ಕೋಡಿ ಬಿದ್ದ ತುಮಕೂರು ಅಮಾನಿಕೆರೆ, ಅಲ್ಲಲ್ಲಿ ಮಳೆ ಅವಾಂತರ, ಅಪಾಯದ ಮಟ್ಟ ಮುಟ್ಟಿರುವ ನದಿಗಳು

ತುಮಕೂರು : ಸೋಮವಾರ ರಾತ್ರಿ ಮತ್ತು ಮಂಗಳವಾರ ರಾತ್ರಿ ಸುರಿದ ಮಳೆಗೆ ಹಲವಾರು ಕೆರೆಗಳು ತುಂಬಿ ಕೋಡಿ ಬಿದ್ದಿದ್ದರೆ, ಜಯಮಂಗಲಿ ಮತ್ತು ಸುವರ್ಣಮುಖಿ ನದಿಗಳು ತುಂಬಿ ಹರಿಯುತ್ತಾ ಇದ್ದು, ಇನ್ನೂ ಒಂದೆರಡು ದಿನ ಮಳೆ ಬೀಳುವುದರಿಂದ ನದಿಗಳು ಅಪಾಯದ ಮಟ್ಟ ತಲುಪಲಿವೆ ಎಂದು ನದಿ ತೀರದ ಜನತೆ ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ತಿಳಿಸಿದೆ.

ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಿಗ್ಗೆ ಸುರಿದ ಮಳೆಗೆ ಅಮಾನಿಕೆರೆ ಕೋಡಿ ಬಿದ್ದು ಹರಿಯುತ್ತಿದ್ದು, ಲಘು ವಾಹನಗಳು ಓಡಾಡಲು ಮಾಡಿದ್ದ ರಸ್ತೆಯು ಅಪಾಯದಂಚಿನಲ್ಲಿರುವುದರಿಂದ ನಿನ್ನೆ ರಾತ್ರಿ ಸುರಿದ ಮಳೆ ಜತೆಗೆ ಬೆಳಗ್ಗೆ ಸಹ ಒಂದು ಗಂಟೆ ಧಾರಾಕಾರ ಮಳೆ ಬಂದ ಹಿನ್ನೆಲೆ ತುಮಕೂರಿನ ಅಮಾನಿಕೆರೆ ಕೋಡಿ ಬಿದ್ದಿದೆ. ಇದರ ಪರಿಣಾಮ ಎಸ್ ಮಾಲ್ ಮುಂಭಾಗ ನಿರ್ಮಾಣ ಹಂತದ ಸೇತುವೆ ಪಕ್ಕದಲ್ಲಿ ತಾತ್ಕಾಲಿಕವಾಗಿ ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರ ರಸ್ತೆಯನ್ನು ಬಂದ್ ಮಾಡಲಾಗಿದೆ. ಶಿರಾಗೇಟ್, ಮಧುಗಿರಿ ಭಾಗದಿಂದ ಬರುವರು ರಿಂಗ್ ರೋಡ್ ಮೂಲಕ ಹನುಮಂತನಗರದಿಂದ ತುಮಕೂರು ನಗರಕ್ಕೆ ತೆರಳುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.

ತುಮಕೂರು ತಾಲ್ಲೂಕು ಪುಟ್ಟನಾಯಕನಪಾಳ್ಯದಲ್ಲಿ ಮನೆಗಳಿಗೆ ನುಗ್ಗಿರುವ ಮಳೆ ನೀರನ್ನು ಹೊರ ಹಾಕುತ್ತಿರುವ ಮಹಿಳೆಯರು.

ಅಮಾನಿಕೆರೆ ಕೋಡಿ ಬಿದ್ದಿರುವುದರಿಂದ ಕೋಡಿ ಹಿಂಭಾಗದಲ್ಲಿರುವ ಮನೆಗಳ ಸ್ಥಳಾಂತರಕ್ಕೆ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.

ತುಮಕೂರು ತಾಲ್ಲೂಕು ಚಿಕ್ಕಸಾರಂಗಿಯಲ್ಲಿ ಬುಧವಾರ ಸುರಿದ ಭಾರೀ ಮಳೆಗೆ ರಾಗಿ ಬೆಳೆ ಮತ್ತು ಅಡಿಕೆ ತೋಟಗಳು ಜಲಾವೃತಗೊಂಡಿವೆ. ಪುಟ್ಟನಾಯಕನಪಾಳ್ಯದಲ್ಲಿ ಮನೆಗಳಿಗೆ ಮಳೆ ನುಗ್ಗಿದ್ದು, ಮಕ್ಕಳು, ವೃದ್ಧರು ಪರದಾಡುವಂತಾಗಿದ್ದು, ಮಳೆ ನೀರನ್ನು ನೀರನ್ನು ಹೊರ ಹಾಕುವುದಕ್ಕೆ ಮಹಿಳೆಯರು ಪರದಾಡುವಂತಾಗಿದೆ.

ಗುಬ್ಬಿ ಪಟ್ಟಣದ ರೈಲ್ವೆ ಅಂಡರ್‍ಪಾಸ್‍ನಲ್ಲಿ ಮಳೆ ನೀರು ನಿಂತು ಕೆಎಸ್ಸಾರ್ಟಿಸಿ ಬಸ್ ಚಲಿಸಲಾಗದೆ ನಿಂತಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಗ್ಗದ ಸಹಾಯದಿಂದ ಬಸ್‍ನಲ್ಲಿದ್ದ ಪ್ರಯಾಣಿಕರನ್ನು ಹೊರಗೆ ಕರೆ ತರಲಾಯಿತು.

ಸುವರ್ಣಮುಖಿ ಮತ್ತು ಜಯಮಂಗಲಿ ನದಿಗಳು ತುಂಬಿ ಹರಿಯುತ್ತಿರುವುದನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದ್ದಾರೆ. ಮಳೆಯು ಇನ್ನೂ ಹೆಚ್ಚು ಬೀಳುವ ಸಾಧ್ಯತೆಯಿದ್ದು, ನದಿಯ ನೀರಿನ ಮಟ್ಟ ಅಪಾಯ ತಲುಪುವ ಮುನ್ಸೂಚನೆ ಇರುವುದರಿಂದ ನದಿ ದಂಡೆಯ ಗ್ರಾಮಗಳಿಗೆ ಸ್ಥಳಾಂತರ ಭೀತಿ ಎದುರಿಸುತ್ತಿದ್ದು, ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಸೂಚಿಸಿದೆ.

Leave a Reply

Your email address will not be published. Required fields are marked *