ತುಮಕೂರು- ರಾಜ್ಯದಲ್ಲಿ ಆ. 10 ರಿಂದ 15 ರೊಳಗೆ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿ ಮಾಡದಿದ್ದರೆ ಕರ್ನಾಟಕ ಬಂದ್ ಮಾಡಲಾಗುವುದು ಎಂದು ಎಂದು ಸಂಸದ ಗೋವಿಂದ ಕಾರಜೋಳ ಹಾಗೂ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಎಚ್ಚರಿಕೆ ನೀಡಿದರು.
ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿ ಮಾಡುವಲ್ಲಿ ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಆ. 1 ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಸರ್ಕಾರದ ವಿರುದ್ಧ ಮಾದಿಗ ಸಮುದಾಯ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ತಿಳಿಸಿದರು.
ಒಳಮೀಸಲಾತಿ ಜಾರಿ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿ ಒಂದು ವರ್ಷವಾದರೂ ಸಹ ರಾಜ್ಯದ ಕಾಂಗ್ರೆಸ್ ಸರ್ಕಾರ ಇನ್ನು ಅಂಕಿ-ಅಂಶಗಳನ್ನು ಸಂಗ್ರಹಿಸುವುದರಲ್ಲೇ ಕಾಲ ಹರಣ ಮಾಡುತ್ತಾ, ಮೀಸಲಾತಿ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಆದ್ದರಿಂದ ಸರ್ಕಾರದ ವಿರುದ್ಧ ಆ. 1 ರಂದು ಎಲ್ಲ ಜಿಲ್ಲಾಧಿಕಾರಿಗಳ ಮುಂದೆ ಪ್ರತಿಭಟನೆ, ಅಸಹಕಾರ ಚಳವಳಿ ನಡೆಸಲಾಗುವುದು ಎಂದರು.
ಸಮುದಾಯದ 30 ವರ್ಷಗಳ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ತೀರ್ಪು ನೀಡಿ 1 ವರ್ಷವಾದರೂ ಸಹ ಕರ್ನಾಟಕ ಸರ್ಕಾರ ಒಳಮೀಸಲಾತಿ ಜಾರಿಗೊಳಿಸದೆ ಮೀನಾಮೇಷ ಎಣಿಸುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೀಸಲಾತಿ ವಿರೋಧಿಗಳಾಗಿದ್ದಾರೆ ಎಂದು ಅವರು ಕಿಡಿಕಾರಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಸರ್ಕಾರದ ಈ ನೀತಿಯ ವಿರುದ್ಧ ಅಸಹಕಾರ ಚಳವಳಿ ನಡೆಸುವ ಜತೆಗೆ ಯಾವ ಹೋರಾಟ, ತ್ಯಾಗಕ್ಕೂ ಸಮುದಾಯ ಸಿದ್ದವಾಗಿದೆ ಎಂದರು.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ತೆಲಂಗಾಣ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಿ 9 ತಿಂಗಳು ಕಳೆದಿದೆ. ಹಾಗೆಯೇ ಹರಿಯಾಣ ಸರ್ಕಾರ ಜಾರಿ ಮಾಡಿ 7 ತಿಂಗಳಾಗಿದೆ. ಪಂಜಾಬ್‍ನಲ್ಲಿ ಈ ಸಂಬಂಧ ನೋಟಿಫಿಕೇಷನ್ ಆಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಒಳ ಮೀಸಲಾತಿ ಜಾರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.
ದಕ್ಷಿಣ ಭಾರತದಲ್ಲಿ ಮಾದಿಗ ಸಮುದಾಯ ಮೀಸಲಾತಿಯಿಂದ ವಂಚಿತವಾಗುತ್ತಿದೆ. ಮಾದಿಗ ಸಮುದಾಯಕ್ಕೆ ಶೇ. 5, ಬಲಗೈ ಸಮುದಾಯಕ್ಕೆ ಶೇ. 5, ಭೋವಿ ಮತ್ತು ಲಂಬಾಣಿ ಶೇ. 3, ಅಲೆಮಾರಿಗಳಿಗೆ ಶೇ. 1 ರಷ್ಟು ಮೀಸಲಾತಿ ಕಲ್ಪಿಸಿ ಕೊಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧುಸ್ವಾಮಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ನ್ಯಾ. ಸದಾಶಿವ ಸಮಿತಿಯಲ್ಲಿ ಗೊಂದಲ ಇರುವುದನ್ನು ಹಾಗೂ ಭೋವಿ ಮತ್ತು ಅಲೆಮಾರಿಗಳು ಮೀಸಲಾತಿಯಿಂದ ವಂಚಿತರಾಗುತ್ತಿರುವುದನ್ನು ಗಮನಿಸಿ ಶೇ. 15 ರಷ್ಟಿದ್ದ ಮೀಸಲಾತಿಯನ್ನು 17ಕ್ಕೆ ಏರಿಕೆ ಮಾಡಿದರು ಎಂದರು.
ಕಳೆದ 14 ವರ್ಷಗಳಿಂದ ಎಸ್ಸಿ ಆಯೋಗಕ್ಕೆ ಕರ್ನಾಟಕ ರಾಜ್ಯದಲ್ಲಿ ಭೋಮಿ ಮತ್ತು ಲಂಬಾಣಿ ಸಮುದಾಯನ್ನು ಮೀಸಲಾತಿಯಿಂದ ಹೊರಗಿಟ್ಟಿರುವುದು ಏಕೆ ಎಂದು ಪ್ರಶ್ನಿಸಿ ಪತ್ರ ಬರೆದಿದ್ದೆವು. ಯಾವ ಸರ್ಕಾರಗಳು ಈ ಪತ್ರವನ್ನು ಕಣ್ಣೆತ್ತಿ ನೋಡಿರಲಿಲ್ಲ. ಆದರೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಈ ಕುರಿತು ಪತ್ರ ಬರೆದು ಭೋವಿ ಸಮುದಾಯಕ್ಕೆ ಶೇ. 3 ರಷ್ಟಿದ್ದ ಮೀಸಲಾತಿಯನ್ನು ಶೇ. 4.5ಕ್ಕೆ ಹೆಚ್ಚಿಸುವಲ್ಲಿ ಶ್ರಮಿಸಿದರು ಎಂದು ಹೇಳಿದರು.
ಸಮುದಾಯದ ಜನರಿಗಾಗಿ ನಡೆಸುತ್ತಿರುವ ಈ ಹೋರಾಟ ಪಕ್ಷಾತೀತವಾಗಿದ್ದು, ಇದರಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ. ಸಮುದಾಯ ಎಲ್ಲ ಮುಖಂಡರು ಭಾಗಿಯಾಗುವ ಮೂಲಕ ಒಳಮೀಸಲಾತಿ ಜಾರಿಗೆ ಆಗ್ರಹಿಸಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ವೈ.ಹೆಚ್. ಹುಚ್ಚಯ್ಯ, ಪಾವಗಡ ಶ್ರೀರಾಮ್, ಡಾ. ಲಕ್ಷ್ಮೀಕಾಂತ್, ಅನಿಲ್‍ಕುಮಾರ್, ರಂಜನ್, ನರಸಿಂಹಮೂರ್ತಿ, ಆಂಜಿನಪ್ಪ, ದೀಪಕ್ ದೊಡ್ಡಯ್ಯ, ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.