ವೃತ್ತಿ ಧರ್ಮದಲ್ಲಿ ಬದ್ಧತೆ ಹೊಂದಿದ್ದ ಪತ್ರಕರ್ತೆ ಭುನೇಶ್ವರಿರವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ತುಮಕೂರು : ಜನವರಿ 31ರಂದು ಅಗಲಿದ ಹಿರಿಯ ಪತ್ರಕರ್ತೆ ಭುವನೇಶ್ವರಿ ಅವರಿಗೆ ನಗರದ ಕನ್ನಡ ಭವನದಲ್ಲಿಂದು ಗಣ್ಯರು, ಸಹೋದ್ಯೋಗಿಗಳು ನುಡಿ ನಮನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ ಕ್ರಿಯಾಶೀಲ ವರದಿಗಾರರಾಗಿದ್ದ ಭುವನೇಶ್ವರಿ ಅವರ ಅಗಲಿಕೆ ಜಿಲ್ಲೆಯ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ರಾಷ್ಟ್ರೀಯ ಪತ್ರಿಕೆಯಲ್ಲಿ ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ. ಅವರ ವಸ್ತುನಿಷ್ಠ ವರದಿಗಾರಿಕೆಯಿಂದ ರಾಷ್ಟ್ರೀಯ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಎಂದು ಭಾವಿಸುತ್ತೇನೆ. ಅನಿರೀಕ್ಷಿತವಾಗಿ ನಮ್ಮೆಲ್ಲರನ್ನು ಅಗಲಿ ಯುವ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿರುವುದು ದುಃಖದ ಸಂಗತಿ. ಭಗವಂತನು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವ ಮೂಲಕ ನುಡಿ ನಮನ ಸಲ್ಲಿಸಿದರು.

 ಪರಿಸರವಾದಿ ಯತಿರಾಜು ಮಾತನಾಡಿ ವೃತ್ತಿ ಧರ್ಮದಲ್ಲಿ ಬದ್ಧತೆ ಹೊಂದಿದ್ದ ದಿವಂಗತ ಭುವನೇಶ್ವರಿಯವರು ಮಾಧ್ಯಮ ಕ್ಷೇತ್ರವನ್ನು ಶ್ರೀಮಂತವಾಗಿಸಿದವರಲ್ಲಿ ಒಬ್ಬರಾಗಿದ್ದರು. ಆಂಗ್ಲ ಪತ್ರಿಕೆಗಳಲ್ಲಿ ಸ್ಥಳೀಯ ಸುದ್ದಿಗಳಿಗೆ ಅವಕಾಶ ಕಡಿಮೆ. ಇವರ ಉತ್ತಮ ಬರಹದಿಂದ ವಾರಕ್ಕೆರಡು ಲೇಖನಗಳು ಹಿಂದೂ,  ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು ಎಂದು ಸ್ಮರಿಸಿದರು. 

ಹಿರಿಯ ಪತ್ರಕರ್ತರಾದ ಉಗಮ ಶ್ರೀನಿವಾಸ್ ಮಾತನಾಡಿ, ವಸ್ತುನಿಷ್ಠ ವರದಿಗಳ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಪರವಾಗಿ ನಿಲ್ಲುತ್ತಿದ್ದ ವ್ಯಕ್ತಿತ್ವ ಅವರದು. ತಳ ಸಮುದಾಯ ಶೋಷಿತರ ಪರವಾಗಿ ವಿಶೇಷ ಲೇಖನಗಳ ಮೂಲಕ ಆಡಳಿತಶಾಹಿ ಸೆಳೆಯುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದ ಭುವನೇಶ್ವರಿ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಅವರ ಹೆಸರಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಸ್ಥಾಪಿಸಬೇಕೆಂದು ನೀಡಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮನವಿ ಮಾಡಿದರು.

ಭುವನೇಶ್ವರಿ ಅವರು ಜಿಲ್ಲೆಯ ಏಕೈಕ ಮಹಿಳಾ ಪತ್ರಕರ್ತೆಯಾಗಿ ಉತ್ತಮ ವರದಿಗಳನ್ನು ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಅವರ ಅಗಲಿಕೆಯಿಂದ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ನೋವುಂಟಾಗಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ 10ಸಾವಿರ ರೂ. ನೀಡಲಾಗಿದ್ದು, ರಾಜ್ಯ ಸಂಘದಿಂದಲೂ ನೀಡಲಾಗುವುದು. ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುವ ಬಗ್ಗೆ ಕುಟುಂಬದವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ತಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕಿನುದ್ದಕ್ಕೂ ಸವಾಲುಗಳನ್ನು ಮೆಟ್ಟಿ ನಿಂತ ಧೀಮಂತ ಪರ್ತಕರ್ತೆಯಾಗಿದ್ದ ಭುವನೇಶ್ವರಿ ಅಪ್ಪಟ ಕರ್ಮಯೋಗಿ ಎಂದು ಹಿರಿಯ ಪತ್ರಕರ್ತೆ ರಶ್ಮಿ ಬಣ್ಣಿಸಿದರು.

ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿಬಂತಿ ಪದ್ಮನಾಭ ಮಾತನಾಡಿ, ಭುವನೇಶ್ವರಿ ಅವರು ಇತರರಿಗೆ ಆದರ್ಶಪ್ರಾಯವಾಗಿದ್ದರು. ಅವರ ಅಗಲಿಕೆ ಮನಸ್ಸಿಗೆ ಅತೀವ ನೋವು ತಂದಿದೆ ಎಂದು ತಮ್ಮ ಸಂತಾಪ ವ್ಯಕ್ತಪಡಿಸಿದರು.

ಈ ಸಂದರ್ಭ ದಿ.ಭುವನೇಶ್ವರಿ ಅವರ ಪತಿ ಪ್ರಕಾಶ್, ಪುತ್ರ ಹಾಗೂ ಅವರ ತಂದೆ, ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ, ಜಿಲ್ಲೆ ಪತ್ರಕರ್ತರಾದ ಚಂದ್ರಮೌಳಿ, ಜಗನ್ನಾಥ್ ಕಾಳೇನಹಳ್ಳಿ, ಸಾ.ಚಿ. ರಾಜಕುಮಾರ್, ನಾಗೇಂದ್ರ, ಸೇರಿದಂತೆ ಅಪಾರ ಸ್ನೇಹಿತರು, ಸಹದ್ಯೋಗಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *