ಎಸ್.ಬಸವರಾಜು, ಶಾಸಕರುಗಳಾದ ಎಸ್.ವಿ.ರಂಗನಾಥ್, ಶ್ರೀನಿವಾಸ್, ರಾಜೇಂದ್ರ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಅಶ್ವಿಜ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *