“ಯುವನಿಧಿ” ಯೋಜನೆಗೆ ಚಾಲನೆ: ಡಿಬಿಟಿ ಮೂಲಕ ನಿರುದ್ಯೋಗ ಭತ್ಯೆ-ಗೃಹಸಚಿವರು

ತುಮಕೂರು: ಜಿಲ್ಲೆಯಲ್ಲಿ ಇಂದಿನಿಂದ ಯುವನಿಧಿ ಯೋಜನೆಗೆ ಚಾಲನೆ ನೀಡಿದ್ದು, ಯೋಜನೆಯಡಿ ನೋಂದಾಯಿಸಿಕೊಂಡ ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿರುವ ಅರ್ಹ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ನಿರುದ್ಯೋಗ ಭತ್ಯೆ ಜಮೆ ಮಾಡಲಾಗುವುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಯುವನಿಧಿ ಯೋಜನೆ ಕುರಿತು ಭಿತ್ತಿ ಪತ್ರವನ್ನು ಬಿಡುಗಡೆ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಅದರಂತೆ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಸೇರಿದಂತೆ 4 ಗ್ಯಾರಂಟಿ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಟಾನ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದು, 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.

ಯುವನಿಧಿ ಯೋಜನೆಯಡಿ ಪದವಿ ಮುಗಿಸಿದ ಅರ್ಹ ಫಲಾನುಭವಿಗಳಿಗೆ ಮಾಹೆಯಾನ 3,000 ರೂ. ಹಾಗೂ ಡಿಪ್ಲೋಮಾ ಹೊಂದಿದವರಿಗೆ 1,500 ರೂ.ಗಳನ್ನು ಅವರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ನಿರುದ್ಯೋಗ ಭತ್ಯೆಯನ್ನು ಜಮೆ ಮಾಡಲಾಗುವುದು. 2023ರಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಪದವಿ, ಡಿಪ್ಲೋಮಾ ನಂತರ ಕನಿಷ್ಟ 6 ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದ ನಿರುದ್ಯೋಗಿಗಳು ಸೇವಾಸಿಂಧು ಪೋರ್ಟಲ್ hಣಣಠಿs://sevಚಿsiಟಿಜhugs.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈ ಸೌಲಭ್ಯ ನೀಡಲಾಗುವುದು. ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಸುಮಾರು 10,000 ಪದವೀಧರರು ಹಾಗೂ 2,000 ಡಿಪ್ಲೋಮಾ ಮುಗಿಸಿದ ನಿರುದ್ಯೋಗಿಗಳಿದ್ದಾರೆಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪದವಿ ಉತ್ತೀರ್ಣರಾದ ಲಕ್ಷಾಂತರ ನಿರುದ್ಯೋಗಿಗಳು ಇರುವುದನ್ನು ಮನಗಂಡ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಪದವಿ ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಈ ಭತ್ಯೆ ಬೂಸ್ಟರ್ ಡೋಸ್ ಇದ್ದಂತೆ. ಉದ್ಯೋಗಾಂಕ್ಷಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಈ ಭತ್ಯೆ ಯಾವುದಾದರೂ ರೂಪದಲ್ಲಿ ನೆರವಾಗುತ್ತದೆ. ನೋಂದಾಯಿಸಿಕೊಂಡ ನಿರುದ್ಯೋಗಿ ಫಲಾನುಭವಿಗಳಿಗೆ 2 ವರ್ಷಗಳ ಕಾಲ ನಿರುದ್ಯೋಗ ಭತ್ಯೆ ಸೌಲಭ್ಯ ನೀಡಲಾಗುವುದು. 2 ವರ್ಷಗಳ ನಂತರ ಭತ್ಯೆಯ ಸೌಲಭ್ಯ ದೊರೆಯುವುದಿಲ್ಲ. ಭತ್ಯೆ ಪಡೆಯುತ್ತಿರುವ ಸಂದರ್ಭದಲ್ಲಿ ಖಾಸಗಿ/ಸರ್ಕಾರಿ ಉದ್ಯೋಗ ದೊರೆತ ಫಲಾನುಭವಿಗಳು ಉದ್ಯೋಗ ದೊರೆತಿರುವ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಸುಳ್ಳು ಮಾಹಿತಿ ನೀಡಿ ಭತ್ಯೆ ಪಡೆದವರಿಗೆ ದಂಡ ವಿಧಿಸಲಾಗುವುದು ಎಂದು ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಯೋಜನೆಯಡಿ ಎಷ್ಟೋ ಫಲಾನುಭವಿಗಳ ಖಾತೆಗೆ ಇದುವರೆಗೆ 2,000 ರೂ.ಗಳ ಹಣ ಜಮೆಯಾಗಿಲ್ಲವೆಂದು ಸಾರ್ವಜನಿಕ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ತಾಂತ್ರಿಕ ಸಮಸ್ಯೆಯಿಂದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿಲ್ಲ. ಹೊಸ ಯೋಜನೆಯಾದ್ದರಿಂದ ತಾಂತ್ರಿಕ ಸಮಸ್ಯೆಗಳು ಉಂಟಾಗುವುದು ಸಹಜ. ಒಂದೆರಡು ತಿಂಗಳಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ಬಾಕಿ ಹಣವನ್ನೂ ಸಹ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ ಅವರು ಈ ಸರ್ಕಾರ ಅಧಿಕಾರದಲ್ಲಿರುವವರೆಗೂ ಯಾವುದೇ ಕಾರಣಕ್ಕೂ 5 ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುವುದಿಲ್ಲ. ಸಾರ್ವಜನಿಕರು ಆತಂಕ ಪಡಬಾರದು. ಲೋಕಸಭೆ ಚುನಾವಣೆ ನಂತರವೂ ಈ ಯೋಜನೆಗಳು ಮುಂದುವರೆಯಲಿವೆ ಎಂದು ಸ್ಪಷ್ಟಪಡಿಸಿದರು.

ಅತಿಥಿ ಉಪನ್ಯಾಸಕರ ಪ್ರತಿಭಟನೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಸ್ಪಂದಿಸಿದ ಸಚಿವರು, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅತಿಥಿ ಉಪನ್ಯಾಸಕರ ನೇಮಕಾತಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ. ಬರುವ 2024ರ ಫೆಬ್ರವರಿ, ಮಾರ್ಚ್ ಮಾಹೆಯಲ್ಲಿ ಆಯ-ವ್ಯಯ ಮಂಡನೆಯಾಗುವ ನಿರೀಕ್ಷೆಯಿದ್ದು, ಆಯ-ವ್ಯಯದ ನಂತರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಪರಿಶೀಲಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೋವಿಡ್ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದಿಂದ ಕೋವಿಡ್ ಮಾರ್ಗ ಸೂಚಿಯನ್ನು ಹೊರಡಿಸಲಾಗಿದೆ. ರಾಜ್ಯದಲ್ಲಿ ಡಾ: ರವಿ ಅವರ ಅಧ್ಯಕ್ಷತೆಯಲ್ಲಿ ವೈದ್ಯರುಗಳನ್ನೊಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಸಲಹೆಯಂತೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಮಾರ್ಗದರ್ಶನ ನೀಡಲಾಗುವುದು ಎಂದರಲ್ಲದೆ ಪ್ರಸ್ತುತ ಪರಿಸ್ಥಿತಿಯಲ್ಲಿ ಕೋವಿಡ್ ವೈರಾಣುವಿನ ಹೊಸ ಉಪತಳಿ ಜೆಎನ್.1 ಸೋಂಕಿನ ನಿಯಂತ್ರಣಕ್ಕೆ ಸರ್ಕಾರ ಸಿದ್ಧವಿದೆ. ಕೋವಿಡ್ ಕಾರಣದಿಂದ ಯಾವ ಕಾರ್ಯಕ್ರಮವನ್ನೂ ನಿಲ್ಲಿಸುವುದಿಲ್ಲ. ಹೊಸ ವರ್ಷಾಚರೆಣೆಗೂ ಯಾವುದೇ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ. ಆದರೆ 60 ವರ್ಷ ಮೇಲ್ಪಟ್ಟವರು ಜನಸಂದಣಿ ಇರುವ ಕಡೆ ಮಾಸ್ಕ್ ಧರಿಸಬೇಕು. ಕೋವಿಡ್ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಬೇಡ. ಆದರೆ ಎಚ್ಚರಿಕೆ ಇರಬೇಕೆಂದು ಸಲಹೆ ನೀಡಿದರು. ತಾಂತ್ರಿಕ ಸಮಿತಿ ಸಲಹೆಗಳನ್ನು ಈಗಾಗಲೇ ಎಲ್ಲಾ ಜಿಲ್ಲೆಗಳಿಗೂ ಕಳುಹಿಸಲಾಗಿದೆ. ಕೋವಿಡ್ ಮುನ್ನೆಚ್ಚರಿಕೆ ಕುರಿತು ಚರ್ಚಿಸಲು ಜಿಲ್ಲೆಯಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ತುಮಕೂರು ನಗರದಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೂಕ್ತ ಕ್ರಮವಹಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕೆಂಬ ಮಾಧ್ಯಮದವರ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಹತ್ಯೆ, ಕಳ್ಳತನ, ದರೋಡೆ ಪ್ರಕರಣಗಳು ವರದಿಯಾಗದಂತೆ ಚುರುಕಾಗಿ ಕಾರ್ಯನಿರ್ವಹಿಸುವ ಬಗ್ಗೆ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಕೌಟುಂಬಿಕ ಕಾರಣಗಳಿಂದ ನಡೆಯುತ್ತಿರುವ ಕೊಲೆ ಪ್ರಕರಣಗಳನ್ನು ತಡೆಯಬೇಕೆಂಬ ನಿಟ್ಟಿನಲ್ಲಿ ಗುಪ್ತವಾರ್ತೆ ದಳದವರಿಗೆ ನಿಗಾವಹಿಸಲು ನಿರ್ದೇಶನ ನೀಡಲಾಗಿದೆ. ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 606 ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಸೆರೆ ಹಿಡಿದು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ರೌಡಿ ಶೀಟರ್‍ಗಳನ್ನು ಪ್ರತಿ 6 ತಿಂಗಳಿಗೊಮ್ಮೆ ಠಾಣೆಗೆ ಕರೆಸಿ ಮನಃಪರಿವರ್ತನೆ ಮಾಡಿ ಅರಿವು ಮೂಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ವಿಚಾರಕ್ಕಾಗಿ ನಡೆಯುತ್ತಿದ್ದ ಸಂಘರ್ಷಗಳು ಕಡಿಮೆಯಾಗಿವೆ. ಮೀಟರ್ ಬಡ್ಡಿ ದಂಧೆ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದ್ದು, ಮೀಟರ್ ಬಡ್ಡಿ ದಂಧೆ ಮಾಡುವವರಿಗೆ ವೈಯಕ್ತಿಕವಾಗಿ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.

ತುಮಕೂರು ತಾಲ್ಲೂಕು ದುರ್ಗದಹಳ್ಳಿಯಲ್ಲಿ ಸ್ಮಶಾನವಿಲ್ಲದೆ ರಸ್ತೆ ಪಕ್ಕದಲ್ಲಿ ಶವ ಸಂಸ್ಕಾರ ಮಾಡಿರುವ ಬಗ್ಗೆ ಮಾತನಾಡಿದ ಸಚಿವರು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದ್ದು, ಪ್ರಕರಣವನ್ನು ಬಗೆಹರಿಸದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಕ್ರಮವಹಿಸಲಾಗುವುದು. ದಲಿತ ಸಮುದಾಯಗಳಿಗೆ ಶವ ಸಂಸ್ಕಾರಕ್ಕೆ ಸ್ಮಶಾನವಿಲ್ಲದೆ ತೊಂದರೆ ಅನುಭವಿಸುತ್ತಿರುವುದನ್ನು ತಡೆಯಲು 2013ರಲ್ಲಿಯೇ ನಮ್ಮ ಸರ್ಕಾರ ರಾಜ್ಯದ ಪ್ರತಿ ಗ್ರಾಮದಲ್ಲಿಯೂ ಸಾರ್ವಜನಿಕ ಸ್ಮಶಾನಕ್ಕಾಗಿ ಭೂಮಿ ಮೀಸಲಿಡಬೇಕೆಂಬ ನಿಯಮ ಜಾರಿಗೆ ತಂದಿತ್ತು. ಈಗಲೂ ಈ ನಿಯಮ ಮುಂದುವರೆದುಕೊಂಡು ಹೋಗುತ್ತಿದ್ದು, ಪ್ರತಿ ಗ್ರಾಮದಲ್ಲಿಯೂ ಸ್ಮಶಾನ ಭೂಮಿ ಮೀಸಲಿಡುವ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಅಗತ್ಯವಿರುವೆಡೆ ವಿದ್ಯುತ್ ಚಿತಾಗಾರ ನಿರ್ಮಿಸುವ ಬಗ್ಗೆಯೂ ಚಿಂತಸಲಾಗುತ್ತಿದೆ ಎಂದು ತಿಳಿಸಿದರು.

ತುಮಕೂರು ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಯೋಜಿತ ರೀತಿಯಲ್ಲಿ ಚರಂಡಿ, ಒಳಚರಂಡಿ, ರಸ್ತೆ ಸಂಪರ್ಕ ವ್ಯವಸ್ಥೆಯೊಂದಿಗೆ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸುವ ಹಾಗೂ ವಾರ್ಡುಗಳ ಪುನರ್ವಿಂಗಡಣೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆಂಪಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *