ತುಮಕೂರು : ಜಿಲ್ಲೆಯ ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿರುವ ತುಮ್ಮಲು ಗ್ರಾಮದಲ್ಲಿ ನಡೆದಿದೆ ಎನ್ನಲಾದ ಭೂ ಹಗರಣ ಕುರಿತು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಈ ಕೆಳಕಂಡಂತೆ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯ ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿರುವ ತುಮ್ಮಲು ಗ್ರಾಮದ ಹಲವು ಸರ್ವೆ ನಂಬರ್‍ಗಳ ಜಮೀನು ಅರ್ಜಿಗಳು ಭೂಪರಿವರ್ತನೆಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ವೀಕೃತವಾಗಿವೆ. ಸ್ವೀಕೃತ ಅರ್ಜಿಗಳ ಪರಿಶೀಲನಾ ಸಂದರ್ಭದಲ್ಲಿ ಕೆಲವು ನ್ಯೂನ್ಯತೆಗಳು ಕಂಡು ಬಂದಿವೆ.
ಈ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮ್ಮಲು ಗ್ರಾಮದಲ್ಲಿ ಈ ಹಿಂದೆ 43-11 ಎಕರೆ/ಗುಂಟೆ ಹಗರಣವು ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ 43-11 ಎಕರೆ/ಗುಂಟೆ ಜಮೀನು ಹಲವಾರು ಸರ್ವೇ ನಂಬರ್‍ಗಳನ್ನು ಒಳಗೊಂಡಿದೆ. ಈ ಕುರಿತು ಮಧುಗಿರಿ ತಾಲ್ಲೂಕು ಕಚೇರಿಯಲ್ಲಿರುವ ಮೂಲ ಕಡತಗಳನ್ನು ಪರಿಶೀಲಿಸಿದಾಗ ಪ್ರಸ್ತಾಪಿತ ಜಮೀನು 2005ನೇ ಸಾಲಿನಲ್ಲಿಯೇ ಮಂಜೂರಾಗಿರುವ ಬಗ್ಗೆ ದಾಖಲಾತಿಗಳಿವೆ. ಈ ದಾಖಲೆಗಳು ನಕಲಿ ದಾಖಲೆಗಳೆಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಜಮೀನಿಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ವರದಿ ನೀಡಬೇಕೆಂದು ಮಧುಗಿರಿ ಉಪ ವಿಭಾಗಾಧಿಕಾರಿ ಹಾಗೂ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ. ನಕಲಿ ದಾಖಲೆಗಳನ್ನು ಸಾರ್ವಜನಿಕ ಮಾಹಿತಿಗಾಗಿ ಈ ಪ್ರಕಟಣೆಯೊಂದಿಗೆ ಬಿಡುಗಡೆ ಮಾಡಲಾಗಿದೆ.
ತನಿಖಾಧಿಕಾರಿಗಳಿಂದ ತನಿಖಾ ವರದಿ ಬಂದ ತಕ್ಷಣ ಸರ್ಕಾರಿ ಜಮೀನು ಎಂದು ದೃಢಪಟ್ಟಲ್ಲಿ ಸರ್ಕಾರಕ್ಕೆ ಸದರಿ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ತಹಶೀಲ್ದಾರ್‍ರವರಿಗೆ ಆದೇಶಿಸಲಾಗುವುದು. ಅದಕ್ಕೂ ಮುಂಚಿತವಾಗಿ ಸದರಿ ಜಮೀನುಗಳಿಗೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಹಾಗೂ ಮೇಲ್ನೋಟಕ್ಕೆ ನಕಲಿ ದಾಖಲೆಗಳೆಂದು ಕಂಡು ಬಂದ ದಾಖಲೆಗಳನ್ನು ಸೃಷ್ಟಿಸಿದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಧುಗಿರಿ ತಾಲ್ಲೂಕು ತಹಶೀಲ್ದಾರರಿಗೆ ಸೂಚಿಸಲಾಗಿದೆ.
ತನಿಖಾ ವರದಿ ಬಂದ ನಂತರ ಹಾಗೂ ಮಾನ್ಯ ನ್ಯಾಯಾಲಯದ ಆದೇಶದಲ್ಲಿನ ಷರತ್ತುಗಳಿಗೆ ಒಳಪಟ್ಟು ಪಹಣಿಯಲ್ಲಿ(ಆರ್.ಟಿ.ಸಿ.) ಸರ್ಕಾರಿ ಜಮೀನು ಎಂದು ನಮೂದಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.