ತುಮಕೂರು: ಔನ್ನತ್ಯದ ನೆಲೆಯಲ್ಲಿ ಗೋಪಾಲನೆಯ ವೃತ್ತಿಯನ್ನು ಗೌರವಿಸುವ ಸಲುವಾಗಿ ಗಣೆಪದ, ಕಾವ್ಯಗಳ ಮೂಲಕ ಗೋವಿನ ಪಾಲನೆ, ಪೋಷಣೆಯಲ್ಲಿ ನೆಲಮೂಲ ಸಂಸ್ಕøತಿಯನ್ನು ಸಮಾಜಕ್ಕೆ ಸಾರಿದ ಜುಂಜಪ್ಪ ತಳ ಸಮುದಾಯದ ಧ್ವನಿಯಾದರು ಎಂದು ಜನಪದ ವಿದ್ವಾಂಸ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಜುಂಜಪ್ಪ ಅಧ್ಯಯನ ಪೀಠ ವಿವಿ ಕಲಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ “ಜುಂಜಪ್ಪನ ಕಾವ್ಯದಲ್ಲಿ ಪಶುಪಾಲನೆ ಮತ್ತು ಗಣೆಪದ” ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ವೃತ್ತಿಯ ಗೌರವವನ್ನು ಎತ್ತಿ ಹಿಡಿಯುವ ಮೂಲಕ ಗೋವಿನ ಪಾಲನೆ, ರಕ್ಷಣೆ, ಸಮುದಾಯದ ಸಾಂಸ್ಕøತಿಕ ನಾಯಕನಾಗಿ ಪರಿಶ್ರಮದ ಮೂಲಕ ಹೊರಹೊಮ್ಮಿದವರು ಜುಂಜಪ್ಪ. ಸಮಾಜದ, ವ್ಯಕ್ತಿಯ, ಸಮುದಾಯದ ಸ್ಥಾನಮಾನಗಳನ್ನು ಗುರುತಿಸುವ ಗೋಪಾಲನೆಯ ವೃತ್ತಿಯನ್ನು ಗೋವಾಳರು ಅಥವಾ ಗೊಲ್ಲರು ಮಾಡುತ್ತಿದ್ದರು. ಗೋವಿನ ರಕ್ಷಣೆಯಲ್ಲಿ ಯುದ್ಧಗಳಾಗಿದ್ದನ್ನು ಇತಿಹಾಸ ಉಲ್ಲೇಖಿಸುತ್ತದೆ. ಗೋಪಾಲಕರು ಜೀವತೆತ್ತು ಗೋವುಗಳನ್ನು ರಕ್ಷಿಸಿ ಪೂಜೆಗೆ ಒಳಪಟ್ಟಿದ್ದಾರೆ ಎಂದು ಹೇಳಿದರು.
30 ಪ್ರಾಚೀನ ಕಾವ್ಯಗಳಲ್ಲಿ ಗೊಲ್ಲ ಸಮುದಾಯದ ಕುರಿತ ಪ್ರಸ್ತಾಪವಿದೆ. ಗೋಪಾಲಕರು ಭೌಗೋಳಿಕ ಅನ್ವೇಷಕರಾಗಿ, ಪಾರಂಪರಿಕ ಸಂಖ್ಯಾಶಾಸ್ತ್ರಜ್ಞರಾಗಿ, ಹಾಲೋತ್ಪನ್ನ ಪ್ರಕ್ರಿಯೆಗಳನ್ನು ಪಾರಂಪರಿಕವಾಗಿ ಭಾರತೀಯ ಸಮಾಜಕ್ಕೆ ಪರಿಚಯಿಸಿ, ನದಿ ಕಾಡುಗಳ ವಿಸ್ತಾರವನ್ನು ಅನ್ವೇಷಿಸುವುದರ ರಾಯಭಾರಿಗಳೆಂದೇ ಹೇಳಬಹುದು. ಪಶುಪಾಲನೆಯ ತೀವ್ರತೆಯ ಮುಂದೆ ತಮ್ಮ ಖಾಸಗಿ ಬದುಕು ನಗಣ್ಯವಾಗಿತ್ತು ಎಂದು ಜುಂಜಪ್ಪ ತನ್ನ ಕಾವ್ಯಗಳಲ್ಲಿ ಹಾಡಿದ್ದಾರೆ ಎಂದರು.
ಜುಂಜಪ್ಪನ ಅರ್ಥದಲ್ಲಿ ಪಶುಪಾಲನೆಯು ಸಾಂಸ್ಕøತಿಕ ಕೃಷಿ ಪದ್ಧತಿಯ ಸಂತಾನ ಸೂತ್ರವನ್ನು ಹಾಗೂ ಸಾಮಾಜಿಕ ನೈತಿಕ ಎಚ್ಚರಿಕೆಯನ್ನು ಸಾರುವ ವೃತ್ತಿಯಾಗಿತ್ತು. ಏಳು ಊನ ದನಗಳನ್ನು ಪಡೆದು, ಅವನ್ನು ಪಾಲಿಸಿ, ಪೋಷಿಸಿ, ವೈರತ್ವ ಎದುರಿಸಿ 700 ದನಗಳ ಒಡೆಯನಾಗಿ, ಅರಸನಾಗಿ ಕೆರೆ, ಅಣೆಕಟ್ಟು, ಹುಲ್ಲುಬಾನಿ ನಿರ್ಮಿಸಲು, ಕಾಡಿನ ಸಂಪತ್ತನ್ನು ವೃದ್ಧಿಸಲು ಮುಂದಾದ ಜುಂಜಪ್ಪ ಧ್ವನಿರಹಿರತ ಕೂಗಾದರು ಎಂದು ತಿಳಿಸಿದರು.
12 ವರ್ಷ ಕುಟುಂಬ ತೊರೆದು ಗೋವುಗಳ ರಕ್ಷಣೆಯಲ್ಲಿ ಜೀವ ಸವೆಸಿದ ತನ್ನ ತಾತ ದೇವರ ದೈಮಾರನಿಂದ ಪ್ರೇರೇಪಿತನಾಗಿ, ಗೋಪಾಲನೆಯ ಬದುಕಿನ ಅನುಭವಗಳನ್ನು ಕಾವ್ಯ ರೂಪವಾಗಿ ಪಾರಂಪರಿಕ ಪಶುಪಾಲನ ನಿರ್ವಹಣೆಯ ಸಾಂಸ್ಕøತಿಕ ತೂಗು ತೊಟ್ಟಿಲಾದರು ಜುಂಜಪ್ಪ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಯಾವುದೇ ವೃತ್ತಿಯಾಗಿರಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಇರಬೇಕು. ಕಾರ್ಮಿಕರ ಘನತೆ ಕಾಪಾಡುವ ಜವಾಬ್ದಾರಿ ಸಂಸ್ಥೆಯದ್ದಾಗಿರಬೇಕು. ವಿಶ್ವವಿದ್ಯಾನಿಲಯಗಳ ಅಧ್ಯಯನ ಪೀಠಗಳು ಮಹನೀಯರ ಸಾಧನೆಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯಕೈಗೊಳ್ಳಬೇಕು ಎಂದರು.
ನಿವೃತ್ತ ಅರಣ್ಯಾಧಿಕಾರಿ ಡಾ. ಬಿ. ಚಿಕ್ಕಪ್ಪಯ್ಯ ಮಾತನಾಡಿ, ರಾಜ್ಯದ 11 ಜಿಲ್ಲೆಯ 38 ತಾಲೂಕುಗಳಲ್ಲಿ ಕಾಡುಗೊಲ್ಲರಿದ್ದಾರೆ. 1269 ಹಟ್ಟಿಗಳಲ್ಲಿ ತಮ್ಮ ಬದುಕನ್ನು ಸವೇಸುತ್ತಿದ್ದಾರೆ. ದೇಶದ 13 ಜಿಲ್ಲೆಗಳ 41 ತಾಲೂಕುಗಳಲ್ಲಿ 1500 ಹಟ್ಟಿಗಳಲ್ಲಿ ಗೊಲ್ಲರಿದ್ದಾರೆ ಎಂದು ತಿಳಿಸಿದರು.
‘ಜುಂಜಪ್ಪನ ಕಾವ್ಯದಲ್ಲಿ ಬಡಮೈಲ’ ಕುರಿತ ವಿಷಯದಲ್ಲಿ ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಪ್ರಬಂಧ ಮಂಡಿಸಿದರು. ರಾಮಯ್ಯ ಹಾಗೂ ತಂಡದವರಿಂದ ಗಣೆಪದಗಾಯನ ನಡೆಯಿತು.
ಲೇಖಕ ಡಾ. ಜಿ. ವಿ. ಆನಂದಮೂರ್ತಿ, ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಜುಂಜಪ್ಪ ಅಧ್ಯಯನ ಪೀಠದ ಸಂಯೋಜಕ ಡಾ. ಎಸ್. ಶಿವಣ್ಣ ಬೆಳವಾಡಿ, ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಸಹಾಯಕ ಪ್ರಾಧ್ಯಾಪಕಿ ಡಾ. ಎಚ್. ಆರ್. ರೇಣುಕ ಉಪಸ್ಥಿತರಿದ್ದರು.