ಕಾಂಗ್ರೆಸ್ ಕಟ್ಟಿದ ಅರಸು, ಬಂಗಾರಪ್ಪನವರಿಗೆ ಏನಾಯಿತು ಎಂಬ ಅರಿವು ಕೆ.ಎನ್.ರಾಜಣ್ಣ ಅರಿಯಬೇಕಿತ್ತು

ಕಾಂಗ್ರೆಸ್ ಪಕ್ಷ ಕಟ್ಟಿದ ಇಬ್ಬರು ಮುಖ್ಯಮಂತ್ರಿಗಳಾದ ದೇವರಾಜ ಅರಸು ಮತ್ತು ಎಸ್.ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಯಾವ ರೀತಿ ಕಿಕ್ ಔಟ್ ಆದರು ಎಂಬುದನ್ನು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಅರಿಯಬೇಕಿತ್ತು.

ಮೋತಿಲಾಲ್ ನೆಹರು ಕಾಲದಿಂದಲೂ ಕಾಂಗ್ರೆಸ್‍ನ ಹಿಡಿತವನ್ನು ನೆಹರು ಕುಟುಂಬ ಹಿಡಿದಿಟ್ಟಕೊಂಡು ಬರುತ್ತಿದ್ದು, ನೆಹರು ಕುಟುಂಬಕ್ಕೆ ಗುಲಾಮರಾಗಿ ಇರುವವರನ್ನು ಮಾತ್ರ ಕಾಂಗ್ರೆಸ್‍ನಲ್ಲಿ ಸೇಫಾಗಿ ಇರಬಹುದು ಎಂಬುದಕ್ಕೆ ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಸ್ವಾತಂತ್ರ್ಯ ನಂತರವೂ ಆ ಕುಟುಂಬ ಕಾಂಗ್ರೆಸ್ ನೆಹರು ಕುಟುಂಬವನ್ನು ಬಿಟ್ಟು ಅಲುಗಾಡದಂತೆ ಒಂದು ಬಿಗಿ ಹಿಡಿತವನ್ನು ಇಟ್ಟುಕೊಂಡಿದೆ.

ಗಾಂಧಿಯಂತಹ ವ್ಯಕ್ತಿಯನ್ನು ಸಹ ಮೂಲೆಗುಂಪು ಮಾಡಿ ಕಾಂಗ್ರೆಸ್‍ನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ನೆಹರು ಕುಟುಂಬ, ಭಾರತದ ಅತೀ ಹೆಚ್ಚು ಅಧಿಕಾರ ಮತ್ತು ಗುಲಾಮಗಿರಿಯನ್ನು ಪಾಲಿಸಿಕೊಂಡು ಬಂದಂತಹ ಕುಟುಂಬ ಎಂದು ಕಾಂಗ್ರೆಸ್ ಪಕ್ಷದ ಹಿರಿಯರೆ ಹೇಳುತ್ತಾರೆ.

ದೇಶದಲ್ಲಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಬದಲಾವಣೆ ಆಗಿ ಸಾಕಷ್ಟು ಹೊಸ ಪಕ್ಷಗಳು ಬಂದು ಹೋಗಿವೆ, ಕಳೆದ 75 ವರ್ಷಗಳಿಂದ ದೇಶದಲ್ಲಿ ಹತ್ತಾರು ವರ್ಷಗಳ ಕಾಲ ಆಡಳಿತವಿರಲಿ, ಇಲ್ಲದಿರಲಿ, ಕಾಂಗ್ರೆಸ್ ಪಕ್ಷದಲ್ಲಿ ನೆಹರು ಕುಟುಂಬಕ್ಕೆ ಇತರೆ ನಾಯಕರು ಎಷ್ಟೇ ಪ್ರಭಾವಿಗಳಾಗಿದ್ದರೂ, ದೊಡ್ಡ ನಾಯಕರಾಗಿದ್ದರು ಹುಜೂರ್ ಸಂಸ್ಕೃತಿಯನ್ನು ಬಿಡಬಾರದು ಮತ್ತು ಆ ಕುಟುಂಬಕ್ಕೆ ವಿದೇಯರಾಗಿರಬೇಕು. ಇದನ್ನು ಜವಹರಲಾಲ್ ನೆಹರು ಕಾಲದಿಂದ ಹಿಡಿದು ಈಗಿನ ರಾಹುಲ್ ಗಾಂಧಿಯವರೆಗೆ ಅದನ್ನು ಕಾಪಿಟ್ಟುಕೊಂಡು ಬರಲಾಗಿದೆ.

ದೇಶದಲ್ಲೇ ಒಂದು ಭೂ ಸುಧಾರಣೆಯ ಮೂಲಕ ಮುಖ್ಯಮಂತ್ರಿಯಾಗಿದ್ದ ದೇವರಾಜು ಅರಸು ಅವರು ಒಬ್ಬ ದೊಡ್ಡ ನಾಯಕರಾಗಿ ಹೊರ ಹೊಮ್ಮಿದವರು, ಬಡವರ, ಶೋಷಿತರ ನಾಯಕರಾಗಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದಂತಹ ನಾಯಕರಾಗಿದ್ದರು, ಅರಸು ಅವರನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಸೃಷ್ಠಿಯಾಗಿತ್ತು.

ದೇವರಾಜು ಅರಸರು ಸಹ ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಬಹಳ ನಿಷ್ಠರಾಗಿದಂತಹವರು, ಇವರ ಆಡಳಿತ ಮತ್ತು ಜನಪ್ರಿಯತೆಯನ್ನು ಸಹಿಸದ ಕೆಲವರು ಇಂದಿರಾಗಾಂಧಿಯವರ ಕಿವಿಯಲ್ಲಿ ಅದೇನು ತಿದಿ ಒತ್ತಿದರೋ ಗೊತ್ತಿಲ್ಲ, ಅರಸು ಅವರಿಗೆ ದಿನ ಬೆಳಗಾಗುವುದರೊಳಗೆ ಇಂದಿರಾ ಗಾಂಧಿಯವರಿಂದ ಒಂದು ತರಹದ ಕಿರುಕುಳ ಪ್ರಾರಂಭವಾಯಿತು, ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಅರಸು ಅವರು ಇಂದಿರಾ ಗಾಂಧಿಯವರ ವಿರುದ್ಧ ಸೆಟೆದು ನಿಲ್ಲಲು ಹೋದಾಗ ಒಬ್ಬ ಜನಪ್ರಿಯ ನಾಯಕ, ಕಾಂಗ್ರೆಸ್ ಕಟ್ಟಿದ ದೊಡ್ಡ ಧಿಮಂತ ನಾಯಕ ಎನ್ನುವುದನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೆ ಕಾಂಗ್ರೆಸ್ ಪಕ್ಷದ ಬಾಗಿಲಿನಿಂದ ನೂಕಿ ಹೊರ ಹಾಕಿದರು.

ಆ ನಂತರ ದೇವರಾಜು ಅರಸ್ಸು ಸ್ಥಿತಿ ಏನಾಯಿತು ಎಂಬುದು ತಿಳಿದೆ ಇದೆ.

ಅದೇ ರೀತಿ ಮತ್ತೊಬ್ಬ ಹಿಂದುಳಿದ ನಾಯಕ ತುಂಬಾ ಜನ ನಾಯಕ ಎಂದು ಗುರುತಿಸಿಕೊಂಡಿದ್ದ ಸಾರೆಕೊಪ್ಪದ ಬಂಗಾರಪ್ಪನವರನ್ನು ಸಹ ನೆಹರು ಕುಟುಂಬವು ನಮ್ಮ ಮಾತು ಕೇಳುತ್ತಿಲ್ಲ ಎಂದು ರಾತ್ರೋ ರಾತ್ರಿ ಮುಖ್ಯಮಂತ್ರಿ ಪದವಿಯಿಂದ ಹೊರ ದಬ್ಬಿ ಬಾಗಿಲು ಹಾಕಿದರು.

ಈ ಇಬ್ಬರು ನಾಯಕರು ಕಾಂಗ್ರೆಸ್ ಪಕ್ಷವನ್ನು ಕಟ್ಟಲು ತಮ್ಮ ಜೀವಮಾನವನ್ನೇ ಪಣಕ್ಕಿಟ್ಟಂತಹ ಜನ ನಾಯಕರಾಗಿದ್ದಂತಹವರು. ನೆಹರು ಕುಟುಂಬಕ್ಕೆ ನಿಷ್ಠರಾಗಿಲ್ಲ ಎಂಬ ಕೆಲವರ ಚಾಡಿ ಮಾತಿಗೆ ಈ ನಾಯಕರನ್ನು ಯಾವ ಮುಲಾಜಿಲ್ಲದೆ ಹೊರ ದಬ್ಬಿದ ಹೈಕಮಾಂಡ್ ಎಂಬ ನೆಹರು ಕುಟುಂಬಕ್ಕೆ ರಾಜಣ್ಣನಂತಹ ಒಂದು ಜಿಲ್ಲೆಯ ನಾಯಕನನ್ನು ಸಚಿವ ಸಂಪುಟದಿಂದ ಹೊರ ಹಾಕಲು ಬಹಳ ಸಮಯ, ಯೋಚನೆ ಬೇಕಿಲ್ಲ, ರಾಜ್ಯದ ಒಬ್ಬ ಸಣ್ಣ ನಾಯಕ ಆ ಕುಟುಂಬಕ್ಕೆ ನಿಷ್ಠನಾಗಿ ಕಿವಿ ಊದಿದರೆ ಮುಗಿಯಿತು, ರಾಜಣ್ಣನ ವಿಷಯದಲ್ಲೂ ಅದೇ ಆಗಿದ್ದು.

ಕೆ.ಎನ್.ರಾಜಣ್ಣನವರು ಹುಟ್ಟಿನಿಂದಲೇ ಹೋರಾಟದ ಗುಣವುಳ್ಳವರಾಗಿದ್ದು, ಇದ್ದಿದ್ದನ್ನು ಇದ್ದ ಹಾಗೆ, ಕಠೋರವಾಗಿ ಹೇಳುವ ಸ್ವಭಾವ ರೂಢಿಸಿಕೊಂಡವರು ಎಂದು ಅವರ ಸ್ನೇಹ ವಲಯ ಹೇಳುತ್ತದೆ.

ಒಬ್ಬ ಪರಿಶಿಷ್ಠ ಜಾತಿಗೆ ಸೇರಿದ ಕೆ.ಎನ್.ರಾಜಣ್ಣನವರು ತುಮಕೂರು ಜಿಲ್ಲೆಯಂತಹ ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳಿರುವ ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಯಾಗಿ, ನಾಯಕರಾಗಿ ಬೆಳೆದು ಮಂತ್ರಿಯಾಗಿದ್ದು ಸುಲಭದ ಮಾತಲ್ಲ, ಇದೆಲ್ಲಾ ರಾಜಣ್ಣನವರಿಗೂ ತಿಳಿದ ವಿಷಯವೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇವರನ್ನು ಮಂತ್ರಿ ಮಾಡಲೇ ಬೇಕೆಂದು ಪಟ್ಟು ಹಿಡಿದು ಮಂತ್ರಿ ಮಾಡಿದರು, ಅವರು ಕೇಳಿದ ಸಹಕಾರ ಇಲಾಖೆಯ ಸಚಿವರನ್ನಾಗಿ ಮಾಡಿದರು, ಈ ಮಂತ್ರಿ ಸ್ಥಾನ ಕೊಡಿಸುವಾಗ ಏನೆಲ್ಲಾ ಹೈ ಡ್ರಾಮಗಳು ನಡೆದವು ಎಂಬುದು ರಾಜಣ್ಣನವರಿಗೆ ತಿಳಿಯದ ವಿಷಯವೇನಲ್ಲ.

ಜಿಲ್ಲೆಯ ಮತ್ತೊಬ್ಬ ಹಿರಿಯ ನಾಯಕನಿಗೆ ಮಂತ್ರಿ ಸ್ಥಾನವನ್ನು ನೀಡದೆ ಇವರನ್ನು ಪರಿಗಣಿಸಿದಾಗ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ವಿರುದ್ಧವಾಗಲಿ, ಪರವಾಗಲಿ ವಕಾಲತ್ತು ವಹಿಸುವ ಕೆಲಸ ಬೇಕಿರಲಿಲ್ಲ ತಮ್ಮ ಸಹಕಾರ ಇಲಾಖೆಯಲ್ಲಿ ಒಳ್ಳೆಯ ಕೆಲಸಕ್ಕೆ ಒತ್ತು ನೀಡಿ, ಟಿವಿ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾಗಳಿಗೆ ತಮ್ಮ ಇಲಾಖೆಯ ಮಾಹಿತಿಯಷ್ಟೇ ನೀಡಿದ್ದರೆ ಇಂದು ಸಚಿವ ಸ್ಥಾನ ಕಳೆದುಕೊಳ್ಳುವ ಹಂತಕ್ಕೆ ಹೋಗುತ್ತಿರಲಿಲ್ಲವೇನೋ.

ಒಬ್ಬ ರಾಷ್ಟ್ರೀಯ ಪಕ್ಷದ ನಾಯಕ ಆಡಳಿತ ಪಕ್ಷವನ್ನು ಮಣಿಸಲು ಹಲವಾರು ತಂತ್ರಗಾರಿಕೆಯನ್ನು ಎಣೆಯುತ್ತಿರುವಾಗ, ಆತನಿಗೆ ಹೆಗಲಾಗಿರಬೇಕು, ಹೆಗಲ ಮೇಲೆ ಕೂರಬಾರದು.

ಇಡೀ ರಾಷ್ಟ್ರದಲ್ಲಿ ಬಿಜೆಪಿಯನ್ನು ಮಣಿಸಲೇ ಬೇಕೆಂದು ತನ್ನ ಎದೆಯ ಮೇಲೆ ಪಕ್ಷದ ಜವಾಬ್ದಾರಿಯನ್ನು ಎಳೆದುಕೊಂಡು ಗಿರ ಗಿರನೇ ತಿರುಗುತ್ತಿರುವಾಗ, ತನ್ನದೇ ಪಕ್ಷದ, ತಾವೇ ಮಾಡಿದ ಸಚಿವರೊಬ್ಬರು ನಾಯಕನಿಗೆ ಇರಿಸು-ಮುರಿಸು ಆಗುವ ರೀತಿಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದಾಗ ವಿರೋಧ ಪಕ್ಷಗಳಿಗೆ ಇವರೆ ದೊಣ್ಣೆ ಕೊಟ್ಟಂತಾಯಿತು ಎಂಬ ಭಾವನೆ ರಾಷ್ಟ್ರೀಯ ನಾಯಕರಲ್ಲಿ ಮೂಡುವುದರಲ್ಲಿ ಅನುಮಾನವಿಲ್ಲ.

ಈ ಹಿಂದೆ ಕಾಂಗ್ರೆಸ್ ಸಹ ಅಧಿಕಾರಕ್ಕಾಗಿ ವಿರೋಧ ಪಕ್ಷಗಳಿಗೆ ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡಿದೆ, ಅದೆಲ್ಲಾ ಮರೆತು ಹೋಗುವುದಿಲ್ಲ, ಕಾಂಗ್ರೆಸ್‍ನವರು ನೆಹರು ಕುಟುಂಬಕ್ಕೆ ರಾಜಿ ಮನೋಭಾವ ಮತ್ತು ಗುಲಾಮಗಿರಿಯನ್ನು ಒಪ್ಪಿಕೊಂಡಿದ್ದಾರೆ, ಇದನ್ನು ರಾಜಣ್ಣನವರು ಸಹ ಒಪ್ಪಬೇಕಿತ್ತು ಎಂಬುದು ಕಾಂಗ್ರೆಸ್‍ನ ಹಿರಿಯ ನಾಯಕರು ಹೇಳುತ್ತಾರೆ.

ರಾಜಣ್ಣನವರು ಹೈಕಮಾಂಡ್ ಬಗ್ಗೆ ಮಾತನಾಡುವಾಗ ರಾಹುಲ್ ಗಾಂಧಿ ಒಬ್ಬ ರಾಷ್ಟ್ರೀಯ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಲ್ಲದೆ ಪ್ರಧಾನಿ ನಂತರದ ಸ್ಥಾನ ವಿರೋಧ ಪಕ್ಷದ ನಾಯಕನಿಗಿರುತ್ತದೆ, ಮತಗಳ್ಳತನದ ಬಗ್ಗೆ ಒಂದು ಧ್ವನಿ ಎತ್ತಿ, ಬಿಜೆಪಿ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ ರಾಹುಲ್ ಗಾಂಧಿ, ಈ ಬಿಜೆಪಿ ವಿರುದ್ಧ ಮಾಡಿದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದಿದ್ದರೆ ಸಾಕಾಗಿತ್ತು.

ಇಂದು ಮತದಾರರು ಸಹ ಭ್ರಷ್ಟರಾಗಿಯೇ ಮತದಾನ ಮಾಡುತ್ತಿರುವುದರಿಂದ ಎಲ್ಲಾ ಪಕ್ಷದವರು ಚುನಾವಣೆಯಲ್ಲಿ ಹಣ, ಹೆಂಡ ಹಂಚುತ್ತಾರೆನ್ನಲಾಗುತ್ತಿದೆ, ಗೆದ್ದವರು ಹಣ ಹಂಚಿಲ್ಲವೆ, ಇದು ಅಡ್ಡ ದಾರಿಯಾಗುವುದಲ್ಲವೆ, ಚುನಾವಣೆಯ ಪಾವಿತ್ರ್ಯತೆ ಎಲ್ಲಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿತ್ತು.

ಚುನಾವಣೆಯಲ್ಲಿ ಹಣ ಖರ್ಚು ಮಾಡದೆ, ಪ್ರಾಮಾಣಿಕ, ಕೆಲಸ ಮಾಡಿದ್ದೇನೆ ಯಾರಿಗೂ ಹಣ ನೀಡುವುದಿಲ್ಲ ಎಂದು ಚುನಾವಣೆ ಎದುರಿಸಿ ಗೆಲ್ಲಲು ಸಾಧ್ಯವೆ! ಇತರೆ ಪಕ್ಷದವರು ಹಂಚುವಾಗ ಸುಮ್ಮನಿರಲು ಸಾಧ್ಯವೆ, ಇದೆಲ್ಲಾ ರಾಜಕಾರಿಣಿಗಳು ಬಹಿರಂಗ ಪಡಿಸಲು ಆಗದಂತಹ ಸತ್ಯ, ಇಂದು ನಡೆಯುತ್ತಿರುವುದು ಮತದಾನ ಅಲ್ಲ, ಮತ ಖರೀದಿ ಮತ್ತು ಮತ ಮಾರಾಟ ನಡೆಯುತ್ತಾ ಇದೆ ಎಂಬುದು ಬಹಿರಂಗ ಸತ್ಯ.

ಯಾರು ಇಲ್ಲಿ ಬಿಡ್ ಜಾಸ್ತಿ ಮಾಡುತ್ತಾರೋ ಅವರು ಗೆಲ್ಲುತ್ತಾರೆ, ನೋ ಡೆಮಾಕ್ರಸಿ ಇನ್ ಇಂಡಿಯಾ ಅನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ, ಪ್ರಜಾಪ್ರಭುತ್ವ ಉಳಿಸಬೇಕೆಂದು ಮತದಾನ ಮಾಡುವವರು ಶೇಕಡ 10%ರಷ್ಟಿರಬಹುದು, ಇನ್ನೆಲ್ಲಾ ಜಾತಿಗಾಗಿ ಮತ ಹಾಕುವವರು, ಮತ ಮಾರಾಟ ಮಾಡಿಕೊಳ್ಳುವವರೆ ಹೆಚ್ಚಿದ್ದಾರೆ.

ಇದೆಲ್ಲಾ ಗೊತ್ತಿರುವ ವಿಷಯವೇ, ಬಿಜೆಪಿಯವರ ಬರ್ನಿಂಗ್ ಪ್ಲೇಮ್‍ನ್ನು ತಣ್ಣಗೆ ಮಾಡಲು ರಾಹುಲ್ ಗಾಂಧಿ ಮಾರ್ಗವೊಂದನ್ನು ಹುಡುಕಿಕೊಂಡಿದ್ದಾರೆ, ಇದು ಸರಿಯೋ, ತಪ್ಪೋ, ಇದೊಂದು ಇಸ್ಯೂ ಆಗುವುದಲ್ಲದೆ ಬಿಜೆಪಿಗೆ ಹಿನ್ನಡೆಯಾದರು ಆಗಬಹದು, ಜನರಲ್ಲಿಯೂ ಹೀಗೂ ಆಗುತ್ತದೆಯೆ ಎಂಬ ಚರ್ಚೆ ನಡೆಯ ಬಹುದು.

ಈ ಮುಂದಾಲೋಚನೆ ರಾಜಣ್ಣನವರಲ್ಲಿದ್ದು, ಜಿಲ್ಲೆಯ ಹಲವು ಬೇರೆ ಪಕ್ಷದ ಶಾಸಕರನ್ನು, ಸಂಸದರನ್ನು ನಾನೇ ಗೆಲ್ಲಿಸಿದ್ದು ನ್ನುವ ಹೇಳಿಕೆಗಳು, ಮಾಜಿ ಪ್ರಧಾನಿ ದೇವೆಗೌಡರು ನಿಂತಾಗ ಸೋನಿಯಾಗಾಂಧಿಯವರು ದೇವೇಗೌಡರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಡಾ.ಜಿ.ಪರಮೇಶ್ವರ್ ಹೆಗಲಿಗೆ ಹಾಕಿದಾಗ, ಪರಮೇಶ್ವರ್ ಮೇಲಿನ ಮುನಿಸು, ಸಿಟ್ಟಿಗೆ ಇವರು ಕಾಂಗ್ರೆಸ್ ನಲ್ಲಿ ಇದ್ದುಕೊಂಡು ದೇವೇಗೌಡರನ್ನು ಸೋಲಿಸಿದ್ದು ನಾನೇ ಎಂದು ಹೇಳಿದಾಗ ಯಾವ ಕಾಂಗ್ರೆಸ್‍ನ ಹೈಕಮಾಂಡ್ ಆಗಲಿ, ನಾಯಕರಾಗಲಿ ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವೆ, ಇವನ್ನೆಲ್ಲಾ ಸೈಡ್ ಲೈನ್ ಮಾಡಿ ರಾಜಣ್ಣನವರನ್ನು ಪಕ್ಷದಲ್ಲೇ ಇರಿಸಿಕೊಂಡ ನಾಯಕರಿಗೆ ವಿದೇಯರಾಗಿರಬೇಲ್ಲವೆ.

ಇವರನ್ನು ಸಚಿವ ಸಂಪುಟದಿಂದ ವಜಾ ಮಾಡಿದಾಗ ಇವರ ಬೆಂಬಲಕ್ಕೆ ಕಾಂಗ್ರೆಸ್‍ನ ಯಾವ ನಾಯಕರೂ ಯಾಕೆ ನಿಲ್ಲಲಿಲ್ಲ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಪ್ರಜ್ಞಾವಂತ ಬುದ್ದಿಜೀವಿಗಳನ್ನು ಕೆ.ಎನ್.ರಾಜಣ್ಣನವರು ಜೊತೆಯಲ್ಲಿ ಇಟ್ಟುಕೊಳ್ಳಬೇಕಿತ್ತು, ಅದು ಮಾಡದೆ ಹೊಗಳು ಭಟರೆ ಇವರ ಜೊತೆ ಇದ್ದದ್ದು ಹೆಚ್ಚು, ದೊಡ್ಡ ರಾಜಕೀಯ ತಜ್ಞರ ಸಲಹೆಗಳನ್ನು ತೆಗೆದುಕೊಳ್ಳುವ ಗುಣ ಇರಬೇಕಿತ್ತು, ಸಚಿವರಾದವರಿಗೆ ಆ ಸ್ಥಾನಕ್ಕೆ ಫಿಟ್ಟಾದ ಅರಿ-ಗುರುವನ್ನು ಎಡಬಲದಲ್ಲಿ ಇಟ್ಟುಕೊಳ್ಳಬೇಕೆಂದು ಸಿದ್ದರಾಮಯ್ಯ, ದೇವೇಗೌಡರನ್ನು ನೋಡಿ ಕಲಿಯಬೇಕಿತ್ತು.

ಸುದ್ದಿಗಾರರೊಂದಿಗೆ ಮಾತನಾಡುವಾಗ ಜಾಣ್ಮೆ-ತಾಣ್ಮೆ, ಚಾಕು ಚಕ್ಕತೆ ಇರಬೇಕು, ಹುಂಬತನ ಇಲ್ಲಿ ಬೇಕಿರುವುದಿಲ್ಲ, ಯಾರನ್ನೂ ಮೆಚ್ಚಿಸಬೇಕಿಲ್ಲ, ಮೊದಲು ತನ್ನನ್ನು ಅರಿತು ಪರರ ಅರಿಯಬೇಕೆಂದು ಹಿರಿಯರು ಹೇಳಿದ್ದಾರೆ.

ತಮ್ಮ 75ರ ವಯಸ್ಸಿನಲ್ಲಿ ಒಳ್ಳೆಯ ಸಚಿವ ಪದವಿ ಸಿಕ್ಕಿದ್ದನ್ನು ಉಳಿಸಿಕೊಳ್ಳಬೇಕಿತ್ತು. ಆಡಿದ ಮಾತು ಆನೆ ಕೊಟ್ಟರು ವಾಪಸ್ಸು ತೆಗೆದುಕೊಳ್ಳಲು ಆಗುವುದಿಲ್ಲವಂತೆ, ಒಂದು ಸಣ್ಣ ಮಾತ್ತೊಂದು ಸಚಿವ ಸ್ಥಾನ ಹೋಗುವಂತೆ ಮಾಡಿದ್ದು ನಿಜಕ್ಕೂ ಮಾತಿಗೆ ತೂಕ, ಬೆಲೆ ಎಲ್ಲಾ ಇದೆ.

ರಾಜಕಾರಣಿಗಳಿಗೆ ಅಧಿಕಾರ ಮತ್ತು ಹಣ ಶಾಶ್ವತ ವಲ್ಲ, ಮಾಡಿದ ಕೆಲಸ ಶಾಶ್ವತ ಎಂಬುದು ತಿಳಿದಿರಬೇಕು, ತಾನು ಬೆಳೆದು ಇತರರನ್ನು ಬೆಳೆಸುವ ಗುಣವಿರಬೇಕು, ತೆಗಳುವ ಗುಣ ದೂರವಿರಬೇಕು, ಜನರನ್ನು ಅಪ್ಪಿಕೊಳ್ಳುವ ಕರುಣೆ ಇರಬೇಕು, ದರ್ಪ ಇರಬಾರದು.

ತುಂಬಾ ದೂರ ರಾಜಕೀಯ ದಾರಿ ಸವೆಸಿ ಗಳಿಸಿದ ಪದವಿಯನ್ನು ಇರುವಷ್ಟು ದಿನ ಅದನ್ನು ಅನುಭವಿಸುವ ಚಾಣಕ್ಷತೆ ರಾಜಣ್ಣನವರಿಗೆ ಬರಲಿಲ್ಲವೇನೋ, ಅವರು ಈಗ ನನ್ನ ತಪ್ಪಿಲ್ಲ ಎಂಬುದನ್ನು ಹೈಕಮಾಂಡ್‍ಗೆ ಮನದಟ್ಟು ಮಾಡಲು ಸಾಧ್ಯವೆ, ಅದನ್ನು ನಂಬಲು ಇತರರು ಬಿಡುತ್ತಾರೆಯೇ ಎಂಬುದೇ ಈಗಿರುವ ಪ್ರಶ್ನೆ.

ಸಿದ್ದರಾಮಯ್ಯ ಮತ್ತೆ ಮಂತ್ರಿ ಮಾಡಿ ಎಂದು ಹೇಳಲು ಸಾಧ್ಯವಿದೆಯೆ, ಅವರು ಸಹ ಯಾವಾಗ ಬೇಕಾದರೂ ಕುರ್ಚಿಯಿಂದ ಇಳಿಯಬಹುದು.

ಒಂದು ವ್ಯವಸ್ಥೆಯ ಪರಿಮಿತಿಯಲ್ಲಿರುವಾಗ ಅದರ ಮಿತಿಯೊಳಗೆ ಇರಬೇಕು, ಅದನ್ನು ಮೀರಿದಾಗ ಸಿದ್ದರಾಮಯ್ಯ ಆಗಲಿ, ಡಿ.ಕೆ.ಶಿವಕುಮಾರ್ ಆಗಲಿ, ಪರಮೇಶ್ವರ್ ಅಗಲಿ ಏನು ಮಾಡಲು ಸಾಧ್ಯವಿಲ್ಲ.

ಕೆ.ಎನ್.ರಾಜಣ್ಣನವರ ವಜಾ ಕಾಂಗ್ರೆಸ್ ಪಕ್ಷದ ಹಲವು ನಾಯಕರು, ಸಚಿವರು, ಶಾಸಕರಿಗೆ ನೋವಿರಬಹುದು ಆದರೆ ಅವರೆಲ್ಲಾ ಮಾತನಾಡಲು ಆಗದ ಮಾಸ್ಕ್ ನಡಿಯಲ್ಲಿದ್ದಾರೆ ಎಂಬುದು ಜಗತ್ತಿಗೆ ತಿಳಿದ ಸತ್ಯ.

ರಾಜಣ್ಣನವರಿಗೆ ಮತ್ತೆ ಒಳ್ಳೆಯ ದಿನಗಳು ಬರಲಿ ಎಂಬುದೇ ನನ್ನ ಆಶಯವಾಗಿದೆ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *