ತುಮಕೂರು: ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರಿಗೆ ಎಲ್ಲ ರಂಗದಲ್ಲು ಅವಕಾಶಗಳ ಬಾಗಿಲು ತೆರೆದಿದ್ದರೂ, ಇಂದಿಗೂ ಕನ್ನಡ ಪತ್ರಿಕೋದ್ಯಮದಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.20 ರಷ್ಟನ್ನು ದಾಟದಿರುವುದು ವಿಷಾದನೀಯ ಎಂದು ಪ್ರಜಾವಾಣಿ ದಿನಪತ್ರಿಕೆಯ ನಿವೃತ್ತ ಸಹ ಸಂಪಾದಕಿ ಸಿ. ಜಿ. ಮಂಜುಳಾ ಬೇಸರ ವ್ಯಕ್ತಪಡಿಸಿದರು.
ತುಮಕೂರು ವಿವಿ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ವಿವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಪತ್ರಿಕಾ ದಿನಾಚರಣೆಯಲ್ಲಿ ‘ಮಾಧ್ಯಮ ಮತ್ತು ಮಹಿಳೆ: ಅಂದು-ಇಂದು’ ಕುರಿತು ವಿಶೇಷ ಉಪನ್ಯಾಸ ನೀಡಿದರು.
60ರ ದಶಕದಲ್ಲಿ ‘ಪತ್ರಿಕೆಗಳಲ್ಲಿ ಮಹಿಳೆಯರಿಗೆ ಕೆಲಸ ನೀಡಲಾಗುವುದಿಲ್ಲ’ ಎನ್ನುವ ಮನಸ್ಥಿತಿಯಿತ್ತು. 1964ರ ಭಾರತ-ಪಾಕಿಸ್ತಾನ ಯುದ್ಧದ ಪ್ರತ್ಯಕ್ಷ ವರದಿಯನ್ನು ಪತ್ರಕರ್ತೆ ಪ್ರಭಾ ದತ್ ಪರಿಣಾಮಕಾರಿಯಾಗಿ ಮಾಡಿ, ಮಹಿಳಾ ಸಾಮಥ್ರ್ಯವನ್ನು ನಿರೂಪಿಸಿದರು. 70ರ ದಶಕದ ನಂತರ ಮಹಿಳೆಯರಿಗೆ ಪತ್ರಕರ್ತೆಯರಾಗಿ ಕಾರ್ಯನಿರ್ವಹಿಸುವ ಅವಕಾಶವಾಯಿತು ಎಂದು ತಿಳಿಸಿದರು.
ಹೋಮೈ ವ್ಯಾರವಲ್ಲ ಮೊದಲ ಮಹಿಳಾ ಫೋಟೋ ಜರ್ನಲಿಸ್ಟ್ ಆಗಿ ಮೂರು ದಶಕಗಳ ತನ್ನ ವೃತ್ತಿಜೀವನದ ಸಮಯದಲ್ಲಿ ಸಾಮಾಜಿಕ ಅಡೆತಡೆಗಳನ್ನು ಮುರಿದು, ತನ್ನ ವಿಶಿಷ್ಟವಾದ ಮಸೂರದ ಮೂಲಕ ಭಾರತದ ರಾಜಕೀಯ ಜಾಗೃತಿಯ ಪ್ರಯಾಣವನ್ನು ಸೆರೆಹಿಡಿದಳು. ಮೊದಲ ಸಂಪಾದಕಿ ಹಾಗೂ ಪ್ರಕಾಶಕಿಯಾಗಿ ನಂಜನಗೂಡು ತಿರುಮಲಾಂಬ 1917ರಲ್ಲಿ ತಮ್ಮ ‘ಕರ್ನಾಟಕ ನಂದಿನಿ’ ಪತ್ರಿಕೆಯಲ್ಲಿ ಮಹಿಳೆಯರ ಸಂಕಷ್ಟಗಳನ್ನು ಸಂಕಥನಗಳನ್ನಾಗಿ ಪ್ರಕಟಿಸಿದರು ಎಂದು ತಿಳಿಸಿದರು.
ಸಮಯ ನಿಬಂಧನೆಗಳಿಗೆ ಅಂಟಿಕೊಳ್ಳದೆ ಹಲವಾರು ಮಂದಿ ಮಹಿಳೆಯರು ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ, ಡೆಸ್ಕ್ ಹಾಗೂ ರಾತ್ರಿಪಾಳಿಯಲ್ಲಿ ಕೆಲಸ ಮಾಡಿದ, ಸುದ್ದಿ ಮನೆಯಲ್ಲಿ ಕೆಲಸ ಗಿಟ್ಟಿಸಿಕೊಂಡ ಮೊದಲಿಗರಿದ್ದಾರೆ. ರಾಜಕೀಯ, ಅಪರಾಧ, ಯುದ್ಧ ವರದಿಗಳನ್ನು ಸಮರ್ಥವಾಗಿ ಮಾಡಿದ್ದಾರೆ ಎಂದು ತಿಳಿಸಿದರು.
ಸಾಮಾಜಿಕ ಬದಲಾವಣೆಯಾಗಬೇಕಾದರೆ ಮಹಿಳೆಯರಿಗೆ ಪ್ರಾಧಾನ್ಯತೆ ಕೊಡಬೇಕು. ಲಿಂಗ ಸೂಕ್ಷ್ಮ ವರದಿಗಳನ್ನು ತಯಾರಿಸಲು ಮಹಿಳಾ ಪತ್ರಕರ್ತೆಯರ ಅವಶ್ಯಕತೆಯಿದೆ. ವರದಿಗಳು ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತವೆ. ನ್ಯಾಯಪರ ವಾದ ಮಾಡುವುದೇ ವರದಿಗಳು. ಧ್ವನಿರಹಿತ ವರ್ಗಗಳನ್ನು ಒಗ್ಗೂಡಿಸಿಕೊಳ್ಳುವುದೇ ವರದಿಗಳು ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದ ಮಾಹಿತಿಗಳನ್ನು ನಿರ್ಣಾಯಕ ಸುದ್ದಿಗಳಾಗಿ ಇಂದಿನ ವಾಹಿನಿಗಳು ಬಿತ್ತರಿಸುತ್ತಿವೆ. ವಾಹಿನಿಗಳು ಪಕ್ಷರಹಿತವಾಗಿ ಕಾರ್ಯನಿರ್ವಹಿಸಬೇಕು. ರಾಜಕೀಯ ಪಕ್ಷಗಳಿಗೆ ಮುಖವಾಹಿನಿಯಾಗಬಾರದು. ಲೈಂಗಿಕ ಭಾಷೆ, ಉದ್ರಿಕ್ತ ಭಾಷೆ ಬಳಸದೆ ವರದಿ ತಯಾರಿಸಬೇಕು. ನೈತಿಕ ನಿಲುವುಗಳನ್ನು ಪತ್ರಕರ್ತರೆ ತೆಗೆದುಕೊಳ್ಳಬಾರದು ಎಂದರು.
ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಮಾತಿನಲ್ಲಿ ಮಹಿಳಾ ಪ್ರಾಧಾನ್ಯತೆ ಎನ್ನುತ್ತೀವಿ. ಕೃತಿ ರೂಪದಲ್ಲಿ ವಾಸ್ತವಕ್ಕೆ ತರಲು ಸಂಕುಚಿತರಾಗಿದ್ದೀವಿ. ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳಲ್ಲಿ ಸತ್ಯವಿರಬೇಕು. ಮುದ್ರಣ ಮಾಧ್ಯಮಗಳು ವೈಯಕ್ತಿಕವಾಗಿ ಗುರುತಿಸಿಕೊಂಡು ಜನಮಾನಸದಲ್ಲಿ ನೆಲಸಿವೆ ಎಂದರು.
ಕನ್ನಡ ಪತ್ರಿಕಾ ದಿನಾಚರಣೆಯ ಅಂಗವಾಗಿ ವಿವಿಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕುಲಸಚಿವೆ ನಾಹಿದಾ ಜûಮ್ ಜûಮ್, ಪ್ರಗತಿ ಟಿ.ವಿ.ಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶಿಲ್ಪ ಸಂಜಯ್, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ರೋಟರಿ ಸಂಸ್ಥೆಯ ಅಧ್ಯಕ್ಷೆ ರೊ. ರಾಜೇಶ್ವರಿ ರುದ್ರಪ್ಪ, ಕಾರ್ಯದರ್ಶಿ ರೊ. ನಾಗಮಣಿ ಎಸ್. ಜಿ., ರೋಟರಿ ಟ್ರಸ್ಟ್ ಅಧ್ಯಕ್ಷ ಡಾ. ಎಸ್. ಎಲ್. ಶಿವಶಂಕರ ಕಾಡದೇವರಮಠ್, ಕ್ಲಬ್ ಸರ್ವೀಸ್ ನಿರ್ದೇಶಕ ಲಕ್ಕಪ್ಪ ಉಪಸ್ಥಿತರಿದ್ದರು.