ತುಮಕೂರು : ಪ್ರತಿ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನು ತಿಳುವಳಿಕೆ ಅಗತ್ಯತೆ ವಿದ್ದು, ಕಾನೂನುಗಳ ಅರಿವು ಹೊಂದಿದ ಮನುಷ್ಯ ಯಾವುದೇ ಅಡೆತಡೆಯಿಲ್ಲದೇ ನೆಮ್ಮದಿಯಿಂದ ಜೀವಿಸಬಹುದು, ಅದಕ್ಕಾಗಿ ಕಾನೂನು ಜಾಗೃತಿ ಪಡೆಯಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಕೆ.ಸೋಮಶೇಖರ್ ಕರೆ ನೀಡಿದರು.
ಶ್ರೀ ಸಿದ್ದಗಂಗಾ ಮಠದ ಆವರಣದಲ್ಲಿ ಸೋಮವಾರ ನಡೆದ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು, ಶ್ರೀ ಸಿದ್ಧಗಂಗಾ ಮಠ ಹಾಗೂ ಜಿಲ್ಲಾ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನು ಸುಲಭವಾಗಿ ಜೀವಿಸಲು ಒಂದಲ್ಲ ಒಂದು ರೀತಿಯಲ್ಲಿ ಕಾನೂನು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾನೂನುಗಳ ಅರಿವು ಹೊಂದಿರಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರಾಗಿದ್ದು, ಆ ಮೂಲಕ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಬಾಳಬಹುದು. ಸಮಸ್ತ ನಾಗರೀಕರಲ್ಲಿ ಕಾನೂನು ಅರಿವು ಉಂಟಾದಾಗ ಮಾತ್ರ ಅಪರಾಧಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣದ ಮೂಲಕ ದೇಶದ ಅಭಿವೃದ್ಧಿಗೆ ನಾಂದಿಯಾಗುತ್ತದೆ ಎಂದು ತಿಳಿಸಿದ ಅವರು ನೆರದಿದ್ದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಗತ್ಯ ಕಾನೂನು ಮಾಹಿತಿ ನೀಡಿದರು.
ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಿದ್ದು, ವಿಶೇಷವಾಗಿತ್ತು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಸ್.ಜಿ.ಪಂಡಿತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಭಾರತ ಸಂವಿಧಾನದಲ್ಲಿ ಮಕ್ಕಳ ರಕ್ಷಣೆಗಾಗಿ ವಿಶೇಷ ಹಕ್ಕುಗಳನ್ನು ನೀಡಲಾಗಿದ್ದು, ಮಕ್ಕಳು ತಮಗೆ ದೊರಕಿರುವ ಶ್ರೀ ಮಠದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಕಾನೂನುಗಳ ಅರಿವು ಪಡೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ಕರೆ ನೀಡಿ, ವಿವಿಧ ಕಾನೂನುಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿದ್ದ ಶ್ರೀ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ನ್ಯಾಯಾಧೀಶರಾದ ಜೈಶಂಕರ್, ಜಿಲ್ಲೆಯ 7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಟಿ.ಪಿ ರಾಮಲಿಂಗಗೌಡ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನಿಸ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಹಾಗೂ ಜಿಲ್ಲೆಯ ಎಲ್ಲಾ ನ್ಯಾಯಾದೀಶರು. ವೇದಿಕೆಯಲ್ಲಿ ಉಪಸ್ಥಿತರಿದ್ದರು.