ತುಮಕೂರು:ಕೊರಟಗೆರೆ ತಾಲೂಕು ವಡ್ಡಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಲ್ಕರೆ ಗ್ರಾಮದ ಸರ್ವೆ ನಂಬರ್ 155/3ರಲ್ಲಿ ವ್ಯಕ್ತಿಯೊಬ್ಬರು ಅನಧೀಕೃತವಾಗಿ ಕೋಳಿಫಾರಂ ನಿರ್ಮಿಸುತಿದ್ದು,ಇದನ್ನು ತೆರವುಗೊಳಿಸುವಂತೆ ಕಂದಾಯ, ಗ್ರಾಮಪಂಚಾಯಿತಿ, ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಕಲ್ಕರೆ,ಗೂಬಲಗುಟ್ಟೆ ಗ್ರಾಮಗಳ ಜನರ ಮನವಿಗೆ ಸ್ಪಂದಿಸಿ,ಕೋಳಿಫಾರಂ ಪರವಾನಗಿ ರದ್ದು ಪಡಿಸಲಿ ಎಂದು ಶೃತಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಾವೇರಿ ನಗರದ ಹುಸೇನ್ ಸಾಬ್ ಎಂಬ ವ್ಯಕ್ತಿಯೊಬ್ಬರು ಕಲ್ಕರೆ ಗ್ರಾಮದ ದಲಿತರಿಗೆ ದರಕಾಸ್ತ್‍ನಲ್ಲಿ ಮಂಜೂರಾಗಿದ್ದ 2 ಎಕರೆ ಭೂಮಿ ಖರೀದಿ, ಊರಿನವರಿಗೆ ಕುರಿ ಫಾರಂ ನಿರ್ಮಿಸುವುದಾಗಿ ನಂಬಿಸಿ, ಕೋಳಿಫಾರಂ ನಿರ್ಮಿಸುತ್ತಿದ್ದಾರೆ. ಸದರಿ ಕೋಳಿ ಫಾರಂ ನಿಂದ ವಾಸದ ಮನೆಗಳು ಕೇವಲ 250 ಮೀಟರ್ ದೂರದಲ್ಲಿದೆ. ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿಯ ನಿಯಮಗಳ ಪ್ರಕಾರ, ಕೋಳಿ ಫಾರಂ ನಿರ್ಮಾಣದ ಜಾಗ ವಾಸದ ಮನೆಗಳಿಂದ ಕನಿಷ್ಠ 500 ಮೀಟರ್ ದೂರ ಇರಬೇಕು ಎಂದಿದೆ. ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕೋಳಿ ಫಾರಂ ನಿರ್ಮಿಸುವ ಮೂಲಕ ಜನರಿಗೆ ತೊಂದರೆ ನೀಡುತ್ತಿದ್ದಾರೆ, ಕೋಳಿಫಾರಂ ನಿರ್ಮಾಣಕ್ಕೆ ವಿರೋಧೀಸುವವರಿಗೆ ಜೀವ ಬೆದರಿಕೆ ಹಾಕುತ್ತಿರುವುದಾಗಿ ತಿಳಿಸಿದರು.
ರಾಜ್ಯದ ಗೃಹ ಮಂತ್ರಿಗಳು ಅಗಿರುವ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಬರುವ ಕಲ್ಕರೆ ಗ್ರಾಮದಲ್ಲಿ ಈ ಅಕ್ರಮ ನಡೆಯುತಿದ್ದು, ಗ್ರಾಮಪಂಚಾಯಿತಿ ಇಂದಾಗಲಿ, ಕಂದಾಯ ಇಲಾಖೆ ಇಂದಾಗಲಿ ಕೋಳಿ ಫಾರಂ ನಿರ್ಮಾಣಕ್ಕೆ ಯಾವುದೇ ಅನುಮತಿ ಪಡೆದಿಲ್ಲ.ಈ ಬಗ್ಗೆ ಗ್ರಾಮಪಂಚಾಯಿತಿ, ಕಂದಾಯ ಇಲಾಖೆಯ ವಿ.ಎ.ಆರ್.ಐ, ತಹಶೀಲ್ದಾರರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ನ್ಯಾಯಾಲಯದಲ್ಲಿಯೂ ಪ್ರಕರಣ ದಾಖಲಾಗಿದ್ದು,ನ್ಯಾಯಾಲಯದ ಕೆಲ ದಿನ ತಡೆಯಾಜ್ಞೆ ನೀಡಿ, ನಂತರ ಪ್ರಕರಣವನ್ನು ಬೇರೊಂದು ನ್ಯಾಯಾಲಯಲ್ಲಿ ದಾಖಲಿಸುವಂತೆ ಅರ್ಜಿದಾರರಿಗೆ ಸೂಚಿಸಿ, ವಜಾ ಮಾಡಿದೆ. ಇದನ್ನೇ ನೆಪ ಮಾಡಿಕೊಂಡು ನ್ಯಾಯಾಲಯದಲ್ಲಿ ಕೇಸ್ ವಜಾ ಆಗಿದೆ ಎಂದು ಸುತ್ತಮುತ್ತಲ ಗ್ರಾಮಸ್ಥರನ್ನು ನಂಬಿಸಿ, ಬಲವಂತಾಗಿ ಕೋಳಿ ಫಾರಂ ಕಟ್ಟಡ ಕಟ್ಟಿದ್ದಾರೆ. ಮರಿ ಬಿಟ್ಟು ಸಾಕಾಣಿಕೆ ಆರಂಭಿಸುವ ಮುನ್ನ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಶೃತಿ ತಿಳಿಸಿದರು.
ಹಾವೇರಿ ಮೂಲದ ಹುಸೇನ್ ಸಾಬ್ ಅವರು ರಾಜಕೀಯವಾಗಿಯೂ ಬಹಳ ಪ್ರಬಲರಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡರ ಮೂಲಕ ಕೋಳಿಫಾರಂ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಜನರ ಮೇಲೆ ಕೊರಟಗೆರೆ,ಹೊಳವನಹಳ್ಳಿಯಿಂದ ಜನರನ್ನು ಕರೆತಂದು ಬೆದರಿಸುವ ಕೆಲಸ ಮಾಡುತ್ತಿದ್ದಾರೆ.ಅಲ್ಲದೆ ನಮ್ಮ ದೂರಿನ ಮೇಲೆ ಸರ್ವೆಗೆ ಬಂದಂತಹ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ತಾಲೂಕು ಸರ್ವೆಯರ್ ನೀಡಿದ್ದ ವರದಿಯನ್ನು ಕೈಬಿಟ್ಟು, ಮತ್ತೊಂದು ವರದಿ ಪಡೆದು ಮೋಸ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.
ಈಗಾಗಲೇ ಕಲ್ಕರೆ ಮತ್ತು ಗೂಬಲಗುಟ್ಟೆ ಗ್ರಾಮದ ಸುತ್ತಮುತ್ತ 3 ಕೋಳಿ ಫಾರಂಗಳಿದ್ದು,ಇಲ್ಲಿನ ವಾಸನಗೆ ವಿಷಕಾರಿ ಹಾವುಗಳ ಸಂಖ್ಯೆ ಹೆಚ್ಚಾಗಿದೆ.ಅಲ್ಲದೆ ಚಿgಚಿve, ಕರಡಿಗಳ ಕಾಟವೂ ಹೆಚ್ಚಾಗಿದೆ. ನಾಳಿಗಳು ಸತ್ತ ಕೋಳಿ ತಿಂದು, ಜನರು ಸಾಕಿರುವ ಕೋಳಿ, ಕುರಿ, ಮೇಕೆಗಳ ಮೇಲೆ ಎರಗುತ್ತಿವೆ. ಮಕ್ಕಳು ರಸ್ತೆ ದಾಟಿ ಶಾಲೆಗೆ ಹೋಗಲು ಹೆದರುವಂತಹ ಸ್ಥಿತಿ ಇದೆ. ಹಾಗಾಗಿ ಜಿಲ್ಲಾಡಳಿತ ಕೂಡಲೇ ಕೋಳಿಫಾರಂ ಪ್ರಾರಂಭವಾಗುವುದನ್ನು ತಡೆದು, ಗ್ರಾಮಸ್ಥರಿಗೆ ನ್ಯಾಯ ಕೊಡಿಸಬೇಕೆಂಬುದು ನಮ್ಮೆಲ್ಲರ ಆಗ್ರಹವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಲ್ಕರೆ ಮತ್ತು ಗೂಬಲಗುಟ್ಟೆ ಗ್ರಾಮಗಳ ಜನರಾದ ಲಕ್ಷ್ಮಮ್ಮ, ಕೃಷ್ಣಮೂರ್ತಿ,ಚಂದ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.