ತುಮಕೂರು : ತುಮಕೂರು ಜಿಲ್ಲೆಯ ದಸರಾ ಪೂರ್ವ ಸಿದ್ಧತಾ ಸಭೆಯಲ್ಲಿ ದಸರಾ ಸುದ್ದಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಡಾ.ಜಿಪರಮೇಶ್ವರ್ ಅವರು ಪತ್ರಕರ್ತರ ಕುರಿತಾಗಿ ತೀವ್ರ ಎಚ್ಚರಿಕೆ ವಾರ್ನಿಂಗ್ ಹಿಂಪಡೆಯುವಂತೆ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಒತ್ತಾಯಿಸಿದೆ.
ನೀವು ನೀಡಿದ ಹೇಳಿಕೆ ಇಡೀ ಮಾಧ್ಯಮ ಸಮೂಹಕ್ಕೆ ಬೇಸರ ತರಿಸಿದೆ. ನಾವೆಲ್ಲರೂ ಪತ್ರಕರ್ತರ ಹಿತೈಷಿಗಳೆಂದು ಭಾವಿಸಿರುವ ತಮ್ಮಂತಹ ವಿದ್ಯಾವಂತ, ಸಂಭಾವಿತ ಸಚಿವರಿಂದ ಈ ಹೇಳಿಕೆ ಬಂದಿದ್ದು ನಿಜಕ್ಕೂ ಅನಿರೀಕ್ಷಿತ, ಅಚ್ಚರಿಯ ಸಂಗತಿ.ಬಳಿಕ ತಾವೂ ತಮಾಷೆಗೆ ವಾರ್ನಿಂಗ್ ಮಾತನ್ನು ಆಡಿದ್ದಾಗಿ ಸಮಾಜಾಯಿಷಿ ನೀಡಿದ್ದರೂ, ಪ್ರಜಾಪ್ರಭುತ್ವ ದ ನಾಲ್ಕನೇ ಅಂಗವೆಂದು ಭಾವಿಸಿರುವ ಪತ್ರಿಕಾ ರಂಗದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂದೇ ರಾಜ್ಯದೆಲ್ಲೆಡೆ ಖಂಡನೆಗಳು ವ್ಯಕ್ತವಾಗುತ್ತಿವೆ ಎಂದು ಸಂಘದ ಅಧ್ಯಕ್ಷರಾದ ಚಿ.ನಿ.ಪುರುಷೋತ್ತಮ್ ಮತ್ತು ಪ್ರಧಾನ ಕಾರ್ಯದರ್ಶಿ ರಘುರಾಮ್ ಅವರು ಗೃಹ ಸಚಿವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ದಶಕಗಳ ಹಿಂದೆ ಕೊರಟಗೆರೆ ಕ್ಷೇತ್ರದ ರಸ್ತೆ ದುರಸ್ತಿಗೆ ಆಗ್ರಹಿಸಿ ನಡೆಸಿದ ಹೋರಾಟದ ವೇಳೆ ಮಾತಿನ ಭರದಲ್ಲಿ ಆಗ ಲೋಕೋಪಯೋಗಿ ಸಚಿವರಾಗಿದ್ದ ಸಿ.ಎಂ.ಉದಾಸಿ ಅವರನ್ನು ಟೀಕಿಸಿದಕ್ಕೆ, ತಾವೇ ಮನನೊಂದು ಸಂಜೆಯಷ್ಟರಲ್ಲಿ ಹಿರಿಯ ಸಚಿವರಿಗೆ ನಾನು ಆ ರೀತಿ ಹೇಳಬಾರದಿತ್ತು ಎಂದು ಕ್ಷಮೆಯಾಚಿಸುವ ಔದಾರ್ಯ ಪ್ರದರ್ಶಿಸಿದ್ದೀರಿ.
ಅಷ್ಟು ಸೂಕ್ಷ್ಮ ಸಂವೇದಿಯಾದ ತಾವೂ ಪ್ರಸಕ್ತ ಪತ್ರಕರ್ತರಿಗೆ ಸುದ್ದಿ ಮಾಡುವ ವಿಚಾರದಲ್ಲಿ ಎಚ್ಚರಿಕೆ ಪದವನ್ನು ಪ್ರಯೋಗಿಸಿರುವುದನ್ನು ಕೆಯುಡಬ್ಲ್ಯೂಜೆ ಜಿಲ್ಲಾ ಸಂಘ ಖಂಡಿಸುತ್ತದೆ. ಹಾಗೂ ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಸಂಪಾದಕರ ಸಂಘ ಖಂಡನೆ
ತುಮಕೂರು ದಸರಾ ಉತ್ಸವವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪತ್ರಕರ್ತರಿಗೆ ವಾರ್ನಿಂಗ್ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಹೇಳಿಕೆಗೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ತುಮಕೂರು ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸಿದ್ದು, ಕೂಡಲೇ ಸಚಿವ ಪರಮೇಶ್ವರ್ ಅವರು ಪತ್ರಕರ್ತರ ಕ್ಷಮೆಯಾಚನೆಗೆ ಆಗ್ರಹಿಸಿದೆ.
ಈ ಕುರಿತು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಜಿ.ಕರುಣಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್.ಮಂಜುನಾಥ್ ಗೌಡ, ಜಿಲ್ಲಾ ಉಪಾಧ್ಯಕ್ಷ ಪಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್ ಕುಮಾರ್ ಸಿ.ಎನ್ ಅವರು ಸೋಮವಾರ (ಆ.18) ಪತ್ರಿಕಾ ಪ್ರಕಟಣೆ ನೀಡಿ ಗೃಹ ಸಚಿವರ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.
ಗೃಹ ಸಚಿವರು ತುಮಕೂರು ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟು ಕೆಲಸ ಮಾಡಿಸುವುದು ಬಿಟ್ಟು, ತಪ್ಪು ಒಪ್ಪುಗಳನ್ನು ಎತ್ತಿ ಹಿಡಿಯುವ ಪತ್ರಕರ್ತರಿಗೆ ವಾರ್ನಿಂಗ್ ಕೊಡುವುದು ಎಷ್ಟು ಸಮಂಜಸವೆಂದು ಪ್ರಶ್ನೆ ಮಾಡಿರುವ ಸಂಘದ ಪದಾಧಿಕಾರಿಗಳು ಗೃಹ ಸಚಿವರ ಈ ನಡುವಳಿಕೆ ಖಂಡನೀಯವೆಂದಿದ್ದಾರೆ.
ಸಂವಿಧಾನದ ನಾಲ್ಕನೇ ಅಂಗವಾಗಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಅದೇ ಸಂವಿಧಾನದಡಿಯಲ್ಲಿ ನೀವು ಕಾರ್ಯನಿರ್ವಹಿಸುತ್ತಿದ್ದೀರಿ. ನೀವು ಸರಿಯಾಗಿ ಕೆಲಸ ಮಾಡಿದಾಗ ಹೊಗಳಿ ಬರೆದಿದ್ದೇವೆ. ತಪ್ಪು ಮಾಡಿದಾಗ ತಪ್ಪು ಎಂದು ಬರೆದಿದ್ದೇವೆ. ನೀವು ತಪ್ಪು ಮಾಡಿದರೂ ಹೊಗಳಿ ಬರೆಯಬೇಕು ಎಂಬ ನಿಮ್ಮ ವಾರ್ನಿಂಗ್ ಸರಿಯಾದ ಕ್ರಮವಲ್ಲ. ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ. ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿದ್ದು, ಈ ಬಗ್ಗೆ ಗಮನಹರಿಸಿ ಅಧಿಕಾರಿಗಳಿಗೆ ಚಾಟಿ ಬೀಸಿ, ಪತ್ರಕರ್ತರಿಗೆ ವಾರ್ನಿಂಗ್ ಕೊಡಲು ಬರಬೇಡಿ, ನಿಮ್ಮ ವಾರ್ನಿಂಗ್ ಹೇಳಿಕೆಯನ್ನು ವಾಪಸ್ ಪಡೆದು ಪತ್ರಕರ್ತರ ಕ್ಷಮೆಯಾಚಿಸಬೇಕೆಂದು ಸಚಿವರಿಗೆ ಒತ್ತಾಯಿಸಿದ್ದಾರೆ.
ಇನ್ನು ಪರಮೇಶ್ವರ್ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವ ವಿ.ಸೋಮಣ್ಣ ಅವರೂ ಸಹ ಇದಕ್ಕೆ ಹೊರತಾಗಿಲ್ಲ, ರಾಜಕಾರಣಿಗಳು ಯಾವತ್ತೂ ರಾಜಕಾರಣಿಗಳನ್ನು ಬಿಟ್ಟುಕೊಡುವುದಿಲ್ಲ. ಹಾಗಾಗಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ತುಮಕೂರು ಜಿಲ್ಲಾ ಘಟಕವು ಸಚಿವರ ವರ್ತನೆಯನ್ನು ಖಂಡಿಸಿದೆ.