ಕೊರಟಗೆರೆ: ತಾಲ್ಲೂಕಿನ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ರವರು ಶುಕ್ರವಾರದಂದು ತಾಲ್ಲೂಕಿನ 4 ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿನ ಹಳ್ಳಿಗಳು, ಕಾಲೋನಿ ಮತ್ತು ಹಟ್ಟಿಗಳಿಗೆ ಭೇಟಿ ನೀಡಿ ಮತಯಾಚಿಸಿದರು. ಕೆಲವು ಗ್ರಾಮಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ಕೆಲಸಗಳಿಗೆ ಮನ್ನಣೆ ನೀಡಿ ಎಂದು ಭಿನ್ನೈಸಿಕೊಳ್ಳುವ ಮೂಲಕ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.
ಇಂದು ಬೆಳಿಗ್ಗೆ ಕೊರಟಗೆರೆಯ ಒಬಳಾಪುರ ಪಂಚಾಯ್ತಿಯಲ್ಲಿ ಆರಂಭಗೊಂಡ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು, ಪಕ್ಷ ಈಗಾಗಲೇ 5 ಗ್ಯಾರೆಂಟಿಗಳನ್ನು ರಾಜ್ಯದ ಜನರಿಗೆ ನೀಡಿದ್ದು, ಗ್ಯಾರೆಂಟಿ ಕಾರ್ಡ್‍ಗಳನ್ನು ಮನೆಮನೆಗೆ ತಲುಪಿಸಿದ್ದೇವೆ. ಬಿಜೆಪಿ ಲಂಚ ಹೊಡೆಯುವುದನ್ನು ಕಡಿಮೆ ಮಾಡಿದ್ದರೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯನ್ನು ಕಡಿಮೆ ಮಾಡುವ ಅಗತ್ಯ ಬರುತ್ತಿರಲಿಲ್ಲ, ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬರಲಿದೆ, ಬಡವರಿಗೆ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ, ರೈತರ ಸಾಲಮನ್ನಾ ಮಾಡಲು ಆಗದ ಬಿಜೆಪಿ ಉದ್ಯಮಿಗಳ 12 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ, ಶ್ರೀಮಂತರ ಪರ ಇರುವ ಬಿಜೆಪಿ, ರೈತರ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗಲಿದೆ ಎನ್ನುವ ಮನೋಭಾವನೆ ಇರುವವರಿಗೆ ಅಧಿಕಾರ ಕೊಡಬೇಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ 13,500 ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆ ಜಾರಿಗೆ ಮುಂದಾಗಿತ್ತು. ಆದರೆ ಈ ಯೋಜನೆ ಇಂದು 21 ಸಾವಿರ ಕೋಟಿ ತಲುಪಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರ ಎತ್ತಿನ ಹೊಳೆ ಯೋಜನೆಗೆ ಅನುದಾನವನ್ನು ನೀಡಲಿಲ್ಲ ಮತ್ತು ಬಜೆಟ್ ನಲ್ಲಿ ಅನುದಾನವನ್ನು ನೀಡಲಿಲ್ಲ. ಎತ್ತಿನಹೊಳೆ ಯೋಜನೆ ಪೂರ್ಣಗೊಂಡರೆ ಕೊರಟಗೆರೆಯ 109 ಕೆರೆಗಳು ತುಂಬಲಿದ್ದು, ಶಾಶ್ವತ ನೀರಾವರಿ ದೊರೆಯಲಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.
ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಗೆ 2500 ಕೋಟಿ ಅನುದಾನವನ್ನು ಸರ್ಕಾರದಿಂದ ತಂದಿದ್ದೇನೆ, 7 ವಸತಿ ಶಾಲೆ, ಏಕಲವ್ಯ ಶಾಲೆ ಮಾಡಿದ್ದೇನೆ, ಆ ಶಾಲೆಯಲ್ಲಿ ಓದಿದ ನಾಲ್ಕು ಮಂದಿ ಐಐಟಿಗೆ ಆಯ್ಕೆಯಾಗಿದ್ದಾರೆ ಇದು ಬಿಜೆಪಿ, ಜೆಡಿಎಸ್ ಕಣ್ಣಿಗೆ ಕಾಣುವುದಿಲ್ಲ ಎಂದು ಡಾ.ಜಿ.ಪರಮೇಶ್ವರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆಧರ ಮತ್ತು ಜಟ್ಟಿ ಅಗ್ರಹಾರ ಪಂಚಾಯ್ತಿ ಬುಕ್ಕಪಟ್ಟಣ ಗ್ರಾಮಪಂಚಯಿತ್ ವ್ಯಾಪ್ತಿಯ ಹಳ್ಳಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಜೊತೆ ಗ್ರಾಮಗಳಲ್ಲಿ ಪೂರ್ಣಕುಂಭಗಳ ಸ್ವಾಗತದೊಂದಿಗೆ ಮೆರವಣಿಗೆ ನೆಡಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಜಿ.ಪರಮೇಶ್ವರ್ ಅವರು 400ರೂ ಇದ್ದ ಗ್ಯಾಸ್ ಈಗ 1200 ರೂಗೆ ಏರಿಕೆಯಾಗಿದೆ. ಎಣ್ಣಿ ಬೆಲೆ ಜಾಸ್ತಿ ಯಾಗಿದೆ. ಪೆಟ್ರೋಲಿ, ಗೊಬ್ಬರ ಎಲ್ಲಾ ಬೆಲೆ ಜಾಸ್ತಿಯಾಗಿದೆ. ಇದನ್ನು ಜನಪರ ಸರ್ಕಾರದ ಎಂದು ಕರೆಯಲು ಸಾಧ್ಯವಾ ? ಎಂದು ಪ್ರಶ್ನಿಸಿದರು.
ಜಟ್ಟಿ ಅಗ್ರಹಾರ ಗ್ರಾಮದ ಮುಖಂಡೆ ಮಂಜುಳಾಮ್ಮ ಅವರ ಮನವಿಗೆ ಸ್ವಂದಿಸಿದ ಪರಮೇಶ್ವರ ಅವರು ನಮ್ಮ ಸರ್ಕಾರದ ಬಂದರೆ ಗ್ರಾಮೆಂಟ್ ಕಂಪನಿ ಪ್ರಾರಂಭಿಸಿವುದಾಗಿ ಜಟ್ಟಿ ಅಗ್ರಹಾರ ಜನರಿಗೆ ಭರವಸೆ ನೀಡಿದರು.
ಪ್ರಚಾರದಲ್ಲಿ ಕೆಪಿಸಿಸಿ ಸದಸ್ಯ ಪ್ರಸನ್ನಕುಮಾರ, ಸ್ಥಳೀಯ ಮುಖಂಡರಾದ ಮಂಜುಳಾ ಆರಾಧ್ಯ, ಕೊರಟಗೆರೆ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಆದ್ಯಕ್ಷರಾದ ಅರಕೆರೆ ಶಂಕರ, ಎ.ಡಿ.ಬಲರಾಮಯ್ಯ, ದಲಿತ ಮುಖಂಡರು ವಾಲೆ ಚಂದ್ರಯ್ಯ, ಲಿಖಿತ್ ರಾಜ್ ಮೌರ್ಯ, ಡಿ.ಟಿ.ವೆಂಕಟೇಶ್ ಮುಂತಾದವರು ಹಾಜರಿದ್ದರು.
ಪಕ್ಷಕ್ಕೆ ಸೇರ್ಪಡೆ:
ಜಟ್ಟಿ ಅಗ್ರಹಾರ ಗ್ರಾಮದಲ್ಲಿ ಜೆಡಿಎಸ್, ಬಿಜೆಪಿ ಪಕ್ಷದ ತೊರದ ಕಾಂತ ರಾಜು, ಗೋವಿಂದ ರಾಜು,ರಂಗರಾಜು, ನಾಗರಾಜು ಎ.ಎಮ್.ಮಹೇಶ್, ಸಚಿನ್, ವೀರಶ್, ಪುಟ್ಟರಾಜು,ಮನೋಜ,ಯೋಗಿಶ, ವೀರನಾಗಯ್ಯ,ಬೆಬಿ,ರಾಕೇಶ್, ವಿರಕ್ಯಾತಯ್ಯ ಸೇರಿದಮತೆ 25 ಕ್ಕೂ ಹೆಚ್ಚು ಯುವಕ ತಂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ರೀತಿ ತಾಲ್ಲೂಕಿನ ಸೀಗೆಪಾಳ್ಯ ಚಿಕ್ಕಪಾಲನಹಳ್ಳಿ ಗ್ರಾಮದ 18 ಮಂದಿ ಯುವಕ ತಂಡ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿತು.