ಶಿಕ್ಷಕ, ಲೇಖಕ, ವಾಗ್ಮಿ, ಸಾಂಸ್ಕøತಿಕ ಸಂಘಟಕ, ಕನ್ನಡ – ಕನ್ನಡಿಗ – ಕರ್ನಾಟಕಪರ ಹೋರಾಟಗಾರ ಕವಿತಾಕೃಷ್ಣ ಅವರು ದೈಹಿಕವಾಗಿ ನಮ್ಮನ್ನಗಲಿದ್ದಾರೆ. ತುಂಬಲಾಗದ ನಷ್ಟ ಎಂದು ಹೇಳಿದರೆ ಅದು ಕ್ಲೀಷೆಯಾಗುತ್ತದೆ. ಅಪಾರ ನೋವು ಅನುಭವಿಸುತ್ತಿದ್ದ ಅವರನ್ನು ಕ್ಯಾನ್ಸರ್ ಇನ್ನಿಲ್ಲದಂತೆ ಕಾಡುತ್ತಿತ್ತು, ಜೀವ ಹಿಂಡುತ್ತಿತ್ತು.
ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಕವಿತೆಯನ್ನು ಬರೆದು ಪುಸ್ತಕವನ್ನು ಪ್ರಕಟಿಸಿದ ಹೆಚ್ಚುಗಾರಿಕೆ ಕವಿತಾಕೃಷ್ಣರದ್ದು. ಸುಮಾರು ಅರವತ್ತೈದು ವರ್ಷಗಳ ಸುದೀರ್ಘ ಸಾಹಿತ್ಯದ ಪಯಣದಲ್ಲಿ ಅವರು ಬರೆದಿದ್ದು ಬೋಧಿಸಿದ್ದು, ಭಾಷಣ ಮಾಡಿದ್ದು, ಯುವ ಬರಹಗಾರರಿಗೆ ಬೆನ್ನುತಟ್ಟಿದ್ದು, ಪೆÇ್ರೀತ್ಸಾಹಿಸಿದ್ದು, ಇವುಗಳ ಲೆಕ್ಕ ಇಡಲಾಗದು. ಬೆಲೆ ಕಟ್ಟಲಾಗದು.
ಪೆÇ್ರ ಕೆಜಿಎನ್, ವೀಚಿ, ಎಚ್ಜಿಎಸ್, ನಾಯಕ್ ಇವರುಗಳ ಸಂಪರ್ಕದಲ್ಲಿ ಸಾಂಗತ್ಯದಲ್ಲಿ ಇದ್ದ ನಾನು ಕವಿತಾ ಅವರನ್ನು ದೂರದಿಂದμÉ್ಟೀ ನೋಡುತ್ತಿದ್ದೆ, ಎದುರಿಗೆ ಸಿಕ್ಕಾಗೊಮ್ಮೆ ನಮಸ್ಕರಿಸುತ್ತಿದ್ದೆ. ಏನ್ ನಿಮಗೆ ಕಾಲೇಜು ವಿಶ್ವವಿದ್ಯಾಲಯದಲ್ಲಿರುವ ಲೇಖಕರೇ ಬೇಕಾ? ನಮ್ಮಂತಹ ಕನ್ನಡದ ಪ್ರಥಮ ಓದುಗರಿಗಾಗಿ ಬರೆಯುವ, ಜನಸಾಮಾನ್ಯರಲ್ಲಿ ಕನ್ನಡ ಪ್ರಜ್ಞೆ ಮೂಡಿಸುವ, ಶ್ರೇಷ್ಠತೆಯ ವ್ಯಸನದಲ್ಲಿ ನರಳುವ ವಿದ್ವಾಂಸರು ಹೋಗಿಬರಲಾಗದ ಜಾಗಗಳಲ್ಲಿ ಹೋಗಿ ಸಾಹಿತ್ಯ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಯನ್ನು ಮೂಡಿಸಿಬರುವ ನಾವು ಬೇಡವೇ? ಎಂದು ಒಮ್ಮೊಮ್ಮೆ ನನ್ನನ್ನು ಕಿಚಾಯಿಸುತ್ತಿದ್ದರು.
ಇಂಥ ಕವಿತಾ ಅವರು 2015 ರ ಸುಮಾರಿನಲ್ಲಿ ಬಾಹ ಅವರು ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರ ಬೆಂಬಲಕ್ಕೆ ನಿಂತರು. ಜಿಲ್ಲೆಯಾದ್ಯಂತ ಓಡಾಡಿದರು. ಕೆಲಸ ಮಾಡಿದರು. ಆ ಸಂದರ್ಭದಲ್ಲಿ ನಾನು ಅವರೊಂದಿಗೆ ಕೈಜೋಡಿಸಿದೆ. ಅಲ್ಲಿಂದಾಚೆಗೆ, ಆರೇಳು ವರ್ಷಗಳಿಂದ ನಾನು ಕವಿತಾ ಅವರ ನಿಕಟ ಸಂಪರ್ಕಕ್ಕೆ ಬಂದೆ. ಅವರೊಂದಿಗೆ ಮಾತುಕತೆ ಓಡಾಟ ಒಡನಾಟಗಳಲ್ಲಿ ಅವರನ್ನು ಅರಿಯುತ್ತಾ ಹೋದೆ. ತಿಳಿಯುತ್ತಾ ಹೋದೆ. ಆಗ ಅನ್ನಿಸಿತು. ಕವಿತಾಕೃಷ್ಣ ಅವರು ಶ್ರೀಸಾಮಾನ್ಯರ ಕವಿ ಮತ್ತು ಬರಹಗಾರ ಎಂದು. ಅವರದೇ ಆದ ಒಂದು ಬಳಗ ಅವರ ಹಿಂದೆ ಯಾವಾಗಲೂ ಇರುತ್ತದೆ. ಕ್ರಿಯಾಶೀಲವಾಗಿರುತ್ತದೆ. ಆ ಬಳಗವೇ ಒಂದು ಅಕಾಡೆಮಿ ಅಥವಾ ವಿಶ್ವವಿದ್ಯಾನಿಲಯ. ಅದಕ್ಕೆ ಕವಿತಾ ಅವರೇ ಕುಲಪತಿ, ಕುಲಾಧಿಪತಿ ಎಲ್ಲ.
ಸಣ್ಣವೂ ದೊಡ್ಡವೂ ಸೇರಿ, ಸ್ವರಚಿತ ಸಂಪಾದಿತ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ಓದುಗರಿಗೆ ನೀಡಿರುವ, ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಕೆಲಸ ಮಾಡಿರುವ, ಬದುಕಿನಲ್ಲಿ ಎಪ್ಪತ್ತೆಂಟು ವಸಂತಗಳನ್ನು ಕಂಡ ಕವಿತಾಕೃಷ್ಣ ಅವರು ಒಂದು ರೀತಿಯಲ್ಲಿ ಚಲಿಸುವ ವಿಶ್ವಕೋಶ. ಅವರ ನೆನಪಿನ ಶಕ್ತಿ ಅಪಾರ. ಯಾವುದೇ ಕವಿ ಕಾವ್ಯ ನಾಟಕ ಕಥೆ ಕಾದಂಬರಿ ಕುರಿತು ಅವರು ಮಾತನಾಡುತ್ತಿದ್ದರೆ, ಹಾಡುತ್ತಿದ್ದರೆ, ವಿವರಿಸುತ್ತಿದ್ದರೆ ನನಗೇ ಅಚ್ಚರಿಯಾಗುತ್ತಿತ್ತು. ಅದರಲ್ಲೂ ಅವರು ಪ್ರಾಚೀನ ಕಾವ್ಯಗಳನ್ನು ಓದುವ ವಿವರಿಸುವ ರೀತಿ ಅತ್ಯದ್ಭುತ. ಯಾರು ಅರಿಯದ ಮತ್ತೊಂದು ಸಂಗತಿ ಎಂದರೆ ಅವರ ಹಾಡುಗಾರಿಕೆ. ವಿಶೇಷವಾಗಿ ಹಳೆಯ ಸಿನಿಮಾ ಗೀತೆಗಳ ಹಾಡುಗಾರಿಕೆ ಕೇಳುಗರನ್ನು ಮಂತ್ರಮುಗ್ದರನ್ನಾಗಿಸುತ್ತಿತ್ತು.
ಸ್ಥಳೀಯ ಇತಿಹಾಸ ಸಂಸ್ಕೃತಿ ಪರಂಪರೆಯ ಅಪಾರ ಜ್ಞಾನ ಅವರಲ್ಲಿ ಇತ್ತು. ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರೆ, ನನಗೆ ಅವರೊಬ್ಬ ಮೌಖಿಕ ಇತಿಹಾಸಕಾರನಂತೆ ತೋರುತ್ತಿದ್ದರು. ಈ ಮೌಖಿಕ ಇತಿಹಾಸ ಅವರೊಂದಿಗೆ ಕೊನೆಯಾಗಬಾರದು ಎಂದು ನಾನು ಮತ್ತು ರಾಣಿ ಚಂದ್ರಶೇಖರ್ ಮಾತನಾಡಿಕೊಂಡು “ಕವಿತಾಕೃಷ್ಣ ಅವರೊಂದಿಗೆ ಮಾತುಕತೆ” ಎಂಬ ಶೀರ್ಷಿಕೆಯಲ್ಲಿ ಪುಸ್ತಕ ಹೊರತಂದು ಅವರಿಗೆ ನೀಡಿ ಗೌರವ ಸಲ್ಲಿಸಿದ್ದೇವೆ. ಆ ಪುಸ್ತಕದ ಪ್ರತಿಯನ್ನು ಕೈಯಲ್ಲಿ ಹಿಡಿದು ಅವರು ಸಂಭ್ರಮಿಸಿದ ರೀತಿಯನ್ನು ನಾನೆಂದೂ ಮರೆಯಲಾರೆ.
ಹೋಗಿಬನ್ನಿ ಕವಿತಾಕೃಷ್ಣರೆ. ದೇಹ ಅಳಿದರೂ ಮರೆಯಾದರೂ ನಿಮ್ಮ ನೆನಪು, ನಿಮ್ಮ ಅರಿವು, ನಿಮ್ಮ ಕೊಡುಗೆ ಶಾಶ್ವತವಾಗಿರುತ್ತದೆ. ಅದು ತುಮಕೂರು ಸಾಂಸ್ಕೃತಿಕ ಚರಿತ್ರೆಯ ಭಾಗವಾಗಿರುತ್ತದೆ.
-ಎಂ.ಎಚ್.ನಾಗರಾಜು, ಲೇಖಕರು.ತುಮಕೂರು.
ಅಪಾರ ಜನಸ್ತೊಮದಿಂದ ಕವಿತಾಕೃಷ್ಣರವರಿಗೆ ಅಂತಿನ ನಮನ:
ತುಮಕೂರು: ಭಾನುವಾರ ಮೃತಪಟ್ಟ ಸಾಹಿತಿ, ಕವಿ, ವಿದ್ಯಾವಾಷಸ್ಪತಿ ಕವಿತಾಕೃಷ್ಣರವರ ಅಂತಿಮ ಸಂಸ್ಕಾರ ಗಾರ್ಡನ್ ರಸ್ತೆಯ ಚಿತಗಾರದಲ್ಲಿ ನಡೆಯಿತು.
ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಸಾಹಿತಿ ಕವಿತಾಕೃಷ್ಣ ಅವರ ಸಾವು ತಿಳಿಯುತ್ತಿದ್ದಂತೆ ಅವರ ಶಿಷ್ಯರು, ಸಾಹಿತಿಗಳು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಅಂತಿಮ ದರ್ಶನ ಪಡೆದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ, ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ, ಗಂಗಹನುಮಯ್ಯ, ಕಮಲಾ ಗಂಗಹನುಮಯ್ಯ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜಯಶ್ರೀನಿವಾಸನ್ ಗುರೂಜಿ. ಸಂಸದ ಬಸವರಾಜು, ಶಾಸಕ ಜ್ಯೋತಿಗಣೀಶ್, ರಫೀಕ್ ಅಹಮದ್, ಪ್ರಜಾಪ್ರಗತಿ ನಾಗಣ್ಣ ಹಾಗೂ ಸಾಹಿತಿಗಳು, ಕಲಾವಿದರುಗಳು, ಅಪಾರ ಸಂಖ್ಯೆಯ ಅಭಿಮಾನಿಗಳು ಡಾ.ಕವಿತಾಕೃಷ್ಣ ಗುರುಗಳ ಅಂತಿಮ ದರ್ಶನ ಪಡೆದರು.