ತುಮಕೂರು : ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ, ಲಿಂಗಪತ್ತೆ ಪ್ರಕರಣಗಳು ಕಂಡು ಬಂದಲ್ಲಿ ಅಂತಹ ವೈದ್ಯರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಶೇಖರ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಿಸಿ&ಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭ್ರೂಣ ಹತ್ಯೆ, ಲಿಂಗಪತ್ತೆ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ನಿಷ್ಕ್ರಿಯೆಗೊಂಡ ಎಲ್ಲಾ ಸ್ಕ್ಯಾನಿಂಗ್ ಮಿಷನ್‍ಗಳ ವರದಿಯನ್ನು ಸಲ್ಲಿಸುವಂತೆ ಎಲ್ಲಾ ಆಸ್ಪತ್ರೆ ಮತ್ತು ಕ್ಲಿನಿಕ್‍ಗಳಿಗೂ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಹೊಸದಾಗಿ ಸ್ಕ್ಯಾನಿಂಗ್ ಯಂತ್ರ ಖರೀದಿಸುತ್ತಿರುವ ಸೆಂಟರ್‍ಗಳಿಗೆ ಹಾಗೂ ಡೆಮೋ ನೀಡಲು ಅನುಮತಿ ಕೋರಿರುವ ಸ್ಕ್ಯಾನಿಂಗ್ ಯಂತ್ರಗಳಿಗೆ ಪಿಸಿ&ಪಿಎನ್‍ಡಿಟಿ ಕಾಯ್ದೆಯನ್ವಯ ನಿಬಂಧನೆಗಳಿಗನುಗುಣವಾಗಿ ಅನುಮತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ಸ್ಕ್ಯಾನಿಂಗ್ ಯಂತ್ರಗಳು ಕಾರ್ಯಾರಂಭಗೊಳ್ಳದಂತೆ ಕ್ರಮವಹಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ(ಪ್ರಭಾರ) ಡಾ|| ಮೋಹನ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ|| ಲೋಕೇಶ್, ಮಕ್ಕಳ ವೈದ್ಯ ಡಾ|| ಸಂತೋಷ್, ವಕೀಲ ಕುಮಾರ ಸ್ವಾಮಿ ಎಂ.ಎನ್., ಸಮಾಜ ಸೇವಕರಾದ ರಾಣಿ ಚಂದ್ರಶೇಖರ್ ಹಾಜರಿದ್ದರು.