ತುಮಕೂರು:ಒಂದು ಸಾಧಾರಣ ಕುಟುಂಬದಲ್ಲಿ ಹುಟ್ಟಿ, ರಾಜ್ಯದ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು,ಹಿತೈಷಿಗಳು ಜೂ.21 ರಂದು ಆಯೋಜಿಸಿರುವ ಅಮೃತ ಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ,2005ರಲ್ಲಿ ನಡೆದ ಅಹಿಂದ ಕಾರ್ಯಕ್ರಮಕ್ಕೆ ಸರಿಸಮವಾದ ಕಾರ್ಯಕ್ರಮವಾಗಲಿದೆ ಎಂದು ಅಭಿನಂದನಾ ಗ್ರಂಥ ಸಂಪಾದನಾ ಸಮಿತಿ ಅಧ್ಯಕ್ಷ ಎಸ್.ನಾಗಣ್ಣ ತಿಳಿಸಿದರು.
ಗೆಳೆಯರ ಬಳಗದ ಎನ್.ಗೋವಿಂದರಾಜು ಅಧ್ಯಕ್ಷತೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕೆ.ಎನ್.ರಾಜಣ್ಣ ಅಭಿಮಾನಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2005ರ ಜೂನ್ 21 ರಂದು ಅಹಿಂದ ಸಮಾವೇಶವನ್ನು ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿತ್ತು. ಸುಮಾರು 1.50 ಲಕ್ಷ ಜನರು ಪಾಲ್ಗೊಂಡಿದ್ದರು.ಎಲ್ಲ ವರ್ಗದ ಜನರ ಪ್ರೀತಿ, ನಂಬಿಕೆ ಗಳಿಸಿರುವ ಕೆ.ಎನ್.ರಾಜಣ್ಣ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಸಹ ಮತ್ತೊಂದು ಅಹಿಂದ ಸಮಾವೇಶದಂತೆ ಜನರ ಮನಸ್ಸಿನಲ್ಲಿ ಉಳಿಯಲಿದೆ ಎಂದರು.
ಈಗಾಗಲೇ ಎರಡು ಬಾರಿ ಈ ಕಾರ್ಯಕ್ರಮವನ್ನು ಕೆಲ ತುರ್ತು ಕಾರಣಗಳಿಂದ ಮುಂದೂಡಲಾಗಿದೆ.ಹಾಗಾಗಿ ಕೆ.ಎನ್.ರಾಜಣ್ಣ ಅವರ ಅಮೃತಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದೆ.ರಾಜ್ಯದ ಮೂಲೆ ಮೂಲೆಗಳಿಂದ 1.50 ಲಕ್ಷಕ್ಕೂ ಅಧಿಕ ಕೆ.ಎನ್.ಆರ್.ಅವರ ಅಭಿಮಾನಿಗಳು, ಹಿತೈಷಿಗಳು, ಸಹಕಾರಿ ಧುರೀಣರುಗಳು ಭಾಗವಹಿಸಲಿದ್ದಾರೆ.ಸಹಕಾರ ಸಚಿವರಾಗಿರುವ ಕೆ.ಎನ್.ರಾಜಣ್ಣ ಅವರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಅಭಿಮಾನಿಗಳನ್ನು ಹೊಂದಿದ್ದಾರೆ.ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕಾಗಿದೆ ಎಂದು ಎಸ್.ನಾಗಣ್ಣ ನುಡಿದರು.
ಬಯಲು ಸೀಮೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜು ಮಾತನಾಡಿ, ಸಹಕಾರಿ ಸಚಿವರಾದ ಕೆ.ಎನ.ರಾಜಣ್ಣ ಅವರ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವ ಸಂಪುಟದ ಸಹದ್ಯೋಗಿಗಳು,ಕೇಂದ್ರದ ಮಂತ್ರಿಗಳು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಮಾಜಿ ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ.ಟಿ.ಎ.ಪಿ.ಸಿ.ಎಂ ಎಸ್‍ನ ಸದಸ್ಯರಾಗುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟ ಕೆ,ಎನ್.ರಾಜಣ್ಣನವರು ಶಾಸಕರಾಗಿ,ಅವರ ಜೀವನದ ಆಸೆಯಂತೆ ಸಹಕಾರಿ ಮಂತ್ರಿಯಾಗಿದ್ದಾರೆ.ಅಲ್ಲದೆ ಕಳೆದ 25 ವರ್ಷಗಳಿಂದ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ನಮ್ಮ ಕಾರ್ಯಕ್ರಮವೆಂಬಂತೆ ನಾವುಗಳೆಲ್ಲರೂ ಸೇರಿ ಆಚರಿಸಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ಹಾಗೂ ಗೆಳೆಯರ ಬಳಗದ ಅಧ್ಯಕ್ಷ ಎನ್.ಗೋವಿಂದರಾಜು ಮಾತನಾಡಿ, ಜೂನ್ 21 ರ ಶನಿವಾರ ನಡೆಯುವ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ಹಾಗಾಗಿ ತುಮಕೂರು ನಗರದ 35 ವಾರ್ಡುಗಳಿಂದ ಕನಿಷ್ಠ 30 ಸಾವಿರಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾಗಿದೆ.ಚಾಮರಾಜನಗರದಿಂದ ಬೀದರ್‍ವರೆಗೆ ಕೆ.ಎನ್.ರಾಜಣ್ಣ ಅವರ ಅಭಿಮಾನಿಗಳಿದ್ದಾರೆ.ಸಹಕಾರಿ ಕ್ಷೇತ್ರದಲ್ಲಿ ಕೆ.ಎನ್,ಆರ್.ಅವರಿಂದ ಒಂದಿಲೊಂದು ರೀತಿಯ ಸಹಾಯ, ಸಹಕಾರವನ್ನು ಜನರು ಪಡೆದಿದ್ದಾರೆ.ಅವರ ಸೇವೆ ಹೆಚ್ಚಿನದಾಗಿ ತುಮಕೂರು ಜಿಲ್ಲೆಗೆ ಸಂದಿದೆ. ಹಾಗಾಗಿ ತುಮಕೂರು ಜಿಲ್ಲೆಯ ಜನರು ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ.ದಲಿತ ಪರ ಸಂಘಟನೆಗಳ ಮುಖಂಡರು,ಕನ್ನಡಪರ ಸಂಘಟನಗಳ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಮನಸ್ಸಿನಲ್ಲಿ ಉಳಿಯುವ ಕಾರ್ಯಕ್ರಮವಾಗಿಸೋಣ ಎಂದರು.
ಕನ್ನಡ ಸೇನೆಯ ಧನಿಯಕುಮಾರ್ ಮಾತನಾಡಿ, ಸರಕಾರದ ಶೂ ಭಾಗ್ಯ ಯೋಜನೆ ಸೇರಿದಂತೆ, ಸಾವನ್ನಪ್ಪಿದ ಸಾಲಗಾರರ ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದ ಕೆ.ಎನ್.ರಾಜಣ್ಣನವರು ಪ್ರಸ್ತುತ ದೇವರಾಜ ಅರಸು ಇದ್ದಂತೆ. ಹಾಗಾಗಿ ಅವರ ಕಾರ್ಯಕ್ರಮ ಯಶಸ್ವಿಗೊಳಿಸಲು ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.
ಈಲ್ಲಾ ಕಾಂಗ್ರೆಸ್ ಮಹಿಳಾ ಘಟಕ ಮಾಜಿ ಮೇಯರ್ ಗೀತಾ ರುದ್ರೇಶ್,ಸುಜಾತ, ಕಾರ್ಪೋರೇಟರ್ ನಯಾಜ್, ಮುಖಂಡರಾದ ರೇವಣಸಿದ್ದಯ್ಯ,ಕನ್ನಡಸೇನೆಯ ಧನಿಯಕುಮಾರ್ ಅವರುಗಳು ಮಾತನಾಡಿದರು.ವೇದಿಕೆಯಲ್ಲಿ ಪಿ.ಮೂರ್ತಿ, ಅಡಿಟರ್ ಸುಲ್ತಾನ್ ಮೊಹಮದ್,ಜಾತ್ಯಾತೀತ ಯುವ ವೇದಿಕೆಯ ವಿರೂಪಾಕ್ಷ ಡ್ಯಾಗೇರಹಳ್ಳಿ, ಷಣ್ಮುಖಪ್ಪ, ಮಹೇಶ್, ಸೌಭಾಗ್ಯ, ಕವಿತ,ಅಖಿಲ ಕರ್ನಾಟಕ ಕುಳುವ ಮಹಾಸಭಾ ಜಿಲ್ಲಾಧ್ಯಕ್ಷ ಲೋಕೇಶ್ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.