ತುಮಕೂರು : ತುಮಕೂರು ಜಿಲ್ಲಾಧಿಕಾರಿಗಳನ್ನಾಗಿ ಕೆ.ಶ್ರೀನಿವಾಸ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ರವೀಂದ್ರ.ಪಿ.ಎನ್. ಅವರು ಸೇರಿದಂತೆ 10 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರನ್ನು ಕೃಷಿ ಇಲಾಖೆಯ ಆಯುಕ್ತರನ್ನಾಗಿ ಸರ್ಕಾರ ನೇಮಕ ಮಾಡಿ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿಯಾಗಿ ಬರಲು ಕೆಲ ಐಎಎಸ್ ಅಧಿಕಾರಿಗಳು ಪ್ರಯತ್ನ ಮಾಡಿದ್ದರು.
ಈಗ ಅಂತಿಮವಾಗಿ ಈ ಹಿಂದೆ ಬೆಂಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಕೆ. ಶ್ರೀನಿವಾಸ್ ಅವರನ್ನು ತುಮಕೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಇಂದು ಸರ್ಕಾರ ಆದೇಶ ಮಾಡಿದೆ.
ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರಾಗಿದ್ದ ರವೀಂದ್ರ ಪಿ.ಎನ್. ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ರವೀಂದ್ರ ಪಿ.ಎನ್. ಅವರು ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಧಿಕಾರಿಯಾಗಿ, ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ರವೀಂದ್ರ.ಪಿ.ಎನ್. ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕು ಪಂಚನಹಳ್ಳಿಯವರು.