ತುಮಕೂರು : ನಮ್ಮ ಕನಸು, ನಮ್ಮ ತುಮಕೂರು, ಭವಿಷ್ಯದ ತುಮಕೂರು ಹೇಗಿರಬೇಕು ಎಂಬ ದೂರದೃಷ್ಟಿಯ ಹಿನ್ನೆಲೆಯಲ್ಲಿ ಹಾಲಪ್ಪ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಶೃಂಗಸಭೆಯಲ್ಲಿ ಬಹುತೇಕ ಸ್ವಾಮೀಜಿಗಳು ಈ ಜಿಲ್ಲೆಗೆ ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ದೊರೆಯುವಂತಹ ಕೆಲಸಗಳಾಗಲು ಗಟ್ಟಿ ನಾಯಕತ್ವ ಅಗತ್ಯವಿದೆ. ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ಅವರು ಮುಖ್ಯಮಂತ್ರಿಯಾದರೆ, ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಆರಂಭದಲ್ಲಿ ಶೃಂಗ ಸಭೆ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ,ಬೆಂಗಳೂರಿಗೆ ಹತ್ತಿರ ಇರುವ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಈಗಾಗಲೇ ಎರಡು ಶೃಂಗ ಸಭೆಗಳನ್ನು ನಡೆಸಿದ್ದು, ಧಾರ್ಮಿಕ ಮುಖಂಡರ ಮೂಲಕ ಈ ಜಿಲ್ಲೆಯ ಅಗತ್ಯತೆಗಳೇನು, ಮತ್ತು ಅವುಗಳನ್ನು ಪಡೆಯಲು ಇರುವ ಅವಕಾಶಗಳ ಕುರಿತಂತೆ ಸಲಹೆ ಸೂಚನೆ ಪಡೆಯಲು ಶೃಂಗಸಭೆ ಆಯೋಜಿಸಲಾಗಿದೆ ಬೆಂಗಳೂರು ಹೌಸ್ಫುಲ್ ಆಗಿದೆ. ಅಲ್ಲಿಯ ಒತ್ತಡ ಕಡಿಮೆಯಾಗಬೇಕೆಂದರೆ ಹತ್ತಿರದಲ್ಲಿಯೇ ಇರುವ ತುಮಕೂರಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯಬೇಕು. ಇಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದರೆ ಐಟಿ ಕಂಪನಿಗಳಿಗೆ ಜಾಗ ಒದಗಿಸಿದರೆ ಹೆಚ್ಚು ಬೆಳವಣಿಗೆಯನ್ನು ನಿರೀಕ್ಷಿಸಬಹುದು. ಇಲ್ಲಿರುವ ತಾಂತ್ರಿಕ ಕಾಲೇಜುಗಳನ್ನು ಉಪಯೋಗಿಸಿಕೊಂಡು ಈ ಕೆಲಸ ಮಾಡುವ ನಿಟ್ಟಿನಲ್ಲಿ ಈಗಾಗಲೇ ಹೆಜ್ಜೆ ಇಡಲಾಗಿದೆ ಎಂದರು.
ಇದು ಮೂರನೇ ಶೃಂಗಸಭೆ. ಕೃಷಿ, ಶಿಕ್ಷಣ, ಮಹಿಳಾ ಸಬಲೀಕರಣ,ಯುವಜನರಿಗಾಗಿ ವಿಶೇಷ ಯೋಜನೆಗಳ ಕುರಿತಂತೆ ಸ್ವಾಮೀಜಿಗಳು ನೀಡುವ ಸಂದೇಶವನ್ನು ಸರಕಾರಕ್ಕೆ ತಲುಪಿಸಿ,ಜಿಲ್ಲೆಯ ಅಭಿವೃದ್ದಿಗೆ ಅದನ್ನು ಬಳಸಿಕೊಳ್ಳಲು ಮುಂದಾಗಿದ್ದೇವೆ. ಇದರ ಜೊತೆಗೆ, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಇಚ್ಚಾಶಕ್ತಿ ಹೊಂದಿರುವ ರಾಜಕಾರಣಿಗೆ ಹೆಚ್ಚಿನ ಅಧಿಕಾರ ದೊರೆತರೆ ಸಾಧ್ಯ ಎಂದರು.
ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಡಾ.ಜಪಾನಂದಜೀ ಮಾತನಾಡಿ,ಮುರುಳೀಧರ ಹಾಲಪ್ಪ ತಮ್ಮ ಹಾಲಪ್ಪ ಪ್ರತಿಷ್ಠಾನದ ಮೂಲಕ ಒಳ್ಳೆಯ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಇದು ಒಂದು ರೀತಿಯಲ್ಲಿ ಅನುಭವ ಮಂಟಪದ ರೀತಿಯಲ್ಲಿದೆ. ಎಲ್ಲಾ ವರ್ಗದ ಸ್ವಾಮೀಜಿಗಳು ಇಲ್ಲಿದ್ದಾರೆ. ಆದ್ಯಾತ್ಮ, ಅಕ್ಷರ, ಆರೋಗ್ಯ ಮತ್ತು ಅಭಿವೃದ್ಧಿ ಈ ನಾಲ್ಕು ಸುಭದ್ರ ಮಾಡಿದರೆ ಉಳಿದವು ತನ್ನಿಂದ ತಾನೇ ಆಗುತ್ತದೆ. ದೀಪದ ಕೆಳಗೆ ಕತ್ತಲೆ ಇದ್ದಂತೆ, ಇಲ್ಲಿ ಎಲ್ಲವೂ ಇದ್ದರೂ ಜಿಲ್ಲೆಗೆ ಏನೂ ಸಿಗುತ್ತಿಲ್ಲ. ದಾಸೋಹ ಮೊದಲಾದ ಕಾರ್ಯಗಳು ವಿಸ್ತರಣೆ ಆಗುತ್ತಿಲ್ಲ. ದೇಶದ ಬಗ್ಗೆ ಯಾರಿಗೂ ಮನಸ್ಸು ಇಲ್ಲ. ಇಲ್ಲಿ ಜಯದೇವ, ಕ್ಯಾನ್ಸರ್ ಆಸ್ಪತ್ರೆಗೆ ಜಾಗ ಕೊಡಿ, ಸ್ಥಳ ಕೊಡಿ ನಾವು ಹೃದಯ ಮತ್ತು ಕ್ಯಾನ್ಸರ್ ಆಸ್ಪತ್ರೆ ಮಾಡ್ತೀವಿ. ಆರೋಗ್ಯವೇ ಇಲ್ಲದಿದ್ದರೆ ಏನು ಸಬಲೀಕರಣಕೊಡುತ್ತೀರಾ. ಈ ಬಗ್ಗೆ ಚಿಂತನ ಮಂಥನ ನಡೆಯಬೇಕು ಎಂದರು.
ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿ ಮಾತನಾಡಿ,ಈ ವೇದಿಕೆಯಲ್ಲಿ ಎಲ್ಲಾ ಸ್ವಾಮಿಗಳು ಒಟ್ಟಿಗೆ ಕೂತಿರುವುದು ಸಂತೋಷ, ಹಳ್ಳಿಗಳನ್ನು ಉಳಿಸಿ, ಪಟ್ಟಣಗಳನ್ನು ಕಡಿಮೆ ಮಾಡಿ,ಹಳ್ಳಿಗಳನ್ನು,ಹಳ್ಳಿತನ ಉಳಿಸುವ ಪ್ರಯತ್ನ ಆಗಬೇಕು. ವೃದ್ದಾಶ್ರಮಗಳು ಆಗುತ್ತಿವೆ.ಪಟ್ಟಣ ವ್ಯಾಮೋಯ ಕಡಿಮೆ ಆಗಬೇಕು. ಕೃಷಿ ಆಕರ್ಷಣೀಯ ವೃತ್ತಿಯಾದರೆ ಎμÉ್ಟೂೀ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಬಂಜರ ಭೂಮಿಯನ್ನು ಫಲವತ್ತಾದ ಭೂಮಿಯಾಗಿ ಪರಿವರ್ತಿಸುವ ಕೆಲಸ ಆಗಬೇಕು. ಗೋಮಾಳಗಳಲ್ಲಿ ಗಿಡಮರಗಳನ್ನು ನೆಟ್ಟು ಬೆಳೆಸುವಂತಾಗಬೇಕು. ಸರಕಾರ ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಪ್ರಕಟಿಸಬೇಕು. ಗೃಹ ಮಂತ್ರಿಗಳಾಗಿರುವ ಡಾ.ಜಿ.ಪರಮೇಶ್ವರ್ಅವರಿಗೆ ಇನ್ನು ಹೆಚ್ಚಿನ ಅಧಿಕಾರ ಸಿಕ್ಕು, ರಾಜ್ಯಕ್ಕೆ ಉತ್ತಮ ನಾಯಕತ್ವ ಲಭಿಸುವಂತಾಗಲಿ ಎಂದರು.

ಶ್ರೀರಾಮಕೃಷ್ಣ-ವಿರೇಶಾನಂದ ಸ್ವರಸ್ವತಿ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಒಂದು ನೂರಕ್ಕೂ ಹೆಚ್ಚು ಹಾಸ್ಟಲ್ಗಳಿವೆ .ಅವುಗಳಲ್ಲಿ ಶೌಚಾಲಯ, ಸ್ವಚ್ಚತೆಯ ಜೊತೆಗೆ, ಶಿಸ್ತಿನ ಸಿಬ್ಬಂದಿಯ ಕೊರತೆಯಿದೆ. ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ನಿಷ್ಕ್ರಿಯಗೊಂಡಿದೆ. ಯುವಜನರೇ ನಮ್ಮ ಕಾನೂನಿಗೆ ಬೆಲೆ ನೀಡುತ್ತಿಲ್ಲ. ಹೆಲ್ಮೇಟ್ ಬಳಸದೆ,ಚಾಲನಾ ಪರವಾನಗಿ ಇಲ್ಲದೆ ಸಾವಿರಾರು ವಿದ್ಯಾರ್ಥಿಗಳು ದ್ವಿಚಕ್ರ ವಾಹನ ಚಲಾಯಿಸುತ್ತಾರೆ. ಇವುಗಳಿಗೆ ಕಡಿವಾಣ ಹಾಕುವಂತಾಗಬೇಕು. ಪ್ರವಾಸೋದ್ಯಮಕ್ಕೆ ಹೆಚ್ಚಿನಒತ್ತು ನೀಡಬೇಕಾಗಿದೆ. ಪುಣ್ಯಕ್ಷೇತ್ರಗಳನ್ನು ಅಪವಿತ್ರಗೊಳಿಸದಂತೆ ರಕ್ಷಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಸಿದ್ದರಬೆಟ್ಟದ ಶ್ರೀವೀರಭದ್ರಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಂಗಳೂರಿಗೆ ಹತ್ತಿರ ಇರುವ ತುಮಕೂರು ನಾವೆಲ್ಲ ಅಂದುಕೊಂಡಷ್ಟ್ಟು ಅಭಿವೃದ್ಧಿ ಆಗುತ್ತಿಲ್ಲ. ಕೈಗಾರಿಕೆಗಳು ಬಂದಿವೆ, ಆದರೆ ನಮ್ಮ ಹಳ್ಳಿಗಳ ಮಕ್ಕಳಿಗೆ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಕೌಶಲ್ಯದ ಕೊರತೆಯಿಂದ ಉದ್ಯೋಗ ಅವಕಾಶ ಪಡೆಯಲು ಸಾಧ್ಯವಾಗುತ್ತಿಲ್ಲ. ಟೆಕ್ನಿಕಲ್ ಕೋರ್ಸ್ಗಳು ತಾಲೂಕು, ಹೋಬಳಿ ಮಟ್ಟದಲ್ಲಿ ತರಬೇಕು. ಆಗ ಹಳ್ಳಿಯ ಮಕ್ಕಳಿಗೆ ಉದ್ಯೋಗ ದೊರೆಯಲು ಸಾಧ್ಯ. ಮೆಟ್ರೋ ಬಂದರೆ ತ್ವರಿತ ಗತಿಯಲ್ಲಿ ಬೆಳವಣಿಗೆಗೆ ಅನುಕೂಲವಾಗಲಿದೆ. ಜಿಲ್ಲೆಯ ಅಭಿವೃದ್ದಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು, ಮಠಾಧೀಶರ ಸಭೆ ನಡೆದರೆ ಹೆಚ್ಚು ಅನುಕೂಲ ಎಂದರು.
ಕುಂಚಟಿಗ ಸಂಸ್ಥಾನ ಮಠದ ಶ್ರೀಹನುಮಂತನಾಥಸ್ವಾಮೀಜಿ ಮಾತನಾಡಿ,ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಇಚ್ಚಾಶಕ್ತಿ ಇರುವ ರಾಜಕಾರಣಿಗಳ ಅಗತ್ಯವಿದೆ.ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ ದೂರದೃಷ್ಟಿಯುಳ್ಳ ರಾಜಕಾರಣಿ.ಅವರಿಗೆ ಒಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಕೈತಪ್ಪಿದೆ. ಅವರು ಮುಖ್ಯಮಂತ್ರಿಯಾದರೆ ಇಂದು ನಾವು ಹೆಸರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಮೆಟ್ರೋ,ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳು ಜಿಲ್ಲೆಯ ದೊರೆಯಲಿವೆ ಎಂಬ ವಿಶ್ವಾಸವಿದೆ ಎಂದರು.
ಬೆಳ್ಳಾವಿಯ ಶ್ರೀಕಾರದ ಮಠದ ಶ್ರೀಕಾರದ ವೀರಬಸವ ಮಹಾಸ್ವಾಮೀಜಿ ಮಾತನಾಡಿ, ಭವಿಷ್ಯದ ತುಮಕೂರು ಹೇಗಿರಬೇಕು ಎಂಬ ಮಹಾತ್ವಕಾಂಕ್ಷೆಯಿಂದ ಹಾಲಪ್ಪ ಪ್ರತಿಷ್ಠಾನ ಈ ಶೃಂಗ ಸಭೆಯ ಮೂಲಕ ಒಂದು ಒಳ್ಳೆಯ ಸಂದೇಶವನ್ನು ಜನರಿಗೆ ಮುಂದಿಟ್ಟಿದೆ. ಇಡೀ ರಾಜ್ಯದ ಹೆಬ್ಬಾಗಿಲು ತುಮಕೂರು. ಅನ್ನ, ಅಕ್ಷರ ಆಶ್ರಯಕ್ಕೆ ಹೆಸರುವಾಸಿಯಾಗಿದೆ. ಜಿಲ್ಲೆಯ ಅಭಿವೃದ್ದಿಗೆ ಡಾ.ಜಿ.ಪರಮೇಶ್ವರ್ ಸಿ.ಎಂ.ಆದರೆ ಹೆಚ್ಚು ಅನುದಾನ ಹರಿದು ಬರಲಿದೆ ಎಂದರು.
ನಮ್ಮ ಕನಸು, ನಮ್ಮ ತುಮಕೂರು ಶೃಂಗ ಸಭೆ ಕುರಿತು ಅರೆ ಶಂಕರ ಮಠದ ಶ್ರೀಸಿದ್ದರಾಮ ಚೈತನ್ಯ ಮಹಾಸ್ವಾಮೀಜಿ, ತಿಪಟೂರಿನ ಗುರುಕುಲಾನಂದ ಮಠದ ಶ್ರೀಕರಿಬಸವ ಸ್ವಾಮೀಜಿ, ಬಿಂದು ಶೇಖರ್ಒಡೆಯರ್, ಬೆಟ್ಟದ ಹಳ್ಳಿ ಶ್ರೀಚಂದ್ರಶೇಖರಸ್ವಾಮೀಜಿ ,ಹಿರೇಮಠದ ಶ್ರೀರೇವಣಸಿದ್ದೇಶ್ವರಸ್ವಾಮೀಜಿ, ಸರಪಳಿ ಮಠದ ಶ್ರೀಜ್ಞಾನಾನಂದಪುರಿ ಸ್ವಾಮೀಜಿ, ತೊರೆ ಮಠದ ಅಟವಿ ಚನ್ನಬಸವೇಶ್ವರ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ಶ್ರೀಸಿದ್ದಲಿಂಗೇಶ್ವರ ಸ್ವಾಮೀಜಿ, ಷಡಕ್ಷರ ಮಠದ ಶ್ರೀರುದ್ರಮುನಿ ಸ್ವಾಮೀಜಿ, ನಿಟ್ರಹಳ್ಳಿ ನೀಲಕಂಠೇಶ್ವರಾಚಾರ್ಯ ಸ್ವಾಮೀಜಿ ಸೇರಿದಂತೆ 48ಕ್ಕೂ ಹೆಚ್ಚು ಸ್ವಾಮೀಜಿಗಳು ಶೃಂಗಸಭೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.