ತುಮಕೂರು: ಖಾಸಗಿ ಸಂಸ್ಥೆಗಳ ಆಕ್ರಮಣ, ಸರ್ಕಾರಗಳ ನಿರಾಸಕ್ತಿ, ದ್ವೇಷ, ಅಸೂಯೆ, ಮದ, ಮತ್ಸರದಿಂದಾಗಿ ಸಹಕಾರ ಸಂಘಗಳಿಗೆ ಗುಣಮಟ್ಟದ ನಾಯಕತ್ವದ ಕೊರತೆ ಇದೆ ಎಂದು ಜಿಲ್ಲಾ ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಟಿ. ಮುರಳಿ ಕೃಷ್ಣಪ್ಪ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅರ್ಥಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗವು ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಇವರ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ‘ಸಹಕಾರ ಶಿಕ್ಷಣ ಮತ್ತು ಪ್ರಚಾರ ಮಹತ್ವ’ ಕುರಿತ ದತ್ತಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಮುಖ್ಯ. ಪ್ರಾಮಾಣಿಕತೆ ಹಾಗೂ ಪ್ರಬುದ್ಧತೆ ಇಲ್ಲದಿದ್ದರೆ ಸಹಕಾರ ಕ್ಷೇತ್ರದಲ್ಲಿ ಬೆಳವಣಿಗೆ ಇಲ್ಲ. ಶಿಕ್ಷಣದ ಅಭಾವದಿಂದ ಸಹಕಾರ ಸಂಸ್ಥೆಗಳಲ್ಲೂ ಅಸಮಾನತೆ ತಲೆದೂರಿದೆ. ಸಹಕಾರ ಶಿಕ್ಷಣ, ಶಿಬಿರ, ಪ್ರಚಾರ ಅಭಿವೃದ್ಧಿಕೇಂದ್ರಿತ ವಿಷಯವಾಗಿ ಕಾಣದಿರುವುದು ಆತಂಕವಾಗಿದೆ ಎಂದರು.
ಸಹಕಾರ ಚಳುವಳಿಯ ಪಿತಾಮಹ ರಾಬರ್ಟ್ ಓವನ್ ಖಾಸಗಿತನ ಮತ್ತು ಬಂಡವಾಳಶಾಹಿ ವ್ಯವಸ್ಥೆಯನ್ನು ವಿರೋಧಿಸಿದರು. ಕಾರ್ಮಿಕರ ಮೇಲಿನ ದೌರ್ಜನ್ಯವನ್ನು ನಿಯಂತ್ರಿಸಲು ಸರ್ಕಾರಗಳು ಯೋಜನೆ ರೂಪಿಸದಿದ್ದಾಗ, ಶೋಷಿತ ವರ್ಗದ ಸುಧಾರಣೆಗಾಗಿ ಸ್ವ-ಇಚ್ಛೆಯಿಂದ ಚಳುವಳಿ ನಡೆಸಿದರು. ಒಟ್ಟಾಗಿ ದುಡಿಮೆ, ಸಮಾನ ಹಂಚಿಕೆ ಇವರ ಮೂಲ ಸಿದ್ಧಾಂತವಾಗಿತ್ತು ಎಂದು ಸಹಕಾರ ನಡೆದು ಬಂದ ಇತಿಹಾಸದ ಕುರಿತು ತಿಳಿಸಿದರು.
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಂಗಮಪ್ಪ ಮಾತನಾಡಿ, ಸಹಕಾರ ಕ್ಷೇತ್ರ ಹೆಮ್ಮರವಾಗಿ ಬೆಳೆಯಲು ಖಾಸಗಿ ಕಂಪನಿಗಳು, ಸರ್ಕಾರಗಳು ಬಿಡುತ್ತಿಲ್ಲ. ಸ್ವಾತಂತ್ರö್ಯ ನಂತರದಲ್ಲಿ ಶೇ.49 ರಷ್ಟಿದ್ದ ಸಹಕಾರ ಸಂಖ್ಯೆ ಈಗ ಶೇ.11 ಕ್ಕೆ ಇಳಿದಿದೆ. ಯುವಕರು ಮತ್ತು ಮಹಿಳೆಯರು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ದೇಶದಲ್ಲಿ ದೊಡ್ಡ ಕ್ರಾಂತಿ ಮಾಡಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಸಚಿವೆ ನಾಹಿದಾ ಜûಮ್ ಜûಮ್, ಸಂವಿಧಾನಾತ್ಮಕವಾಗಿ, ಶಿಸ್ತುಬದ್ಧವಾಗಿ ಸಹಕಾರ ಸಂಸ್ಥೆಗಳು ನಡೆಯುತ್ತಿವೆ. ಜನರಲ್ಲಿ ಸಹಕಾರದ ಕುರಿತು ಜಾಗೃತಿ ಇಲ್ಲದಿರುವುದು ಬೇಸರದ ಸಂಗತಿ. ಸಹಕಾರ ಸಂಘಗಳು ವಿದ್ಯಾಭ್ಯಾಸದ ಸಾಲ ಸೇರಿದಂತೆ, ಉದ್ಯೋಗ ಅವಕಾಶಗಳನ್ನು ಒದಗಿಸಿಕೊಡುತ್ತಿವೆ. ರೈತರು ಮಧ್ಯವರ್ತಿಗಳ ಮೋಸದಿಂದ ಹೊರಗುಳಿಯಬೇಕಾದರೆ ಸಹಕಾರ ಸಂಘಗಳ ಮೊರೆ ಹೋಗುವುದು ಅಗತ್ಯ ಎಂದರು.
ಸ್ನಾತಕೋತ್ತರ ಅರ್ಥಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗ ಅಧ್ಯಕ್ಷ ಪ್ರೊ. ಜಯಶೀಲ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಮುನಿರಾಜು ಎಂ. ವಂದಿಸಿದರು. ಪ್ರಾಧ್ಯಾಪಕ ಪ್ರೊ. ರವೀಂದ್ರ ಕುಮಾರ್ ಬಿ. ನಿರೂಪಿಸಿದರು.