ತುಮಕೂರು: ಕರ್ನಾಟಕದ ಪ್ರಾಕೃತಿಕ ಸಂಪತ್ತು ಎಷ್ಟು ಹಿರಿದೋ ಅದಕ್ಕಿಂತಲೂ ಹಿರಿದಾದದ್ದು ನಾಡಿನ ಆತ್ಮಶ್ರೀ. ಈ ಆತ್ಮ ಸಂಪತ್ತು ಕನ್ನಡ ನಾಡಿನಲ್ಲಿ ಜನಿಸಿ ನಾಡಿಗಾಗಿ ತಮ್ಮ ತನುಮನ ಧನವನ್ನು ಅರ್ಪಿಸಿದ ಅನೇಕ ಮಹನೀಯರ ಜೀವನ ಗಾತದಿಂದ ನಾಡಿನ ಆತ್ಮ ಸಂಪತ್ತು ವೃದ್ಧಿಯಾಗಿದೆ ಎಂದು ಎಂದು ಖ್ಯಾತ ಜ್ಞಾನ ಬುತ್ತಿ ಅಧ್ಯಕ್ಷರಾದ ಶ್ರೀ ಮುರಳಿ ಕೃಷ್ಣಪ್ಪನವರು ಅಭಿಪ್ರಾಯ ಪಟ್ಟರು.
ನಗರದ ಶ್ರೀ ಸಿದ್ದಾರ್ಥ ವ್ಯವಹಾರ ನಿರ್ವಹಣಾ ಅಧ್ಯಯನ ಕೇಂದ್ರ ಗುರುವಾರದಂದು ಆಯೋಜಿಸಿದ್ದ ದೇಸಿ ಸೊಬಗು ಕನ್ನಡ ಮೆರಗು’ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡುತ್ತಾ, ಕವಿರಾಜಮಾರ್ಗ ಕಾರನಾದ ಶ್ರೀವಿಜಯನಿಂದ ಹಿಡಿದು ಇಂದಿನವರೆಗೂ ಶತಶತಮಾನಗಳಿಂದಲೂ ಬಂದ ಖ್ಯಾತ ಕವಿಗಳು, ರಾಜಮನೆತನಗಳು, ವೀರ ಯೋಧರು, ಸರ್ವಶ್ರೇಷ್ಠ ಜ್ಞಾನ ಜಿಜ್ಞಾಸುಗಳಿಂದ ಕನ್ನಡ ನಾಡು ರೂಪಗೊಂಡಿದೆ ಹಾಗಾಗಿಯೇ ನಾಡಿನ ಆತ್ಮಸಂಪತ್ತು ಪ್ರಾಕೃತಿಕ ಸಂಪತ್ತಿಗಿಂತಲೂ ಹಿರಿದು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಿದೆ ಕನ್ನಡ ಭಾಷೆ ಹೆಚ್ಚು ಹೆಚ್ಚು ಬಳಕೆಯಿಂದ ನಾಡಿನ ಸಾಂಸ್ಕøತಿಕ ಮೂಲಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಯುವಜನರ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಶ್ರೀ ಮುರಳಿ ಕೃಷ್ಣಪ್ಪನವರು ಮನವರಿಕೆ ಮಾಡಿಕೊಟ್ಟರು.
ಎಸ್ ಎಸ್ ಐ ಟಿ ಕಾಲೇಜಿನ ಮುಖ್ಯ ಲೆಕ್ಕಾಧಿಕಾರಿಗಳಾದ ಸತೀಶ್ ಚಂದ್ರ ಮಾತನಾಡಿ ಒಳ್ಳೆಯ ಕವಿಗಳ ಕವಿತೆ ಕವನಗಳನ್ನು ಓದಿ ಅ ಕನ್ನಡದ ಸೊಬಗನ್ನು ಕಾಪಾಡಿಕೊಂಡು, ಉಳಿಸಿ, ಬೆಳಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಹಾಗೂ ತಮ್ಮ ಬಾಲ್ಯದ ದಿನಗಳಲ್ಲಿ ಆಚರಿಸುತ್ತಿದ್ದ ಕನ್ನಡ ರಾಜ್ಯೋತ್ಸವವನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ದೇಸಿ ಕ್ರೀಡೆಗಳಾದ ಚೌಕಾಬಾರ ಹಗ್ಗ ಜಗ್ಗಾಟ,ಕಬಡ್ಡಿ, ಕನ್ನಡ ರಸಪ್ರಶ್ನೆ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಸಿಕೊಟ್ಟರು.
ಎಸ್‍ಎಸ್‍ಐಬಿಎಂ ನ ಪ್ರಾಂಶುಪಾಲರಾದ ಡಾ.ಮಮತ ಜಿ ಅವರು ಮಾತನಾಡಿ ಎಂದಿನಂತೆ ಕನ್ನಡ ವಿಭಾಗದ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತ ಬಂದ್ದಿದ್ದೇವೆ ಹಾಗೆ ಈ ಬಾರಿಯು ಕನ್ನಡ ಹಬ್ಬದಲ್ಲಿ ಅನೇಕ ಸಾಂಸ್ಕೃತಿಕ ಸ್ಪರ್ಧೆ, ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡ ಅಜ್ಞಾತ ಸೇವಕ ಪ್ರಶಸ್ತಿಯನ್ನು ಎಸ್ ಎಸ್ ಐ ಟಿ ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಯೋಗಾಲಯ ಸಹಾಯಕರಾದ ಶ್ರೀ ಬಾಲಾಜಿ ಅವರಿಗೆ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅನೇಕ ವರ್ಷಗಳಿಂದ ನಿರಂತರವಾಗಿ ಕನ್ನಡ ಸೂಕ್ತಿಗಳನ್ನು ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ತಲುಪಿಸುವ ಅವರ ಸೇವೆಯನ್ನು ಪ್ರಶಂಸಿಸಿದರು. ಇವರ ಕನ್ನಡ ಸೇವೆ ಇತರರಿಗೆ ಮಾರ್ಗಸೂಚಕವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಾರ್ಥ ವ್ಯವಹಾರ ನಿರ್ವಹಣಾ ಕೇಂದ್ರದ ಎಲ್ಲಾ ವಿಭಾಗದ ಮುಖ್ಯಸ್ಥರು ಎಲ್ಲಾ ಅಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.