ತುಮಕೂರು: ಇತ್ತೀಚಿನ ಚುನಾವಣೆಗಳಲ್ಲಿ ಜಾತಿ ತಾಂಡವವಾಡುತ್ತಿದೆ. ಕೆಂಪೇಗೌಡರ ಬಗ್ಗೆ ಸಮುದಾಯದ ಯುವಕರಲ್ಲಿ ನಿರ್ಲಕ್ಷ ಕಾಣುತ್ತಿದೆ.ಸರಕಾರ ಸಹ ಎಲ್ಲಾ ವರ್ಗದ ಮಹನೀಯರ ಜಯಂತಿಯನ್ನು ಎಲ್ಲಾ ಸಮುದಾಯದ ಜನರು ಸೇರಿ ಆಚರಿಸುವಂತಹ ವಾತಾವರಣ ಸೃಷ್ಟಿಸಬೇಕು.ಒಬೊಬ್ಬ ನಾಯಕರನ್ನು ಒಂದೊಂದು ಜಾತಿಗೆ ಸಿಮೀತ ಮಾಡಬಾರದು ಎಂದು ಎಂದು ಮಾಜಿ ಶಾಸಕ ಹೆಚ್.ನಿಂಗಪ್ಪ ಹೇಳಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ,ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್, ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜನ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಪ್ರಭು ಕೆಂಪೇಗೌಡರು ಜನಸಮುದಾಯದ ಒಳಿತಿಗಾಗಿ ನೂರಾರು ಕೆರೆ ಕಟ್ಟೆಗಳನ್ನು ಕಟ್ಟಿದವರು, ಐದುನೂರು ವರ್ಷಗಳ ಹಿಂದೆ ಪ್ರತಿಯೊಂದು ಜಾತಿ, ಸಮುದಾಯಕ್ಕೂ ಸಮಾನ ಅವಕಾಶಗಳನ್ನು ನೀಡಿ ಜಾತ್ಯಾತೀತರಾಗಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಓ ಪ್ರಭು.ಜಿ. ತಮಗೆ ದೊರೆತ 46 ವರ್ಷಗಳ ಆಡಳಿತದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಇಡೀ ವಿಶ್ವವೇ ತಿರುಗಿ ನೋಡುವಂತೆ ಬೆಂಗಳೂರು ನಗರವನ್ನು ಕಟ್ಟಿದ ನಾಡ ಪ್ರಭು ಕೆಂಪೇಗೌಡರು ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ಅಭಿಪ್ರಾಯಪಟ್ಟರು.
ನಾಡಪ್ರಭು ಕೆಂಪೇಗೌಡರು ಒಳ್ಳೆಯ ಆಡಳಿತಗಾರರಷ್ಟೇ ಅಲ್ಲ.ಸಮಾಜ ಸುಧಾರಕರು ಹೌದು.ಅಂದಿನ ಕಾಲದಲ್ಲಿದ್ದ ಮೂಡನಂಬಿಕೆಗಳ ವಿರುದ್ದ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು.1532ರಲ್ಲಿ ನಗರ ನಿರ್ಮಾಣಕ್ಕೆ ಅನುಮತಿ ಸಿಕ್ಕ ನಂತರ ಎಲ್ಲಾ ಕಾಯಕ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಬಳೆಪೇಟೆ, ತರಗುಪೇಟೆ, ಅಕ್ಕಿಪೇಟೆ ಹೀಗೆ ವಿಂಗಡಿಸಿ, ಅವರ ವ್ಯಾಪಾರ ವ್ಯವಹಾರಕ್ಕೆ ಪ್ರತ್ಯೇಕ ಜಾಗಗಳನ್ನು ಗುರುತಿಸಿದ್ದರು.ಇಂದು ಬೆಂಗಳೂರು ನಗರ ಇಡೀ ಭಾರತದ ಐಟಿ, ಬಿಟಿ ಕ್ಷೇತ್ರಕ್ಕೆ ಶೇ60-70ರಷ್ಟು ಆದಾಯವನ್ನು ತಂದುಕೊಡುತ್ತಿದೆ.ರಾಷ್ಟ್ರದ ಎರಡನೇ ಅತಿ ದೊಡ್ಡ ಆದಾಯ ತಂದುಕೊಡುವ ರಾಜ್ಯವಾಗಿರುವ ಕರ್ನಾಟಕದ ಬೆಳವಣಿಗೆಯಲ್ಲಿ ಬೆಂಗಳೂರಿನ ಪಾತ್ರ ಮಹತ್ವದದ್ದಾಗಿದೆ. ಇಸ್ರೋ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವು ಮಹತ್ವದ ಮೈಲಿಗಲ್ಲನ್ನು ಬೆಂಗಳೂರು ಹೊಂದಿದೆ.ಇದರ ಹಿಂದಿನ ಶಕ್ತಿ ಕೆಂಪೇಗೌಡರು ಎಂದು ಸಿಇಓ ಪ್ರಭು.ಜಿ.ತಿಳಿಸಿದರು.
ಕೌಶಲ್ಯಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ಕರ್ನಾಟಕ ಆಡಳಿತ, ಅರ್ಥಿಕತೆ, ಆರೋಗ್ಯ,ವಾಸ್ತುಶಿಲ್ಪ, ಶಿಕ್ಷಣ ಕ್ಷೇತ್ರಕ್ಕೆ ಕೆಂಪೇಗೌಡರ ಕೊಡುಗೆ ಅಮೂಲ್ಯ. ತುಮಕೂರು ನಗರದ ಬಿ.ಜಿ.ಎಸ್ ವೃತ್ತದಲ್ಲಿದ್ದ ನಾಮಫಲಕ ತೆಗೆಯಲಾಗಿದೆ. ಹೊಸದಾಗಿ ನಾಮಫಲಕ ಹಾಕುವುದರ ಜೊತೆಗೆ, ಪ್ರತಿಮೆ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು.ಹಾಗೆಯೆ ಕೆಂಪೇಗೌಡರ ಕುರಿತು ಮುಂದಿನ ಪೀಳಿಗೆಗೆ ಮಾಹಿತಿ ನೀಡಲು ತುಮಕೂರು ವಿವಿಯಲ್ಲಿ ಕೆಂಪೇಗೌಡರ ಹೆಸರಿನ ಅಧ್ಯಯನ ಪೀಠ ತೆರೆಯಬೇಕು.ಹಾಗೆಯೇ ನಾಡಪ್ರಭು ಕೆಂಪೇಗೌಡರು ಹಾಗೂ ಶ್ರೀಬಾಲಗಂಗಾಧರ ನಾಥಸ್ವಾಮಿಜಿಗಳ ಕುರಿತ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನು ಎಲ್ಲಾ ಶಾಲಾ, ಕಾಲೇಜುಗಳ ಮಕ್ಕಳಿಗೂ ದೊರೆಯುವಂತೆ ಮಾಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಹನುಮಂತರಾಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಇತ್ತೀಚಿಗೆ ಕೇಂದ್ರ ಸರಕಾರದ ಪ್ರಶಸ್ತಿ ಪಡೆದ ಸಿಇಓ ಪ್ರಭು.ಜಿ.ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ನಗರ ಬಿ.ಜಿ.ಎಸ್ ವೃತ್ತದಿಂದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಕೆಂಪೇಗೌಡರ ಭಾವಚಿತ್ರದ ಮೆರವಣಿಗೆ ನಡೆಯಿತು.ಮೆರವಣಿಗೆಗೆ ಶಾಸಕ ಜಿ.ಬಿ.ಜೋತಿಗಣೇಶ್,ಎಡಿಸಿ ಡಾ.ಎನ್.ತಿಪ್ಪೇಸ್ವಾಮಿ ಚಾಲನೆ ನೀಡಿದರು.
ವೇದಿಕೆಯಲ್ಲಿ ತುಮಕೂರು ಉಪವಿಭಾಗಾಧಿಕಾರಿ ನಾಹಿದಾ ಜಮ್ಹ್ ಜಮ್ಹ್,ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸುರೇಶಕುಮಾರ್, ಭೈರವೇಶ್ವರ ಬ್ಯಾಂಕಿನ ಚಿಕ್ಕರಂಗಣ್ಣ,ಕೆಂಪೇಗೌಡ ಬ್ಯಾಂಕಿನ ಲಿಂಗಪ್ಪ, ಪಾಲಿಕೆ ಮಾಜಿ ಸದಸ್ಯರಾದ ಟಿ.ಆರ್.ನಾಗರಾಜು, ಧರಣೇಂದ್ರಕುಮಾರ್,ಮನೋಹರಗೌಡ, ದೊಡ್ಡಲಿಂಗಪ್ಪ ಸೇರಿದಂತೆ ಸಮುದಾಯದ ಹಿರಿಯರು ಪಾಲ್ಗೊಂಡಿದ್ದರು.