ತುಮಕೂರು- ಪಕ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ಬಹುಮತ ಬಂದರೆ ದಲಿತರನ್ನು ಮುಖ್ಯಮಂತ್ರಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ದಿಬ್ಬೂರಿನಲ್ಲಿ ವಾಸ್ತವ್ಯ ಹೂಡಿ ಬೆಳಿಗ್ಗೆ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾರು ಮುಖ್ಯಮಂತ್ರಿಯಾಗಬಾರದೆ ಅವರೇನು ಅಸ್ಪøಶ್ಯರೇ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ಮೀಸಲಾತಿ ಇಲ್ಲದೇ ಇದ್ದಾಗಲೂ ದಲಿತರನ್ನು ಮುಖಂಡರನ್ನಾಗಿ ಮಾಡಿದ್ದರು. ಅದನ್ನು ನಾವ್ಯಾರೂ ಮರೆಯಲು ಸಾಧ್ಯವಿಲ್ಲ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ದಲಿತ ಕುಟುಂಬದ ಮಹಿಳೆಗೆ ಚಿಕಿತ್ಸೆ ಕೊಡಿಸಿ ನಮ್ಮ ಮನೆಯಲ್ಲಿಯೇ ಇರಿಸಿಕೊಂಡಿದ್ದೆ. ಈ ಕೆಲಸ ಯಾವ ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.
ದಲಿತರ ಬಗ್ಗೆ ಕಾಳಜಿ ಇದೆ ಎಂದು ಮೇಲ್ನೋಟಕ್ಕೆ ತೋರ್ಪಡಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರು, ಅಸ್ಪೃಶ್ಯರ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದರ ಬಗ್ಗೆ ದಾಖಲೆ ಕೊಡುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾವು ಮನೆಯಲ್ಲಿ ಕುಳಿತುಕೊಂಡಿದ್ದರೂ ಚುನಾವಣೆಯಲ್ಲಿ 50 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಆದರೆ ನಮಗೆ ಅದು ಬೇಕಾಗಿಲ್ಲ. ಸಂಪೂರ್ಣ ಬಹುಮತ ಬಂದು ನಮ್ಮ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚಿಸಬೇಕು. ಆಗ ಮಾತ್ರ ನಾಡಿನ ಜನರ ಸಂಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದರು.
ಚುನಾವಣೆ ಇನ್ನು 4-5 ತಿಂಗಳು ಬಾಕಿ ಇದೆ. ಹಾಗಾಗಿ ಮುಂದಿನ ನಾಲ್ಕು ತಿಂಗಳು ಬಹಳ ಸೂಕ್ಷ್ಮದ ದಿನಗಳು. ಯಾರೂ ಕೂಡಾ ಮೈ ಮರೆಯಬಾರದುಯ ಮನೆ ಮನೆಗೆ ಹೋಗಿ ಪಕ್ಷದ ಕಾರ್ಯಕ್ರಮದ ಬಗ್ಗೆ ತಿಳಿಸಿ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿರುವುದಾಗಿ ಹೇಳಿದರು.
ಈಗ ಯಾವ್ಯಾವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇನೋ ಅಲ್ಲಿ ಯಾವುದೇ ಗೊಂದಲ ಇಲ್ಲ. ಈಗಾಗಲೇ 14 ಕ್ಷೇತ್ರಗಳ ಪೈಕಿ 13 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇನ್ನೊಂದು ಕ್ಷೇತ್ರ ಮಾತ್ರ ಬಾಕಿಯಿದೆ ಎಂದ ಅವರು, ಒಂದೊಂದು ಕಡೆ ಲೋಪದೋಷಗಳು ಆದಾಗ ಮಾತ್ರ ಅಂತಹ ಕಡೆಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಆಗಬಹುದು ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ ಅಷ್ಟೆ. ಅದನ್ನು ಹೊರತುಪಡಿಸಿದರೆ ಅಭ್ಯರ್ಥಿಗಳ ವಿಚಾರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಡೆಗಣಿಸಿದರೆ ಮಾತ್ರ ಅಂತಹ ಅಭ್ಯರ್ಥಿಗಳ ಬದಲಾವಣೆಯಾಗುತ್ತದೆ. ನಮ್ಮದು ಕಾರ್ಯಕರ್ತರ ಪಕ್ಷ. ಹಾಗಾಗಿ ಕಾರ್ಯಕರ್ತರಿಗೆ ಮೊದಲ ಆದ್ಯತೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ನಾವು ಕುತಂತ್ರದಿಂದ ಗೆಲ್ಲುವ ಅವಶ್ಯಕತೆ ಇಲ್ಲ. ನಾಡಿನ ಜನರ ಪ್ರೀತಿ, ವಿಶ್ವಾಸದಿಂದ ಗೆಲ್ಲಬೇಕಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಪ್ರತಿಯೊಂದು ಕ್ಷೇತ್ರದ ಬಗ್ಗೆಯೂ ಪ್ರತಿ ತಿಂಗಳು ವರದಿ ಬರುತ್ತದೆ. ಯಾರು ಹೇಗೆ ಕೆಲಸ ಮಾಡುತ್ತಾರೆ, ನಾವು ವಹಿಸಿರುವ ಜವಾಬ್ದಾರಿಗಳನ್ನು ಯಾರು ಸರಿಯಾಗಿ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಇಂಚಿಂಚೂ ಮಾಹಿತಿ ನಮಗೆ ತಿಳಿಯುತ್ತದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಜೆಡಿಎಸ್ ಪಕ್ಷಕ್ಕೆ ಬರುವ ಸನ್ನಿವೇಶ ಇಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಪಾಪಾ ಅವರಿಗೆ ಗೊತ್ತಿರುತ್ತದೆ ಎಂದ ಅವರು, ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷದವರ ಬಗ್ಗೆ ನೆಗೆಟಿವ್ ಮಾತುಗಳನ್ನಾಡುತ್ತಲೇ 70 ಸ್ಥಾನಕ್ಕೆ ಬಂದರು. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಭಾಗ್ಯಗಳ ಸರಮಾಲೆಯನ್ನು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲಿಲ್ಲ ಎಂದು ಟೀಕಿಸಿದರು.
ಕಳೆದ ಬಾರಿ ಸೋಲಲು ಕಾರಣವೇನು ಎಂಬ ಪತ್ರಕರ್ತರ ಪ್ರಶ್ನೆಗೆ, ಸಣ್ಣಪುಟ್ಟ ಲೋಪದೋಷ ಇದ್ದರೆ ಅದನ್ನು ಸರಿಪಡಿಸಿಕೊಂಡು ಈ ಬಾಗಿ ಆ ರೀತಿಯ ಲೋಪದೋಷಗಳಾಗದಂತೆ ಎಚ್ಚರಿಕೆ ವಹಿಸುವುದಾಗಿ ಅವರು ಹೇಳಿದರು.
ಈ ಪಂಚರತ್ನ ರಥಯಾತ್ರೆ ಬಗ್ಗೆ ನಿನ್ನೆ-ಮೊನ್ನೆ ತೀರ್ಮಾನ ಮಾಡಿಲ್ಲ. ಕೋವಿಡ್ಗಿಂತಲೂ ಮೊದಲೇ ನಿರ್ಧಾರ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಯಾವ ಹೆಸರು ಇಡಬೇಕು ಎಂದು ಯೋಚಿಸಿ ಪಂಚರತ್ನ ಎಂದು ಹೆಸರು ಇಡಲಾಯಿತು. ಪಂಚಭೂತಗಳೇ ನಮ್ಮ ಭೂಮಿಯನ್ನು ಕಾಪಾಡಿರುವುದು. ದೇಹಕ್ಕೆ ಪಂಚೇಂದ್ರಿಯಗಳು ಎಷ್ಟು ಮುಖ್ಯವೋ ಅದೇ ರೀತಿ ಪಂಚರತ್ನ ಕಾರ್ಯಕ್ರಮಗಳು ಅಷ್ಟೇ ಮುಖ್ಯ ಎಂದರು.
ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ. ತಮಿಳುನಾಡು, ಕೇರಳ ಗಡಿ ಭಾಗದಲ್ಲೂ ಸಮಸ್ಯೆಗಳನ್ನು ಹೇಳುತ್ತಾರೆ. ರಾಜಕೀಯದ ಉದ್ದೇಶಕ್ಕಾಗಿ ಈ ರೀತಿಯ ಹುನ್ನಾರಗಳನ್ನು ಮಾಡುತ್ತಿದ್ದಾರೆ. ನಮ್ಮ ನೆಲ, ಜಲ ಕಾಪಾಡುವ ಬಗ್ಗೆ ಎಲ್ಲರೂ ಚಿಂತಿಸಲೇಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಜಿ. ಆಂಜಿನಪ್ಪ, ಮುಖಂಡರಾದ ಗೋವಿಂದರಾಜು, ಎಸ್.ಆರ್. ಗೌಡ, ಪ್ರೆಸ್ ರಾಜಣ್ಣ, ಟಿ.ಆರ್. ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.