ನ್ಯಾ.ನಾಗಮೋಹನ್ ದಾಸ್ ವರದಿ ಅತ್ಯಂತ ವೈಜ್ಞಾನಿಕ: ಯಥಾವತ್ತು ಜಾರಿಗೆ ಒಳ ಮೀಸಲಾತಿ ಹೋರಾಟ ಸಮಿತಿ ಒತ್ತಾಯ

ತುಮಕೂರು :ಸರಕಾರದ ಆದೇಶದಂತೆ ಒಳಮೀಸಲಾತಿಗಾಗಿ ಮಾಹಿತಿ ಕಲೆ ಹಾಕಲು ನೇಮಕವಾಗಿದ್ದ ನ್ಯಾ.ನಾಗ ಮೋಹನ್‍ದಾಸ್ ವರದಿ ಅತ್ಯಂತ ವೈಜ್ಞಾನಿಕ, ಸಂವಿಧಾನ ಪೂರಕವಾಗಿದ್ದು, ಯಥಾವತ್ತು ಜಾರಿ ಮಾಡಬೇಕೆಂದು ತುಮಕೂರು ಜಿಲ್ಲೆಯ ಒಳ ಮೀಸಲಾತಿ ಹೋರಾಟ ಸಮಿತಿ ಒತ್ತಾಯಿಸಿತು.

ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲೆಯ ಒಳ ಮೀಸಲಾತಿ ಅಧ್ಯಕ್ಷರಾದ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಅವಕಾಶ ವಂಚಿತ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂಬ ಕಾರಣಕ್ಕೆ ನ್ಯಾ.ನಾಗಮೋಹನ್‍ದಾಸ್ ಅತ್ಯಂತ ತಾಳ್ಮೆಯಿಂದ ಅಂಕಿ ಅಂಶಗಳನ್ನು ಪರಿಶೀಲಿಸಿ, ಸಂವಿಧಾನ ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಡಿಯಲ್ಲಿ ವರದಿಯನ್ನು ಸಿದ್ದಪಡಿಸಿ, ಶಿಫಾರಸ್ಸುಗಳನ್ನು ಮಾಡಿದ್ದಾರೆ. ಹಾಗಾಗಿ ಸರಕಾರ ಆಗಸ್ಟ್ 19 ರಂದು ನಡೆಯುವ ಸಚಿವ ಸಂಪುಟ ವಿಶೇಷ ಸಭೆಯಲ್ಲಿ ವರದಿಯನ್ನು ಒಪ್ಪಿಕೊಂಡು ಜಾರಿಗೆ ತರಬೇಕು.ಇದುವರೆಗೂ ಇದ್ದ ಗೊಂದಲಕ್ಕೆ ತೆರೆ ಎಳೆಯಬೇಕು ಎಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.

ಪರಿಶಿಷ್ಟರನ್ನು ಅತ್ಯಂತ ಹಿಂದುಳಿದ 5.22 ಲಕ್ಷಾ ಜನರಿರುವ 59 ಉಪ ಜಾತಿಗಳನ್ನು ಪ್ರವರ್ಗ ‘A’ ಎಂದು ಪರಿಗಣಿಸಿ ಶೇ.01 ರಷ್ಟು ಒಳಮೀಸಲಾತಿಯನ್ನು ಶಿಫಾರಸ್ಸು ಮಾಡಿದೆ. ನಂತರ ಹೆಚ್ಚು ಹಿಂದುಳಿದಿರುವ ಪವರ್ಗ ‘A’ ಗಿಂತ ಮುಂದುವರೆದಿರುವ 36.69 ಲಕ್ಷ ಜನರಿರುವ ಮಾದಿಗ ಮತ್ತು ಮಾದಿಗ ಸಂಬಂಧಿತ 18 ಉಪಜಾತಿಗಳನ್ನು ವರ್ಗ’ B’ ಎಂದು ವರ್ಗೀಕರಿಸಿ ಶೇ. 06 ರಷ್ಟು, ಪ್ರವರ್ಗ B ಗಿಂತ ಮುಂದುವರೆದಿರುವ 30.08 ಲಕ್ಷ ಜನರಿರುವ ಹೊಲೆಯ ಮತ್ತು ಹೊಲೆಯ ಸಂಬಂಧಿತ 17 ಜಾತಿಗಳನ್ನು ಪ್ರವರ್ಗ ‘C’ ಎಂದು ಪರಿಗಣಿಸಿ ಶೇ. 05 ರಷ್ಟು ಉಳಿದ ಜಾತಿಗಳಿಂದ ಕಡಿಮೆ ಹಿಂದುಳಿದಿರುವ ಲಂಬಾಣಿ, ಭೋವಿ, ಕೊರಮ ಮತ್ತು ಕೊರಚ ಸಂಬಂಧಿತ ಜಾತಿಗಳಿರುವ 28.34 ಲಕ್ಷ ಜನರನ್ನು ಪ್ರವರ್ಗ ‘D’ ಎಂದು. ವರಿಗಣಿಸಿ ಶೇ. 04 ರಷ್ಟು, ಮೂಲ ಜಾತಿಯನ್ನು ಹೇಳದೆ AK, AD, AA ಜಾತಿ ಎಂದೇ ಗುರುತಿಸಿಕೊಂಡಿರುವ 4.74 ಲಕ್ಷ ಜನರನ್ನು ಪ್ರವರ್ಗ ” ಎಂದು ಪರಿಗಣಿಸಿ ಶೇ. 01 ರಷ್ಟು ಒಳಮೀಸಲಾತಿಯನ್ನು ಶಿಫಾರಸು ಮಾಡಿದೆ ಎಂದರು.

ಪರಿಶಿಷ್ಟ್ಯರೊಳಗೆ ಅತಿ ಹೆಚ್ಚು ಸಾಕ್ಷರತೆ ಪಡೆದಿರುವ 26 ಜಾತಿಗಳು (ಶೇ. 80 ಕ್ಕಿಂತ ಹೆಚ್ಚು), ಮಧ್ಯಮ ಪ್ರಮಾಣದ 67 ಜಾತಿಗಳು (ಶೇ. 60 ಕ್ಕಿಂತ ಹೆಚ್ಚು ಸಾಕ್ಷರತೆ), 17 ಜಾತಿಗಳು ಕಡಿಮೆ ಸಾಕ್ಷರತೆ ಹಾಗೂ 3 ಜಾತಿಗಳು ಅತ್ಯಂತ ಕಡಿಮೆ ಸಾಕ್ಷರತೆಯನ್ನು ಹೊಂದಿವೆ ಹಾಗೂ ಪಿಯುಸಿ ಪಾಸಾಗಿರುವ ಶೇ. 72 ರಷ್ಟು ಪರಿಶಿಷ್ಟ ಮಕ್ಕಳು ಕೇವಲ ನಾಲ್ಕು ಜಾತಿಗಳಿಗೆ ಸೇರಿವೆ. ಅರ್ಥಾತ್ ಉಳಿದ 97 ಜಾತಿಗಳಲ್ಲಿ ಶೇ. 28 ಮಕ್ಕಳು ಮಾತ್ರ ಪಿಯುಸಿ ಮುಟ್ಟಿವೆ. ಹಾಗೂ ಪದವಿ ಮುಟ್ಟಿದ ಶೇ. 71 ಮಕ್ಕಳು ಕೂಡ ಕೇವಲ ನಾಲ್ಕು ಪರಿಶಿಷ್ಟ ಉಪಜಾತಿಗಳಿಗೆ ಸೇರಿವೆ. ಅದೇ ರೀತಿ ಮಡಿಕಲ್ ವಿದ್ಯಾಭ್ಯಾಸ ಮಾಡುತ್ತಿರುವ ಒಟ್ಟು 11, 365 ಪರಿಶಿಷ್ಟ್ಯ ವಿದ್ಯಾರ್ಥಿಗಳಲ್ಲಿ ಶೇ. 70 ರಷ್ಟು ವಿದ್ಯಾರ್ಥಿಗಳು ಬಂಜಾರ, ಭೋವಿ, ಹೊಲೆಯ ಮತ್ತು ಮಾದಿಗ ಉಪಜಾತಿಗಳಿಗೆ ಸೇರಿದವರು. ಇಂಜಿನಿಯರಿಂಗ್ ಓದುತ್ತಿರುವ 45 216 ಪರಿಶಿಷ್ಟ ವಿದ್ಯಾರ್ಥಿಗಳಲ್ಲೂ ಶೇ. 71 ರಷ್ಟು ವಿದ್ಯಾರ್ಥಿಗಳು ಈ ನಾಲ್ಕು ಜಾತಿಗಳಿಗೆ ಸೇರಿದವರು ಈ ಸಂಖ್ಯೆಗಳು ತೀರಾ ಕಡಿಮೆಯಿದ್ದರೂ ಪರಿಶಿಷ್ಟರೊಳಗಿನ ಉಪಜಾತಿಗಳಿಗೆ ಹೋಲಿಸಿದರೆ ಪರಿಶಿಷ್ಟ ಮೀಸಲಾತಿಯ ಬಹುಪಾಲು ಈ ನಾಲ್ಕು ಜಾತಿಗಳಿಗೆ ಮಾತ್ರ ಲಭ್ಯವಾಗಿದೆ ಎಂದು ಅಂಕಿಅಂಶಗಳು ಹೇಳುತ್ತವೆ ಎಂದರು.

ಮೇಲಿನ ಅಂಕಿ-ಅಂಶಗಳೊಂದಿಗೆ ಪರಿಶಿಷ್ಟರೊಳಗಿನ ಉಳಿದ 97 ಜಾತಿಗಳಲ್ಲಿ 25 ಜಾತಿಗಳಲ್ಲಿ ಒಬ್ಬರೂ ತಾಂತ್ರಿಕ ಪದವಿಯನ್ನು ಪಡೆದಿಲ್ಲ. 14 ಜಾತಿಗಳಲ್ಲಿ ಒಬ್ಬರೂ ಸ್ನಾತಕೋತ್ತರ ಪದವಿ ಪಡೆದಿಲ್ಲ 14 ಜಾತಿಗಳಲ್ಲಿ ಒಬ್ಬರೂ ಎಂಬಿಬಿಎಸ್ ಇಲ್ಲ. 54 ಜಾತಿಗಳಲ್ಲಿ ಒಬ್ಬರೂ ಪಿಎಚ್.ಡಿ ಇಲ್ಲ. ಹೀಗಾಗಿ ಪರಿಶಿಷ್ಯರೆಂದು ವರ್ಗೀಕರಿಸಲ್ಪಟ್ಟ 101 ಜಾತಿಗಳಲ್ಲಿ ಶೈಕ್ಷಣಿಕ ಅಸಮಾನತೆ ಇರುವುದು ಸ್ಪಷ್ಟವಾಗಿದೆ ಹೀಗಾಗಿಯೇ ಅತ್ಯಂತ ಹಿಂದುಳಿದವರನ್ನು ಮುಂದುವರೆದವರಿಂದ ಪ್ರತ್ಯೇಕಿಸಿ ಮತ್ತೊಂದು ಗುಂಪು ಮಾಡಲಾಗಿದೆ ಎಂದರು.

ಶಾಸಕರು ಮತ್ತು ಸಂಸದರಾಗಿರುವ ಪರಿಶಿಷ್ಟ ಉಪಜಾತಿಗಳ ವಿವರಗಳಿಗಿಂತ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ್ಯ ಉಪಜಾತಿಗಳ ವಿವರವನ್ನು ವರದಿ ನೀಡುತ್ತದೆ. ಅದರ ಪ್ರಕಾರ 27,917 ಪರಿಶಿಷ್ಟ ಗ್ರಾಮಪಂಚಾಯತಿ ಸದಸ್ಯರಲ್ಲಿ ಪರಿಶಿಷ್ಟರ 101 ಜಾತಿಗಳಲ್ಲಿ 41 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಮಹಾನಗರ ಪಾಲಿಕೆಯಲ್ಲಿ 52 ಸದಸ್ಯತ್ವದಲ್ಲಿ ಈವರೆಗೆ 89 ಜಾತಿಗಳಿಗೆ ಒಮ್ಮೆಯೂ ಪ್ರಾತಿನಿಧ್ಯ ಸಿಕ್ಕಿಲ್ಲ ನಗರಪಾಲಿಕೆಯ 308 ಪರಿಶಿಷ್ಟ ಸ್ಥಾನಗಳಲ್ಲಿ 82 ಉಪಜಾತಿಗಳಿಗೆ ಈವರೆಗೆ ಅವಕಾಶವಿಲ್ಲ, ಪುರಸಭೆಗಳ 516 ಸ್ಥಾನಗಳಲ್ಲಿ 79 ಉಪಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹಾಗೂ ಪಟ್ಟಣ ಪಂಚಾಯತಿಯ 252 ಸ್ಥಾನಗಳಲ್ಲಿ 78 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಪ್ರಾತಿನಿಧ್ಯ ಪಡೆದವರಲ್ಲಿ ಭೋವಿ, ಲಂಬಾಣಿ, ಹೊಲೆಯ, ಮಾದಿಗ, ಎಕೆ, ಎಡಿ ಜಾತಿಗಳ ಪಾಲು ಹೆಚ್ಚು. ಇದಲ್ಲದೆ ಭೂ ಹಿಡುವಳಿ ಮತ್ತು ಸರ್ಕಾರದ ಆರ್ಥಿಕ ಅನ್ನುದಾನಗಳ ಪ್ರಶ್ನೆಯಲ್ಲೂ ಇದೇ ಬಗೆಯ ಫಲಾನುಭವದ ಪದ್ಧತಿ ಕಾಣುತ್ತದೆ. ಈ ಯಾವುದೇ ಅಂಕಿಅಂಶಗಳು ಸಮಾಜದ ಪರಿಶಿಶ್ವೇತರ ಸಮುದಾಯಗಳ ಪರಿಸ್ಥಿತಿಗಳಿಗೆ ಹೋಲಿಸಿದಲ್ಲಿ ಪರಿಶಿಷ್ಯರಲ್ಲಿ ಮುಂದುವರೆದವರ ಪರಿಸ್ಥಿತಿಯೂ ವಾಸ್ತವದಲ್ಲಿ ಹಿಂದೇ ಉಳಿದಿದೆ. ಎಂದೇ ತಿಳಿಸುತ್ತದೆ. ಆದರೆ ಈ ಅಧ್ಯಯನವು ಪರಿಶಿಷ್ಟರೊಳಗಿರುವ ಸಾಮಾಜಿಕ ಅಸಮಾನತೆ ಮತ್ತು ಅದನ್ನು ಸರಿದೂಗಿಸಲು ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತಾಗಿದೆ ಎಂದರು.

ಇದಲ್ಲದೆ ಕರ್ನಾಟಕದಲ್ಲಿ ಇತರ ರಾಜ್ಯಗಳಿಗಿಂತ ಭಿನ್ನವಾಗಿ ಸ್ಪೃಶ್ಯ ಜಾತಿಗಳಾದ ಲಂಬಾಣಿ, ಭೋವಿ, ಕೊರಮ ಮತ್ತು ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಗಳೆಂದು ಪರಿಗಣಿಸಲಾಗಿದೆ ಎಂದರು.

ಆದರೆ ಸುಪ್ರೀಂ ಕೋರ್ಟಿನ ತೀರ್ಪಿನ ಪ್ರಕಾರ ಒಳವರ್ಗೀಕರಣ ಮಾಡುವಾಗ ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡಗಳಲ್ಲಿ ನೋಡಿದರೆ ಸ್ಪೃಶ್ಯ ಜಾತಿಗಳಲ್ಲಿನ ಕೆಲವ ಜಾತಿಗಳ ಹಿಂದುಳಿದಿರುವಿಕೆ ಅಸ್ಪೃಶ್ಯ ಜಾತಿಗಳು ಹಿಂದುಳಿದಿರುವುದು ಈ ವರದಿಯಿಂದ ಸ್ಪಷ್ಟವಾಗಿದೆ ಮೇಲಿನ ಎಲ್ಲಾ ವಿಷಯಗಳನ್ನು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರ್ಕಾರ ಕೂಡಲೇ ನ್ಯಾ.ನಾಗಮೋಹನ್ ದಾಸ್ ರವರ ವರದಿಯನ್ನು ಯತವತ್ತಾಗಿ ಅನುಷ್ಠಾನ ಮಾಡಬೇಕೆಂದು ಮನವಿ ಮಾಡಿದರು.

ಹಿರಿಯರಾದ ಕೆ.ದೊರೈರಾಜು ಮಾತನಾಡಿ,ನ್ಯಾ.ನಾಗಮೋಹನ್ ದಾಸ್ ವರದಿ ಅತ್ಯಂತ ವೈಜ್ಞಾನಿಕ ಮತ್ತು ಶಿಸ್ತು ಬದ್ದ ವರದಿಯಾಗಿದೆ. ಶೇಕಡ 92ರಷ್ಟು ಜನ ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.ವರದಿಯೂ ನ್ಯಾಯಾಲಯದ ಆದೇಶಕ್ಕೆ ಪೂರಕವಾಗಿದೆ.ಸಂಖ್ಯಾಬಲದ ಗೊಂದಲವನ್ನು ಬದಿಗಿಟ್ಟು, ಅವಕಾಶ ವಂಚಿತ ಸಮುದಾಯಗಳಿಗೆ ಆದ್ಯತೆ ಎಂಬ ವಿಚಾರವನ್ನು ಪ್ರಮುಖವಾಗಿ ಪರಿಗಣಿಸಿದಾಗ ಸಮಿತಿ ಮಾಡಿರುವ ಶಿಫಾರಸ್ಸು ಅತ್ಯಂತ ಸೂಕ್ತವಾಗಿದೆ. ಸುಮಾರು 35 ವರ್ಷಗಳಿಗೂ ಹೆಚ್ಚು ಕಾಲದಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಸಮುದಾಯಗಳಿಗೆ ಮತ್ತೆ ನಿರಾಸೆ ಮಾಡದೆ, ಅವರ ತಾಳ್ಮೆಯನ್ನು ಪರೀಕ್ಷೆಗೆ ಒಳಪಡಿಸದೆ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು. ಸಮಿತಿಯ ಅಧ್ಯಕ್ಷರೇ ಹೇಳಿರುವಂತೆ ವರದಿಯಲ್ಲಿನ ಶಿಫಾರಸ್ಸುಗಳನ್ನು ಕಾಲಕಾಲಕ್ಕೆ ಪರಿಷ್ಕರಣೆಗೆ ಒಳಪಡಿಸಿಕೊಳ್ಳಲು ಅವಕಾಶವಿದೆ. ಹಾಗಾಗಿ ವರದಿಯ ಶಿಫಾರಸ್ಸುಗಳನ್ನು ಯಥಾವತ್ತು ಜಾರಿಗೆ ತರುವ ಮೂಲಕ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಬೇಕೆಂದರು.

ಡಾ.ಬಸವರಾಜು ಮಾತನಾಡಿ,ಒಳಮೀಸಲಾತಿಗಾಗಿ ನ್ಯಾ.ನಾಗಮೋಹನ್‍ದಾಸ್ ಸಮಿತಿ ರಚನೆ ಕಳೆದ 35 ವರ್ಷಗಳ ಕಾನೂನು ಹೋರಾಟಕ್ಕೆ ಸಿಕ್ಕ ಜಯವಾಗಿದೆ.ಯಾವುದೇ ರಾಜಕೀಯ ಪಕ್ಷದಿಂದ ಸಿಕ್ಕ ಜಯವಲ್ಲ.ಸಮಿತಿಯ ಅಧ್ಯಕ್ಷರು ಓರ್ವ ಸಮಾಜಶಾಸ್ತ್ರಜ್ಞರ ರೀತಿ ವರದಿಯನ್ನು ತಯಾರಿಸಿ ನೀಡಿದ್ದಾರೆ. ವಿರೋಧ ಮಾಡುವುದರಲ್ಲಿ ಯಾವುದೇ ಆರ್ಥವಿಲ್ಲ.ವರದಿ ಜಾರಿಗೆ ನಾವೆಲ್ಲರೂ ಒಗ್ಗೂಡಬೇಕಾಗಿದೆ ಎಂದರು.

ಜಿ.ಪಂ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ,ರಾಮಾಯಣ, ಮಹಾಭಾರತ ಕಾಲದಿಂದಲೂ ಶೋಷಣೆಗೆ ಒಳಗಾದ ಸಮುದಾಯಗಳಿಗೆ ಈ ವರದಿ ನ್ಯಾಯ ಒದಗಿಸಿದೆ.ಸಂವಿಧಾನದ ಆಶಯ ಈಡೇರಬೇಕೆಂದರೆ ಈ ವರದಿ ಯಥಾವತ್ತು ಜಾರಿಯಾಗಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆಂಚಮಾರಯ್ಯ, ನರಸೀಯಪ್ಪ, ಶಿವನಂಜಪ್ಪ, ನರಸಿಂಹಯ್ಯ, ಬಿ.ಹೆಚ್.ಗಂಗಾಧರ್, ಕೊಟ್ಟಶಂಕರ್, ಪಿ.ಎನ್.ರಾಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *