ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡಬೇಕೆಂಬ ಒಮ್ಮತದ ತೀರ್ಮಾನ ಕೈಗೊಂಡಿರುವುದಾಗಿ ಜೆಡಿಎಸ್ ರಾಜ್ಯ ಮುಖ್ಯ ಸಂಚಾಲಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಮ್ಮ ನಾಯಕರುಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡುವಂತೆ ಕಾರ್ಯಕರ್ತರು, ಮುಖಂಡರು ಒತ್ತಾಯಿಸುತ್ತಿರುವುದಾಗಿ ತಿಳಿಸಿದ ಅವರು, ಇಂದಿಗೂ ಜೆಡಿಎಸ್ ಮತಗಳಿಕೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗಿಂತ ಅಧಿಕವಿದ್ದು, ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿಯವರು ಸ್ಪರ್ಧಿಸಿದಲ್ಲಿ ಗೆಲುವು ನಮ್ಮದಾಗಲಿದೆ ಎಂದರು.
ಈ ಹಿನ್ನಲೆಯಲ್ಲಿ ತುಮಕೂರು ಲೋಕಸಭೆಯನ್ನು ನಾವೇ ಉಳಿಸಿಕೊಂಡು ಕುಮಾರಸ್ವಾಮಿ ಸ್ಪರ್ಧಿಸುವ ಪರ್ಮಾನ್ ಪಕ್ಷದ ಮುಖಂಡರು, ಕಾರ್ಯಕರ್ತರು ಹೊರಡಿಸಿದ್ದೇವೆ ಎಂದು ಹೇಳಿದರು.ಮೈತ್ರಿ ಅಭ್ಯರ್ಥಿ ಯಾರೇ ಆದರೂ ಸಂಪೂರ್ಣವಾಗಿ ಬೆಂಬಲಿಸುವುದಾಗಿ ತಿಳಿಸಿದರು.
ಚಿಕ್ಕನಾಯಕನಹಳ್ಳಿ ಶಾಸಕರು ಹಾಗೂ ಲೋಕಸಭಾ ಚುನಾವಣೆಯ ಜೆಡಿಎಸ್ ಜಿಲ್ಲಾ ಉಸ್ತುವಾರಿಯಾದ ಸಿ.ಬಿ. ಸುರೇಶ್ಬಾಬು ಮಾತನಾಡಿ ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ ಸ್ಪರ್ಧೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದನ್ನು ವರಿಷ್ಠರ ಮುಂದಿಡಲಾಗುವುದು, ಯಾವುದೇ ಪಕ್ಷದ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರೂ ಬೆಂಬಲಿಸುತ್ತೇವೆ ಎಂದು ಹೇಳಿದರು.
ಜೆ.ಸಿ.ಮಾಧುಸ್ವಾಮಿ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಿ.ಬಿ.ಸುರೇಶ್ ಬಾಬು ಸ್ಪಷ್ಟಪಡಿಸಿದರು. ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ಶಾಸಕರೇ ನಮ್ಮ ಜೊತೆ ಹಂಚಿಕೊಂಡಿದ್ದಾರೆ ಎಂದು ಶಾಸಕ ಸುರೇಶ್ಬಾಬು ಹೇಳಿದರು.
ಇತ್ತೀಚೆಗೆ ಜೆಡಿಎಸ್ ಸೇರ್ಪಡೆಯಾದ ಜ್ಯೋತಿ ಪ್ರಕಾಶ್ ಮಿರ್ಜಿ ಮಾಜಿ ಐಪಿಎಸ್ ಅಧಿಕಾರಿ ಮಾತನಾಡಿ ಪಕ್ಷದ ತೀರ್ಮಾನವೇ ನನ್ನ ತೀರ್ಮಾನ ಎಂದು ಹೇಳಿದರು.
ಜಿಲ್ಲಾಧ್ಯಕ್ಷರಾದ ಆರ್.ಸಿ.ಆಂಜಿನಪ್ಪ ಮಾತನಾಡಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ಗಳಲ್ಲಿ ಪಕ್ಷದ ಸಭೆ ನಡೆಸಿ ಪದಾಧಿಕಾರಿಗಳ ಬದಲಾವಣೆ ಮಾಡಲಾಗುವುದು, ಕಾಂಗ್ರೆಸ್ ಕುತಂತ್ರದಿಂದ ದೇವೇಗೌಡರನ್ನು ಸೋಲಿಸಿರುವುದನ್ನು ಈ ಬಾರಿ ತೀರಿಸಿಕೊಳ್ಳಲು ತೀರ್ಮಾನ ಮಾಡಿರುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ಸುಧಾಕರ್ಲಾಲ್, ಎ.ಗೋವಿಂದರಾಜು, ಶಾಂತಕುಮಾರ್.ಕೆ.ಟಿ., ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಟಿ.ಆರ್. ನಾಗರಾಜು, ಕೊಂಡವಾಡಿ ಚಂದ್ರಶೇಖರ್, ಲಲಿತಮ್ಮ, ಭಾಗ್ಯಮ್ಮ, ಮೆಡಿಕಲ್ ಮಧುಸೂಧನ್ ಎಸ್.ಆರ್.ಗೌಡ, ಶಿರಾದ ರುದ್ರೆಶ್, ಮುಂತಾದವರು ಉಪಸ್ಥಿತರಿದ್ದರು.