ತುಮಕೂರು : ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಂಡು ಸರ್ಕಾರ ಅಸ್ಥಿರಗೊಳಿಸಲು ವಿರೋಧ ಪಕ್ಷಗಳು ಮುಂದಾದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ವಿರೋಧ ಪಕ್ಷಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಅವರಿಂದು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ರಾಜ್ಯಪಾಲರು ಮುಖ್ಯಮಂತ್ರಿಗಳ ಮೇಲೆ ದೂರು ಸಲ್ಲಿಸಿದ ಅರ್ಧ ದಿನದಲ್ಲೇ ವಿವರಣೆ ಕೇಳಿ ನೋಟೀಸ್ ನೀಡಿದ್ದಾರೆ ಎಂದರೆ ಏನರ್ಥ, ದೂರನ್ನು ರಾಜ್ಯಪಾಲರು ಓದಿ ವಿಮರ್ಶಿಸುವುದಾಗಲಿ, ಅದರ ಬಗ್ಗೆ ಮಾಹಿತಿ ಪಡೆಯದೆ, ಸರ್ಕಾರದ ಪರವಾಗಿ ಮುಖ್ಯಕಾರ್ಯದರ್ಶಿಗಳು ಎಲ್ಲಾ ಮಾಹಿತಿಯನ್ನು ನೀಡಿದ್ದರೂ ನೋಟೀಸ್ ನೀಡಿರುವುದು ದುರುದ್ದೇಶದಿಂದ ಕೂಡಿದೆ, ರಾಜ್ಯಪಾಲರು ಯಾರದೋ ಮಾತಿನಂತೆ ನಡೆದುಕೊಂಡಿದ್ದಾರೆ ಎನಿಸುತ್ತಿದೆ ಎಂದು ಹೇಳಿದರು.
5 ಗ್ಯಾರಂಟಿಗಳನ್ನು ಬಡತನದ ರೇಖೆಗಿಂತ ಕೆಳಗಿರುವವರಿಗೆ ತಲಪ ಬೇಕೆಂಬುದು ಸರ್ಕಾರದ ಉದ್ದೇಶ, ಗ್ಯಾರಂಟಿಗೆ ಸಾವಿರಾರು ಕೋಟಿ ಕೊಟ್ಟಿದ್ದೇವೆ. ವಿರೋಧ ಪಕ್ಷದವರು ಟೀಕೆ ಮಾಡಿ ಗೊಂದಲ ಸೃಷ್ಟಿಸಲು ಮುಂದಾಗಿರುವುದು ತಿರುಳಿಲ್ಲದ ಅಪಾದನೆಗಳಾಗಿದ್ದು, ನಮ್ಮ ಭರವಸೆಯಂತೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ನಮ್ಮ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಕಾಪಾಡಿದ್ದು, ಎಲ್ಲಿಯೂ ಶಾಂತಿಗೆ ಧಕ್ಕೆಯಂತಹ ಘಟನೆಗಳು ನಡೆದಿಲ್ಲ, ಮುಂದೆ ಬರುವ ಗಣೇಶ ಹಬ್ಬದ ನೆಪದಲ್ಲಿ ಅಹಿತಕರ ಘಟನೆಗೆ ಯಾರಾದರೂ ಮುಂದಾದರೆ ಯಾವ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಿದ್ದೇವೆ, ಹಬ್ಬವನ್ನು ಶಾಂತಿಯಿಂದ ಆಚರಿಸಿದಾಗ ಮಾತ್ರ ಹಬ್ಬಕ್ಕೆ ಮೆರಗು ಬರಲಿದೆ ಎಂದರು.
ಜನಸಾಮಾನ್ಯರ ಸಮಸ್ಯೆಗಳನ್ನು ಜಿಲ್ಲಾಡಳಿತ ತೀವ್ರಗತಿಯಲ್ಲಿ ಪರಿಹರಿಸಿ ಸರ್ಕಾರದ ಗುರಿ ತಲುಪಬೇಕು. ಸ್ಪಂದಿಸದ ಅಧಿಕಾರಿ, ನೌಕರ ವರ್ಗದ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.