ತುಮಕೂರು: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಕೆಂಪರಾಜಯ್ಯ ಮತ್ತೊಂದು ಅವಧಿಗೆ ಚುನಾಯಿತರಾದರು. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆಯಿತು. ನಂತರ ತಡರಾತ್ರಿವರೆಗೂ ಮತ ಎಣಿಕೆ ನಡೆದು ಕೆಂಪರಾಜಯ್ಯ ಬಹುಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.

ಇದೇ ವೇಳೆ ಸಂಘದ ಉಪಾಧ್ಯಕ್ಷರಾಗಿ ರವಿಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಹಿರೇಹಳ್ಳಿ ಮಹೇಶ್, ಜಂಟಿ ಕಾರ್ಯದರ್ಶಿಯಾಗಿ ಧನಂಜಯ, ಖಜಾಂಚಿಯಾಗಿ ಸಿಂಧೂ ಆಯ್ಕೆಯಾದರು.

ಶುಕ್ರವಾರ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಿತು. ಆನಂತರ ಆರಂಭವಾದ ಮತ ಎಣಿಕೆ ಮಧ್ಯರಾತ್ರಿವರೆಗೂ ಮುಂದುವರೆದು ಫಲಿತಾಂಶ ಪ್ರಕಟವಾಯಿತು. ಅಧ್ಯಕ್ಷ ಸ್ಥಾನಕ್ಕೆ ಕೆಂಪರಾಜಯ್ಯ ಹಾಗೂ ವಸಂತಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೆಂಪರಾಜಯ್ಯ ಪ್ರತಿ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ ವಿಜೇತರಾದರು.
ಇದೇ ವೇಳೆ ಕಾರ್ಯಕಾರಿ ಮಂಡಳಿಯ ಮೀಸಲು ಸ್ಥಾನಕ್ಕೆ ಪದ್ಮಶ್ರೀ ಮತ್ತು ಸೇವಾಪ್ರಿಯ ಆಯ್ಕೆಯಾದರು.
ಆಯ್ಕೆ ನಂತರ ಮಾತನಾಡಿದ ಅಧ್ಯಕ್ಷ ಕೆಂಪರಾಜಯ್ಯ, ವಕೀಲ ಮಿತ್ರರ ಪ್ರೀತಿ, ವಿಶ್ವಾಸ, ಬೆಂಬಲದಿಂದ ಈ ಗೆಲುವು ಸಾಧ್ಯವಾಯಿತು ಎಂದು ಕೃತಜ್ಞತೆ ತಿಳಿಸಿದರು. ಈ ಗೆಲುವು ತಮ್ಮದೆಂದು ತಾವು ಹೇಳುವುದಿಲ್ಲ. ಇದು ನಮ್ಮೆಲ್ಲರ ಒಗ್ಗಟ್ಟು ಹಾಗೂ ನಿರ್ಧಾರದ ಫಲ. ಈ ನಂಬಿಕೆಗೆ ಸತ್ಯನಿಷ್ಠೆಯಿಂದ ಬದ್ಧತೆಯಿಂದ ಕಾರ್ಯನಿರ್ವಹಿಸವುದಾಗಿ ಭರವಸೆ ನೀಡಿದರು.