ಜಿಲ್ಲಾ ವಕೀಲರ ಸಂಘದಿಂದ ವಕೀಲರ ದಿನ ಆಚರಣೆ

ತುಮಕೂರು: ವಕೀಲರ ದಿನಾಚರಣೆ ಅಂಗವಾಗಿ ಜಿಲ್ಲಾ ವಕೀಲರ ಸಂಘದಿಂದ ನ್ಯಾಯಾಲಯ ಆವರಣದ ವಕೀಲರ ಭವನದಲ್ಲಿ ಬುಧವಾರ ವಕೀಲರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಯಂತ್‍ಕುಮಾರ್ ಅವರು ಜ್ಯೋತಿ ಬೆಳಗಿ ಶಿಬಿರ ಉದ್ಘಾಟಿಸಿ, ನಾನೂ ವಕೀಲನಾಗಿ ವಕೀಲರ ದಿನಾಚರಣೆ ಸಂಭ್ರಮದಲ್ಲಿ ಭಾಗಿಯಾಗಿದ್ದೇನೆ, ಎಲ್ಲಾ ವಕೀಲರಿಗೂ ಶುಭಾಶಯಗಳು ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆಂಪರಾಜಯ್ಯ ಮಾತನಾಡಿ, ದೈನಂದಿನ ಕೆಲಸದ ಒತ್ತಡ ವಕೀಲರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆರೋಗ್ಯ ಸಮಸ್ಯೆ ಬಾಧಿಸುತ್ತಿದ್ದರೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಕೀಲರು ಆರೋಗ್ಯ ಕಾಪಾಡಿಕೊಳ್ಳಬೇಕು. ಇಂದು ತಪಾಸಣಾ ಶಿಬಿರ ಏರ್ಪಡಿಸಿ ವಕೀಲರ ವಕೀಲರ ಆರೋಗ್ಯ ಪರೀಕ್ಷೆ ಮಾಡಿಸುವುದು, ಆರೋಗ್ಯದ ಬಗ್ಗೆ ಜಾಗೃತಿವಹಿಸಲೆಂದು. ವಕೀಲರು ನಿಯಮಿತವಾಗಿ ಆರೋಗ್ಯ ತಪಾಸಣೆ, ಅಗತ್ಯವಿದ್ದರೆ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್ ಮಾತನಾಡಿ, ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರ ಜನ್ಮದಿನವಾದ ಡಿಸೆಂಬರ್ 3ರಂದು ವಕೀಲರ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಸಂಘದಲ್ಲಿ ವಿಶೇಷ ಕಾರ್ಯಕ್ರಮ ಮಾಡುತ್ತಿದ್ದು ಇಂದು ಸಿದ್ಧಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಿಂದ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ಅಗತ್ಯವಿರುವ ವಕೀಲರು ಶಿಬಿರದ ಪ್ರಯೋಜನ ಪಡೆದರು ಎಂದು ಹೇಳಿದರು.

ವಕೀಲರ ದಿನವು ವಕೀಲರಿಗೆ ಹಬ್ಬವಿದ್ದಂತೆ ಇಂದು ಅದೇ ಮಾದರಿಯಲ್ಲಿ ಸಿಹಿ ವಿತರಿಸಿ ಸಂಭ್ರಮದಿಂದ ಆಚರಿಸಲಾಯಿತು. ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲಾಗಿರುವಾಗ ವಕೀಲರ ಆರೋಗ್ಯ ಕಾಳಜಿಯಿಂದಾಗಿ ಸಂಘದಿಂದ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ವಿವಿಧ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುತ್ತು ಎಂದು ಹಿರೇಹಳ್ಳಿ ಮಹೇಶ್ ಹೇಳಿದರು.

ಸಂಘದ ಉಪಾಧ್ಯಕ್ಷ ರವಿಗೌಡ, ಜಂಟಿ ಕಾರ್ಯದರ್ಶಿ ಧನಂಜಯ, ಖಜಾಂಚಿ ಬಿ.ಎಂ.ಸಿಂಧು, ಕಾರ್ಯಕಾರಿಮಂಡಳಿ ಸದಸ್ಯರಾದ ಡಿ.ಎ.ಜಗದೀಶ್, ಸುರೇಶ್, ಪದ್ಮಾಶ್ರೀ, ಗೋವಿಂದರಾಜು, ಸೇವಾಪ್ರಿಯ ಮೊದಲಾದವರು ಭಾಗವಹಿಸಿದ್ದರು.

ಸಿದ್ಧಗಂಗಾ ಆಸ್ಪತ್ರೆಯ ತಜ್ಞ ವೈದ್ಯರು, ಆರೋಗ್ಯ ಸಿಬ್ಬಂದಿಯ ತಂಡದಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

Leave a Reply

Your email address will not be published. Required fields are marked *