ತುಮಕೂರು: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಹಮ್ಮಿಕೊಳ್ಳಲಾಗಿತ್ತು. ನಾಡಪ್ರಭುವಿನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಿಹಿ ಹಂಚಿ ಸಂಭ್ರಮದಿಂದ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್‍ಗೌಡ, ಶಿಸ್ತುಬದ್ಧ ಆಡಳಿತ, ದೂರದೃಷ್ಟಿ ಯೋಜನೆಗಳಿಂದ ನಾಡು ಕಟ್ಟಿದ ಕೆಂಪೇಗೌಡರು ಸರ್ವಜನ ಮೆಚ್ಚುವಂತಹ ಮಾದರಿ ಆಡಳಿತ ನೀಡಿದರು. ಬೆಂಗಳೂರು ನಗರ ಸುಸಜ್ಜಿತವಾಗಿ ನಿರ್ಮಾಣವಾಗಲು ಬೂನಾದಿಯಾದರು ಎಂದು ಹೇಳಿದರು.
ಕೆಂಪೇಗೌಡರು ನಾಡಿಗೆ ಕೊಟ್ಟ ಕೊಡುಗೆ, ಅವರ ತ್ಯಾಗ, ಶ್ರಮವನ್ನು ಇಂದಿನ ತಲೆಮಾರಿನವರು ತಿಳಿಯಬೇಕು. ಅವರ ಆಡಳಿತಾವಧಿಯಲ್ಲಿ ಮೂಲಸೌಕರ್ಯ, ನಗರಾಭಿವೃದ್ಧಿ, ಕೃಷಿ, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದರು. ಯಾವುದೇ ಚ್ಯುತಿ ಬಾರದಂತೆ ಆಡಳಿತ ನಡೆಸಿದ ಕೆಂಪೇಗೌಡರು ಈ ನಾಡಿನ ಹೆಮ್ಮೆ ಎಂದು ಹೇಳಿದರು.
ಬಿಜೆಪಿ ನಗರ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು ಮಾತನಾಡಿ, ಎಲ್ಲಾ ಸಮಾಜದವರನ್ನು ಗೌರವದಿಂದ ಕಂಡ ಕೆಂಪೇಗೌಡರು, ಆಯಾ ಕಸುಬಿಗೆ ತಕ್ಕಂತೆ ಪೇಟೆ, ತಕ್ಕಂತೆ ಗುಡಿಗೋಪುರ, ವಸತಿ ನಿರ್ಮಿಸಿ ನೆರವಾದರು. ಧಾರ್ಮಿಕ, ಸಾಸ್ಕøತಿಕ ಕಲೆಗಳನ್ನು ಪ್ರೋತ್ಸಾಹಿಸಿದ ಕೆಂಪೇಗೌಡರು ಎಲ್ಲಾ ಸಮುದಾಯದವರಿಗೆ ಅಧಿಕಾರ, ಶಿಕ್ಷಣ, ಸವಲತ್ತು ದೊರಕಿಸಲು ಕಾಳಜಿ ವಹಿಸಿದ್ದರು ಎಂದು ಹೇಳಿದರು.
ಎಸ್.ಟಿ.ಮೋರ್ಚಾ ನಗರ ಅಧ್ಯಕ್ಷ ಬಂಬೂ ಮೋಹನ್, ಮುಖಂಡರಾದ ಮನೋಹರಗೌಡ, ಸಿದ್ದರಾಜುಗೌಡ, ಜಿ.ಎಸ್.ನಂದಿನಾಥ್, ಅಕ್ಷಯ್‍ಚೌಧರಿ ಮೊದಲಾದವರು ಭಾಗವಹಿಸಿದ್ದರು.