ಕುಂಚಿಟಿಗ ಸಮುದಾಯದ ರಾಜಕೀಯ ಪ್ರಾತಿನಿಧ್ಯಕ್ಕೆ ಮುಖಂಡರ ಸಂಕಲ್ಪ, ಮುರಳಿಧರ ಹಾಲಪ್ಪರಿಗೆ ಶಕ್ತಿ ತುಂಬಲು ತೀರ್ಮಾನ :

ತುಮಕೂರು: ಜಿಲ್ಲೆಯಲ್ಲಿ ಕುಂಚಿಟಿಗ ಸಮುದಾಯದ ರಾಜಕೀಯ ಪ್ರಾತಿನಿಧ್ಯತೆ ಪಡೆಯಲು, ಸಮರ್ಥ ನಾಯಕರಿಗೆ ಒಗ್ಗಟ್ಟಿನಿಂದ ಬೆಂಬಲ ನೀಡಿ ಶಕ್ತಿ ತುಂಬುವ ಬಗ್ಗೆ ಜಿಲ್ಲೆಯ ಕುಂಚಿಟಿಗ ಸಮುದಾಯದ ಮುಖಂಡರು ಒಕ್ಕೊರಲ ತೀರ್ಮಾನ ತೆಗೆದುಕೊಂಡರು.

ಭಾನುವಾರ ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ನೇತಾಜಿ ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಸಮುದಾಯದ ರಾಜಕೀಯ ನಾಯಕತ್ವ ಕುರಿತು ಚರ್ಚೆ ನಡೆಯಿತು. ಜಿಲ್ಲೆಯ ಎಲ್ಲಾ ತಾಲ್ಲೂಕು, ಹೋಬಳಿ ಮಟ್ಟದ ಕುಂಚಿಟಿಗ ಮುಖಂಡರ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚೆ ಮಾಡಿ ಸಮುದಾಯದ ನಾಯಕರಿಗೆ ಬೆಂಬಲ ನೀಡಿ ಶಕ್ತಿ ತುಂಬಿ ರಾಜಕೀಯ ಪ್ರಾತಿನಿಧ್ಯ ಕಾಪಾಡಿಕೊಳ್ಳಲು ತೀರ್ಮಾನಿಸಲಾಯಿತು.

ಕುಂಚಿಟಿಗ ಸಮುದಾಯದ ಬಿಎಲ್.ಗೌಡ, ಕೆ.ಮಲ್ಲಣ್ಣ, ಸಿ.ಪಿ.ಮೂಡಲಗಿರಿಯಪ್ಪ, ಟಿ.ಬಿ.ಜಯಚಂದ್ರ, ಬಿ.ಸತ್ಯನಾರಾಯಣ, ಎಂ.ವಿ.ವೀರಭದ್ರಯ್ಯ ಮತ್ತಿತರರು ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಸಮರ್ಥ ನಾಯಕರಾಗಿದ್ದರು. ಆವರ ತರುವಾಯ ಕುಂಚಿಟಿಗರಲ್ಲಿ ನಾಯಕತ್ವದ ಕೊರತೆ ಆಗದಂತೆ ಸಮರ್ಥ ನಾಯಕರನ್ನು ರೂಪಿಸುವ ಅನಿವಾರ್ಯ ಪರಿಸ್ಥಿತಿ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಆಗಬೇಕು ಎಂದು ಹಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು. 

ಏಳೆಂಟು ಜಿಲ್ಲೆಗಳಲ್ಲಿ ಕುಂಚಿಟಿಗ ಮತದಾರರು ಚುನಾವಣೆಗಳಲ್ಲಿ ನಿರ್ಣಾಯಕರಾಗಿದ್ದಾರೆ. ಹೆಚ್ಚು ಸಂಖ್ಯೆಯಲ್ಲಿರುವ ತುಮಕೂರು, ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಾತಿನಿಧ್ಯ ಸಾಧಿಸಲು ಅವಕಾಶವಿದೆ. ಆದರೆ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ಕುಂಚಿಟಿಗ ನಾಯಕರಿಗೆ ಚುನಾವಣೆ ಅವಕಾಶ, ರಾಜಕೀಯ ಸ್ಥಾನಮಾನಗಳು ಕೈ ತಪ್ಪುತ್ತಿವೆ. ಸಂಘಟನಾ ಕೊರತೆಯಿಂದಾಗಿ ರಾಜಕೀಯ ಪಕ್ಷಗಳು ನಮ್ಮನ್ನು ನಿರ್ಲಕ್ಷಿಸಿರಬಹುದು. ಹೀಗಿರುವಾಗ ನಾವು ಎಚ್ಚೆತ್ತುಕೊಂಡು ಸಂಘಟನಾ ಶಕ್ತಿ ಪ್ರದರ್ಶಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. ನಿರ್ಣಾಯಕರಾಗಿರುವ ಕುಂಚಿಟಿಗರಿಗೆ ನಾಯಕತ್ವ ವಂಚಿಸುವ ಪ್ರಯತ್ನಗಳೇ ಕಂಡು ಬರುತ್ತಿವೆ ಎಂದು ಹೇಳಿದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಕೆಪಿಸಿಸಿ ವಕ್ತಾರರಾದ ಮುರಳೀಧರ ಹಾಲಪ್ಪನವರು ಎಲ್ಲಾ ವರ್ಗದ ಜನರೊಂದಿಗೆ ಬೆರೆತು, ಅವರ ವಿಶ್ವಾಸ ಗಳಿಸಿ, ಜನಾನುರಾಗಿ ನಾಯಕರಾಗಿ ಹೊರಹೊಮ್ಮಿದ್ದಾರೆ. ರೈತರು, ಮಹಿಳೆಯರು, ವಿದ್ಯಾರ್ಥಿಗಳ ಸಬಲೀಕರಣ ಕಾರ್ಯಕ್ರಮಗಳ ಮೂಲಕ ಎಲ್ಲರ ಮೆಚ್ಚಿನ ನಾಯಕರಾಗಿ ಗಮನ ಸೆಳೆದಿದ್ದಾರೆ. ಸಮುದಾಯದವರು ಒಗ್ಗಟ್ಟನಿಂದ ಮುರಳಿಧರ ಹಾಲಪ್ಪನವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನಿಡುವಂತೆ ರಾಜಕೀಯ ಪಕ್ಷಗಳ ಮೇಲೆ ಒತ್ತಡ ತರಬೇಕು. ನಿರ್ಲಕ್ಷಿಸಿದರೆ ಪಕ್ಷಗಳಿಗೆ ತಕ್ಕ ಉತ್ತರ ನೀಡುವ ಎಚ್ಚರಿಕೆ ನೀಡಬೇಕು ಎಂದು ಹಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಮುರಳೀಧರ ಹಾಲಪ್ಪನವರು, ಎಲ್ಲಾ ಸಮುದಾಯಗಳ ಧ್ವನಿಯಾಗಿ ಮುಖಂಡರು ಸ್ಪಂದಿಸಬೇಕು. ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು, ಮಾರ್ಗದರ್ಶನ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಸಮುದಾಯದ ಬಡ, ಆಸಕ್ತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತುಪಡೆದು ಅವರು ಐಎಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಮಾರ್ಗದರ್ಶನ ನೀಡಿ, ಅವರು ಉತ್ತಮ ಬದುಕು ರೂಪಿಸಿಕೊಳ್ಳಲು ನೆರವಾಗಬೇಕು. ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳಿಗೆ, ಸ್ವಂತ ಉದ್ದಿಮೆ ಆರಂಭಿಸುವವರಿಗೆ ಸರ್ಕಾರದ ವಿವಿಧ ಯೋಜನೆಗಳಿವೆ. ಅವುಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಿ ಸಹಾಯ ಮಾಡುವಂತೆ ವಿನಂತಿಸಿದ ಅವರು, ಗ್ರಾಮ ಪಂಚಾಯ್ತಿಯಿಂದ ಉನ್ನತ ಸ್ಥಾನಗಳವರೆಗೆ ರಾಜಕೀಯ ಪ್ರಾತಿನಿಧ್ಯ ಪಡೆಯುವ ಪ್ರಯತ್ನ ಮಾಡಬೇಕು ಎಂದರು.

ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ನೇತಾಜಿ ಶ್ರೀಧರ್, ಸಂಘದ ಮಾಜಿ ಅಧ್ಯಕ್ಷರಾದ ಲಿಂಗಣ್ಣ, ದೊಡ್ಡಲಿಂಗಪ್ಪ, ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲ್ಲೂಕು ಸಂಘಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ಮುರಳೀಧರ ಹಾಲಪ್ಪನವರು ಸಮರ್ಥ ನಾಯಕರಾಗಿ ರೂಪುಗೊಳ್ಳಲು ಸಮುದಾಯ ಶಕ್ತಿ ತುಂಬಬೇಕು ಎಂಬ ನಿರ್ಧಾರ ಕೈಗೊಂಡರು.

Leave a Reply

Your email address will not be published. Required fields are marked *