ಔಟರ್ ರಿಂಗ್ ರೋಡ್ ಹೆಸರಲ್ಲಿ ಭೂಮಿ ಕಬಳಿಕೆಗೆ ಹುನ್ನಾರ ವಿರೋಧಿಸಿ ಜಾಥ, ಪ್ರತಿಭಟನೆ

ತುಮಕೂರು:ತುಮಕೂರಿನ ಔಟರ್ ರಿಂಗ್ ರೋಡ್ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ,ಅಕ್ಟೋಬರ್ 04ರಿಂದ 06ರವರೆಗೆ ಯೋಜನೆಯಿಂದ ಬಾಧಿತ ಪ್ರದೇಶಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳುವುದರ ಜೊತೆಗೆ,ಅಕ್ಟೋಬರ್ 13 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಬೈಪಾಸ್ ರಸ್ತೆ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಮಿತಿಯ ಮುಖಂಡರಾದ ಸಂಯುಕ್ತ ಹೋರಾಟ-ಕರ್ನಾಟಕ ಸಂಚಾಲಕರಾದ ಸಿ.ಯತಿರಾಜು, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು,ಎಐಕೆಕೆಎಂಎಸ್‍ನ ಎಸ್.ಎನ್.ಸ್ವಾಮಿ, ಎಸ್.ಕೆ.ಎಂ.ಸಂಯೋಜಕರಾದ ಬಿ.ಉಮೇಶ್,ಎಐಕೆಎಸ್‍ನ ಕಂಬೇಗೌಡ,ಕೆಪಿಆರ್‍ಎಸ್‍ನ ಅಜ್ಜಪ್ಪ,ರಮೇಶ್ ಭೈರಸಂದ್ರ, ಸಿದ್ದಗಂಗಮ್ಮ,ರೈತಸಂಘದ ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ ಹಾಗೂ ಬಾಧಿತ ಹಳ್ಳಿಗಳ ರೈತರು,ಜಿಲ್ಲಾಡಳಿತ ಭೂಸ್ವಾಧೀನ ಕಾಯ್ದೆ-2013ನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ.ರೈತರ ಒಪ್ಪಿಗೆಯಿಲ್ಲದೆ ಇದ್ದರೂ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ ಎಂದು ಆರೋಪಿಸಿದರು.

ಸಂಯುಕ್ತ ಹೋರಾಟ-ಕರ್ನಾಟಕದ ಸಿ.ಯತಿರಾಜು ಮಾತನಾಡಿ,ಸರಕಾರ ಹೊಸ ಯೋಜನೆಯ ಹೆಸರಿನಲ್ಲಿ ರೈತರ ಫಲವತ್ತಾ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ.ಇದರಿಂದ 750ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳಲಿವೆ.ಅಲ್ಲದೆ ಸರಕಾರ ಯೋಜನೆಯ ಸಾಧಕ ಭಾಧಕಗಳ ಕುರಿತು ರೈತರೊಂದಿಗೆ ಚರ್ಚೆ ನಡೆಸದೆ, ದಬ್ಬಾಳಿಕೆ ನಡೆಸಲು ಮುಂದಾಗಿದೆ. ಸರಕಾರ ಕೂಡಲೇ ಯೋಜನೆಯಿಂದ ಹಿಂದೆ ಸರಿಯಬೇಕು. ಅಧಿಸೂಚನೆಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,ಪ್ರಸ್ತಾಪಿತ ನಂದಿಹಳ್ಳಿ, ಮಲ್ಲಸಂದ್ರ, ವಸಂತ ನರಸಾಪುರ ಔಟರ್‍ರಿಂಗ್ ರೋಡ್‍ಗೆ 44 ಹಳ್ಳಿಗಳ ಸುಮಾರು 650 ಎಕರೆ ಫಲವತ್ತಾದ ಭೂಮಿಯ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆಯನ್ನು ರೈತರ ಒಪ್ಪಿಗೆ ಇಲ್ಲದೆ, ರೈತರೊಂದಿಗೆ ಮಾತುಕತೆ ನಡೆಸದೆ ಹೊರಡಿಸಲಾಗಿದೆ. ಇದರಲ್ಲಿ ಸುಮಾರು 750 ಕುಟುಂಬಗಳು ಹಣ್ಣ, ತರಕಾರಿ, ಹೂವು ಬೆಳೆಯುವುದರ ಜೊತೆಗೆ,ಅಡಿಕೆ,ತೆಂಗು ಇನ್ನಿತರ ತೋಟಗಾರಿಕಾ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ.ಸರಕಾರ ಯೋಜನೆಯ ಸೋಷಿಯಲ್ ಇಪ್ಯಾಕ್ಟ್ ಬಗ್ಗೆ ಸರ್ವೆ ನಡೆಸದೆ ಭೂಸ್ವಾಧೀನಕ್ಕೆ ಮುಂದಾಗಿದೆ.ಹಾಗಾಗಿ ಸರಕಾರ ಯೋಜನೆಯನ್ನು ಕೈಬಿಡಬೇಕು.ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ಅಕ್ಟೋಬರ್ 04 ರಿಂದ 06ರವರೆಗೆ ಜಾಗೃತಿ ಜಾಥಾ ಕೈಗೊಳ್ಳಲಾಗಿದೆ.ಅಲ್ಲದೆ ಅಕ್ಟೋಬರ್ 13 ರಂದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಔಟರ್ ರಿಂಗ್ ರಸ್ತೆಯ ಬಾಧಿತ ಗ್ರಾಮಗಳ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.

ಸರಕಾರ ಪ್ರಾಸ್ತಾಪಿತ ನಂದಿಹಳ್ಳಿ,ಮಲ್ಲಸಂದ್ರ,ವಸಂತನರಸಾಪುರ ಔಟರ್ ರಿಂಗ್‍ರಸ್ತೆಗೆ ಭೂ ಸ್ವಾಧೀನ ವಿರೋಧಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ.ಅಲ್ಲದೆ ಈಗಾಗಲೇ ಇರುವ ರಸ್ತೆಗಳನ್ನೇ ವಿಸ್ತರಿಸಿ, ಉಪಯೋಗಿಸುವಂತೆ ಹೊಸ ಪ್ರಸ್ತಾಪ ಕೈಬಿಡುವಂತೆ ಅಕ್ಷಪಣೆ ನೀಡಿದ್ದೇವೆ.ಅಲ್ಲದೆ ದಾಬಸ್‍ಪೇಟೆಯಿಂದ ಗುಬ್ಬಿಯವರೆಗೆ ಸುಮಾರು 120 ಅಡಿ ಅಗಲದ ನಕಾಸೆ ರಸ್ತೆಯಿದ್ದು,ಆ ರಸ್ತೆಯನ್ನು ಔಟರ್ ರಿಂಗ್ ರಸ್ತೆಗೆ ಬಳಸುವಂತೆ ಮನವಿ ಮಾಡಲಾಗಿತ್ತು. ಈಲ್ಲಾಧಿಕಾರಿಗಳು ಸ್ಥಳಪರಿಶೀಲನೆ ನಡೆಸುವ ಭರವಸೆ ನೀಡಿದ್ದರು.ಆದರೆ ಇದುವರೆಗೂ ಜಿಲ್ಲಾಧಿಕಾರಿಗಳು ಈ ಕುರಿತು ರೈತರೊಂದಿಗೆ ಮಾತನಾಡಿಲ್ಲ.ಹಾಗಾಗಿ ಮತ್ತೊಮ್ಮೆ ಜಿಲ್ಲಾಡಳಿತದ ಗಮನ ಸೆಳೆಯುವ ಸಲುವಾಗಿ ಅಕ್ಟೋಬರ್ 13 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎ.ಗೋವಿಂದರಾಜು ನುಡಿದರು.

ಎಐಕೆಕೆಎಂಎಸ್‍ನ ಎಸ್.ಎನ್.ಸ್ವಾಮಿ ಮಾತನಾಡಿ,2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಯೋಜನಾ ವ್ಯಾಪ್ತಿಗೆ ಒಳಪಡುವ ಶೇ70ರಷ್ಟು ರೈತರ ಒಪ್ಪಿಗೆ ಇಲ್ಲದೆ ಭೂಸ್ವಾಧೀನ ಮಾಡುವಂತಿಲ್ಲ.ಈ ಯೋಜನೆಯಿಂದ ತುಮಕೂರು ನಗರ ಸೇರಿದಂತೆ ಜಿಲ್ಲೆಗೆ ಆಹಾರದ ಅಭದ್ರತೆ ಉಂಟಾಗಲಿದೆ.ಹಾಗಾಗಿ ಶಾಶಕರು, ಸಂಸದರು, ಮಂತ್ರಿಗಳು ರೈತರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *