ತುಮಕೂರು : ಕ್ವಿಂಟಾಲ್ ಕೊಬ್ಬರಿಗೆ 15ಸಾವಿರ ನಿಗದಿ ಪಡಿಸುವಂತೆ ರೈತ ಮುಖಂಡ ಕೆ.ಟಿ.ಶಾಂತಕುಮಾರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಟ್ರಾಕ್ಟರ್ ರ್ಯಾಲಿಯು ಯಾವುದೇ ಅಹಿತಕರ ನಡೆಯದಂತೆ ಶಾಂತ ರೀತಿಯಲ್ಲಿ ಯಶಸ್ವಿಯಾಗಿ ನಡೆಯಿತು.
ನಗರದ ಸ್ವಾತಂತ್ರ ಚೌಕದಿಂದ ಹೊರಟ ರೈತರ ಮೆರವಣಿಗೆ ಮಂಡಿಪೇಟೆ ರಸ್ತೆ, ಜೆಸಿ ರಸ್ತೆ ಮೂಲಕ ಟೌನ್‍ಹಾಲ್ ತಲುಪಿ, ಕೆಲ ಕಾಲ ಧರಣಿ ನಡೆಸಿದರು. ನಂತರ ಶ್ರೀಶಿವಕುಮಾರಸ್ವಾಮೀಜಿ ಸರ್ಕಲ್, ಬಟವಾಡಿ ತಲುಪಿ, ತದನಂತರ ಕೋತಿ ತೋಪು ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು.
ಸ್ವತಂತ್ರ ಚೌಕದಿಂದ ಹೊರಟ ಟ್ರಾಕ್ಟರ್ ಮತ್ತು ಆಟೋ ರ್ಯಾಲಿಯು ತುಮಕೂರು ಜನತೆಯನ್ನು ನಿಬ್ಬೆರಗುಗೊಳ್ಳುವಂತೆ ಮಾಡಿತು, ಇಡೀ ತುಮಕೂರು ರೈತರ ಪ್ರತಿಭಟನೆಯ ಟ್ರಾಕ್ಟರ್‍ಗಳಿಂದ ರಂಗೇರಿ ಇಡೀ ಪ್ರಮುಖ ರಸ್ತೆಗಳೆಲ್ಲಾ ರೈತರಿಂದ ತುಂಬಿ ಟ್ರಾಫಿಕ್ ಜಾಮ್ ಉಂಟಾಯಿತು.
ಅರ್ಧ ಕಿ.ಮೀ.ಗಿಂತ ಹೆಚ್ಚು ಉದ್ದವಿದ್ದ ರ್ಯಾಲಿಯ ನೇತೃತ್ವವನ್ನು ತಿಪಟೂರಿನ ರೈತ ಮುಖಂಡ ಕೆ.ಟಿ. ಶಾಂತಕುಮಾರ್ ವಹಿಸಿದ್ದರು.
ಅಷ್ಟು ಉದ್ದದ ರ್ಯಾಲಿ ತುಮಕೂರಿನ ಪ್ರಮುಖ ರಸ್ತೆಗಳಲ್ಲಿ ನಡೆದರೂ ಯಾವುದೇ ಸಣ್ಣ ಅಹಿತಕರ ಘಟನೆ ನಡೆಯದೆ ಅಚ್ಚುಕಟ್ಟಾಗಿ ನಡೆದಿದ್ದರಿಂದ ರೈತರ ಶಿಸ್ತನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮೆಚ್ಚಿಗೆ ವ್ಯಕ್ತಪಡಿಸಿತು.
ಇಷ್ಟೇ ಅಲ್ಲದೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆಯೇ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು ಬಂದಂತಹ ಎಲ್ಲರಿಗೂ ಊಟವನ್ನು ನೀಡಿದ್ದು ಇಡೀ ರೈತ ಸಮುದಾಯ ಮತ್ತು ಜಿಲ್ಲಾಧಿಕಾರಿಗಳ ಕಛೇರಿ ನೌಕರರು, ವಕೀಲರುಗಳು ತುಂಬಾ ಮೆಚ್ಚಿಗೆ ವ್ಯಕ್ತ ಪಡಿಸಿ, ಕೆ.ಟಿ.ಶಾಂತಕುಮಾರ್ ಅವರ ಶ್ರಮವನ್ನು ಶ್ಲಾಘಿಸಿದ್ದಾರೆ.
ರೈತರ ಟ್ರಾಕ್ಟರ್ ರ್ಯಾಲಿಯು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಸಮಾವೇಶಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಮುಕ್ತಾಯಗೊಂಡಿತು. ರೈತರ ಆಹೋರಾತ್ರಿ ಧರಣಿ ಮುಂದುವರೆದಿದ್ದು, ಕೊಬ್ಬರಿಗೆ 15ಸಾವಿರ ಬೆಲೆ ನಿಗದಿಯಾಗುವವರೆಗೂ ಅಹೋರಾತ್ರಿ ಧರಣಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.