ಸ್ವಾಭಿಮಾನದ ‘ ಬಿತ್ತನೆ ಬೀಜ’ ಮೊಳೆಯಲಿ.

ಮಾತುಗಳು ಸಿಡಿಗುಂಡಿನಂತೆ, ಎಂದೂ ರಾಜಿಯಾಗದ ಗುಣ, ಎದೆ ಎತ್ತಿ ಸ್ವಾಭಿಮಾನದಿಂದಲೇ ಬದುಕಿದ ಸುಂದರ ಯುವಕ. ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನ ಬಂದಕುಂಟೆ, 1976-77ರಲ್ಲಿ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿದ ಪ್ರಮುಖರಲ್ಲಿ ಒಬ್ಬರು. ಅನೇಕ ಹೋರಾಟಗಳಲ್ಲಿ ಇವರ ನಾಯಕತ್ವವಿದೆ.

ಅನುದಾನಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಹೈಸ್ಕೂಲ್ ಮಾಸ್ತರಾಗಿ ವೃತ್ತಿ ಮಾಡಿ ನಿವೃತ್ತಿಯಾದರು. ಈ ಮಾಸ್ತರಿಕೆಯ ಜೀವನವೂ ಒಂದು ಹೋರಾಟದ ವೃತ್ತಿಯೇ ಆಗಿತ್ತು. ಹೀಗೆ ಅರವತ್ತು ವರ್ಷ ಬದುಕಿದ ಗೆಳೆಯ, ಒಮ್ಮೆಲೆ ಮಾತು ನಿಲ್ಲಿಸಿದ, ಹಾಸಿಗೆ ಹಿಡಿದ. ಸರಿ ಸುಮಾರು ಹತ್ತು ವರ್ಷಗಳ ಕಾಲ ನಡೆ-ನುಡಿಯಿಲ್ಲದೆ ಕಣ್ಣಲ್ಲೇ ಮಾತನಾಡುತ್ತಾ, ಕುಗ್ಗದೇ ಈ ಸ್ಥಿತಿಗೆ ಹೆದರದೇ ಸ್ವಾಭಿಮಾನದಿಂದ ಬದುಕಿದವರು.

ತನ್ನ ಎದೆಯೊಳಗಣ ತಲ್ಲಣವನ್ನು ಯಾರಿಗೂ ವ್ಯಕ್ತಪಡಿಸಲಾಗದೆ, ಈ ಹೋರಾಟಗಾರನ ಎದೆ ಬಡಿತ-ಮಿಡಿತ ಕನ್ನಡಿಯೊಳಗೆ ಮರೆಯಾಯ್ತು. ಇದು ಪ್ರತಿಫಲನವಿಲ್ಲದ ಕನ್ನಡಿ. ಹೋರಾಟದ ಗೆಳೆಯ ಬಂದಕುಂಟೆ ನಾಗರಾಜು 2025ರ ಡಿಸೆಂಬರ್ 29ರಂದು ಬೆಳಿಗ್ಗೆ ಉಸಿರು ನಿಲ್ಲಿಸಿದ. ಉಸಿರು ನಿಲ್ಲಿಸಿದ ಗೆಳೆಯನಿಗೆ ಭಾರವಾದ ಎದೆಯ ಭಾರ ಇಳಿಸಿಕೊಳ್ಳಲು, ಇಂದು ಹೋರಾಟದ ಒಡನಾಡಿಗಳು ನುಡಿನಮನ ಸಲ್ಲಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಕ್ಷಣ.

ಆದರೆ ಒಂದು ನೋವಿನ ಮಾತು... ಗೆಳೆಯ ಬದುಕಿದ್ದಾಗ ನಾನೂ ಸೇರಿ ಹಲವಾರು ಒಡನಾಡಿಗಳು ಹೋಗಿ ನೋಡಲಿಲ್ಲ. ಒಂದು ಸಾಂತ್ವಾನದ ಮಾತು ಆಡಲಿಲ್ಲ. ಆದರೆ ಈಗ ನುಡಿನಮನ ಸಲ್ಲಿಸಲು ಸೇರಿದ್ದೇವೆ. ಯಾಕೆ?... ನಿಜ ಇಂದೂ ಸಹ ನಾವುಗಳು ಸೇರಿ ಈ ಹೋರಾಟದ ಗೆಳೆಯನಿಗೆ ಅಂತಿಮ ನಮನ ಅಥವಾ ನುಡಿನಮನ ಸಲ್ಲಿಸದಿದ್ದರೆ ಇದು ನಮಗೆ ನಾವೇ ಮಾಡಿಕೊಳ್ಳುವ ಅವಮಾನ ಎಂದು ಭಾವಿಸುತ್ತೇನೆ.
ಇಲ್ಲಿಯವರೆಗೆ ಗೆಳೆಯರು ಆಡಿದ ಮಾತುಗಳು ಬಂದಕುಂಟೆ ನಾಗರಾಜಯ್ಯರವರ ಹೋರಾಟ, ಸಂಘಟನೆಯ ಚತುರತೆ, ಅನುಭವಿಸಿದ ಕಷ್ಟ-ಕಾರ್ಪಣ್ಯಗಳು, ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಸ್ವಾಭಿಮಾನದಿಂದ ಬದುಕಿದ ರೀತಿಯನ್ನು ಅನಾವರಣಗೊಳಿಸಿವೆ. ಈ ಕಾರ್ಯಕ್ರಮ ಅವರ ಕುಟುಂಬದ ಸದಸ್ಯರ ಎದೆಯಲ್ಲಿ ಆತನ ಬಗೆಗಿನ ಗೌರವ ಕಡಿಮೆಯಾಗದೆ, ಹೆಚ್ಚಾದರೆ ಈ ಕಾರ್ಯಕ್ರಮ ಸಾರ್ಥಕತೆ ಪಡೆದಂತೆ.

ಏಕೆಂದರೆ ಆತನನ್ನು ಸುಮಾರು ಹತ್ತು ವರ್ಷಗಳ ಕಾಲ ಮಗುವಿನಂತೆ ಸಾಕಿದ್ದಾರೆ, ಹಾರೈಕೆ ಮಾಡಿದ್ದಾರೆ, “ನುಡಿ ನಮನ” ಕಾರ್ಯಕ್ರಮದಿಂದ, “ಮೇಷ್ಟ್ರು” ಹೆಂಡತಿ-ಮಕ್ಕಳು, ಮೊಮ್ಮಕ್ಕಳ ಎದೆಯಲ್ಲಿ ಮರು ಹುಟ್ಟು ಪಡೆಯಲಿ, ಸ್ವಾಭಿಮಾನದ ‘ ಬಿತ್ತನೆ ಬೀಜ’ ಮೊಳೆಯಲಿ.


        -ಧನ್ಯವಾದಗಳು 

                               ಎಂ.ಸಿ.ನರಸಿಂಹಮೂರ್ತಿ

(ಸೂಚನೆ : ‘ನುಡಿನಮನ’ ಕಾರ್ಯಕ್ರಮದಲ್ಲಿ ನನ್ನ ಭಾವನೆಯನ್ನು ಹಂಚಿಕೊಳ್ಳಲು ಸಮಯದ ಅಭಾವದಿಂದ ಸಾಧ್ಯಗಲಿಲ್ಲ. ಕ್ಷಮಿಸಿ.)

Leave a Reply

Your email address will not be published. Required fields are marked *