ಎಂದೆಂದಿಗೂ ಕನ್ನಡಿಗರಾಗಿಯೇ ಉಳಿಯೋಣ-ಗೃಹ ಸಚಿವ ಡಾ.ಜಿ.ಪರಮೇಶ್ವರ

ತುಮಕೂರು : ಕನ್ನಡ ನಾಡಿನ ಭವ್ಯ ಪರಂಪರೆ, ಸಾಂಸ್ಕøತಿಕ ಶ್ರೀಮಂತಿಕೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ನಾವೆಂದಿಗೂ ಕನ್ನಡಿಗರಾಗಿಯೇ ಉಳಿಯೋಣ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಕನ್ನಡಾಭಿಮಾನದ ಮಾತುಗಳನ್ನಾಡಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನವೆಂಬರ್ 1ರಂದು ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ನಾಡು ತನ್ನದೇ ಆದ ಸಾಂಸ್ಕøತಿಕ, ಸಾಹಿತ್ಯಿಕ, ಪಾರಂಪರಿಕ ಹಿನ್ನೆಲೆಯನ್ನು ಪಡೆದ ರಾಜ್ಯವಾಗಿದೆ. ನಮ್ಮ ಕರ್ನಾಟಕವು ವೈಜ್ಞಾನಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ವೈವಿಧ್ಯತೆ ಪಡೆದ ನಾಡಾಗಿದೆ. ನಾಡು-ನುಡಿ ಹೆಸರಿನಲ್ಲಿ ವಿಶಾಲ ಕರ್ನಾಟಕದ ಐಕ್ಯತೆಗೆ ಧಕ್ಕೆಯಾಗದಂತೆ ಕಾಪಾಡುವ ಹೊಣೆಗಾರಿಕೆ ನಮ್ಮದಾಗಬೇಕು ಎಂದು ತಿಳಿಸಿದರು.

ಪತ್ರಿಕಾ ಕ್ಷೇತ್ರದ ಸಾಧನೆಗಾಗಿ ಮೈತ್ರಿನ್ಯೂಸ್ ಪತ್ರಿಕೆ ಸಂಪಾದಕರಾದ ವೆಂಕಟಾಚಲ.ಹೆಚ್.ವಿ. ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್.

1947ರಲ್ಲಿ ಭಾರತ ಸ್ವಾತಂತ್ರ್ಯಗಳಿಸಿದ ತರುವಾಯ 1956ರಲ್ಲಿ ಕರ್ನಾಟಕ ಏಕೀಕರಣಗೊಂಡು “ವಿಶಾಲ ಕರ್ನಾಟಕ” ಎಂಬ ಹೆಸರಿನಿಂದ ರೂಪ ತಾಳಿತು. 1956ರಲ್ಲಿ ಕರ್ನಾಟಕ ಏಕೀರಕರಣಗೊಂಡಿದ್ದರೂ ಹೆಸರು ಮಾತ್ರ ವಿಶಾಲ ಮೈಸೂರು ರಾಜ್ಯ ಎಂದೇ ಕರೆಯಲಾಗುತ್ತಿತ್ತು. ಆದರೆ ಅಖಂಡ ಕನ್ನಡಿಗರ ಪ್ರಚಂಡ ಶಕ್ತಿಯನ್ನು ಗಮನಿಸಿದ ಅಂದಿನ ಮುಖ್ಯಮಂತ್ರಿಯವರಾದ ಮಾನ್ಯ ಡಿ.ದೇವರಾಜ ಅರಸು ಅವರು 1973ರ ನವೆಂಬರ್ 1ರಂದು ರಾಜ್ಯಕ್ಕೆ ಕರ್ನಾಟಕವೆಂದು ಮರು ನಾಮಕರಣ ಮಾಡಿದರು. ಅಂದಿನಿಂದ ವಿಶಾಲ ಮೈಸೂರು ರಾಜ್ಯವು ಕರ್ನಾಟಕ ಎಂದು ಭಾರತ ಭೂಪಟದಲ್ಲಿ ಸೇರ್ಪಡೆಗೊಂಡಿತು. ಇದೀಗ ಕರ್ನಾಟಕವು ಮರುನಾಮಕರಣವಾಗಿ 51 ವರ್ಷಗಳನ್ನು ಪೂರೈಸಿ 52ನೇ ವಸಂತಕ್ಕೆ ಕಾಲಿರಿಸಿದೆ ಎಂದು ತಿಳಿಸಿದರು.

ಡೆಪ್ಯೂಟಿ ಚನ್ನಬಸಪ್ಪ, ವೆಂಕಟನಾರಾಯಣಪ್ಪ ಬೆಳ್ಳಾವಿ, ಆಲೂರು ವೆಂಕಟರಾಯರು, ವರಕವಿ ದ.ರಾ.ಬೇಂದ್ರೆ, ಉತ್ತಂಗಿ ಚನ್ನಪ್ಪ, ಬಿ.ಎಂ. ಶ್ರೀಕಂಠಯ್ಯ, ಹುಯಿಲಗೊಳ ನಾರಾಯಣರಾಯರು, ಬಿ. ಶಿವಮೂರ್ತಿಶಾಸ್ತ್ರಿ, ನಿಟ್ಟೂರು ಶ್ರೀನಿವಾಸರಾಯ, ಗೊರೂರು ರಾಮಸ್ವಾಮಿ ಅಯ್ಯಂಗಾರರು, ಸಿದ್ಧವನಹಳ್ಳಿ ಕೃಷ್ಣಶರ್ಮ, ತೀ.ನಂ. ಶ್ರೀಕಂಠಯ್ಯ, ಕಡಿದಾಳ್ ಮಂಜಪ್ಪ, ಹಾರನಹಳ್ಳಿ ರಾಮಸ್ವಾಮಿ, ಹೆಚ್.ಎಸ್.ದೊರೈಸ್ವಾಮಿ, ಶಾಂತವೇರಿ ಗೋಪಾಲಗೌಡ, ಜಿ. ನಾರಾಯಣ, ಪಾಟೀಲ ಪುಟ್ಟಪ್ಪ, ಕೊ. ಚನ್ನಬಸಪ್ಪ, ಅ.ನ. ಕೃಷ್ಣರಾಯರು, ರಾಷ್ಟ್ರಕವಿ ಕುವೆಂಪು, ವರನಟ ಡಾ: ರಾಜ್‍ಕುಮಾರ್, ಮುಂತಾದವರು ಕನ್ನಡ ನಾಡ ಪರಂಪರೆಯಲ್ಲಿ ಅವಿಸ್ಮರಣೀಯರು ಎಂದು ಕನ್ನಡ ನಾಡು-ನುಡಿಗಾಗಿ ಶ್ರಮಿಸಿದವರನ್ನು ಸ್ಮರಿಸಿದರು.

ಕನ್ನಡಿಗರ ಕಣ್ವರೆಂದೇ ಹೆಸರಾದ ಬಿ.ಎಂ.ಶ್ರೀ. ಹುಟ್ಟಿದ ಸ್ಥಳ ನಮ್ಮ ತುಮಕೂರು ಜಿಲ್ಲೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಶಿವಮೂರ್ತಿ ಶಾಸ್ತ್ರಿಗಳು, ಕನ್ನಡ ಸಾಹಿತ್ಯಕ್ಕೆ ಅಮೋಘ ಸೇವೆ ಸಲ್ಲಿಸಿರುವ ಭಾರತೀಯ ಕಾವ್ಯ ಮೀಮಾಂಸೆಯ ಕರ್ತೃ ತೀ.ನಂ. ಶ್ರೀಕಂಠಯ್ಯ, ನಾಟಕ ರತ್ನ ಡಾ: ಗುಬ್ಬಿ ವೀರಣ್ಣ, ಇತ್ತೀಚಿನ ಬರಹಗಾರರಾದ ಡಾ: ಸಾ.ಶಿ. ಮರುಳಯ್ಯ, ಡಾ: ದೊಡ್ಡರಂಗೇಗೌಡ, ಡಾ: ಬರಗೂರು ರಾಮಚಂದ್ರಪ್ಪ, ಪ್ರೊ: ಹೆಚ್.ಜಿ. ಸಣ್ಣಗುಡ್ಡಯ್ಯ, ವೀಚಿ ಎಂದೇ ಖ್ಯಾತರಾದ ವೀ. ಚಿಕ್ಕವೀರಯ್ಯ ಸೇರಿದಂತೆ ಜಿಲ್ಲೆಯ ಅನೇಕ ಕವಿಗಳು ಮತ್ತು ಸಾಹಿತಿಗಳು ಕನ್ನಡ ಭಾಷೆಯ ಅಭಿವೃದ್ಧಿಗೆ ನಿರಂತರವಾದ ಕೊಡುಗೆ ನೀಡಿದ್ದಾರೆ ಎಂದರಲ್ಲದೆ, ಸಾಲು ಮರಗಳನ್ನು ನೆಟ್ಟು ನೀರುಣಿಸಿ ಪರಿಸರ ಸಂರಕ್ಷಣೆಯೇ ನನ್ನ ಬದುಕಿನ ದಾರಿ ಎನ್ನುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಿ ಇಡೀ ಜಗತ್ತಿಗೆ ಪರಿಸರದ ಪ್ರಜ್ಞೆಯನ್ನು ಮೂಡಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಮ್ಮ ಜಿಲ್ಲೆಯವರು ಎಂಬುದು ನಮ್ಮೆಲ್ಲರ ಹೆಮ್ಮೆ ಎಂದು ತಿಳಿಸಿದರು.

ನವೆಂಬರ್ ತಿಂಗಳು ಬಂತೆಂದರೆ ಎಲ್ಲ ಕನ್ನಡಿಗರ ಎದೆಯಲ್ಲಿ ಅದೇನೋ ಉತ್ಸಾಹ, ಸಂಭ್ರಮ ಮೂಡುತ್ತದೆ. ಎಲ್ಲೆಡೆ ಕೆಂಪು-ಹಳದಿ ಬಣ್ಣಗಳು ರಾರಾಜಿಸುತ್ತವೆ. ಇಂದಿನ ಯುವ ಜನರು ನಮ್ಮ ನಾಡಿನ ಪರಂಪರೆಯನ್ನು ಸಾರಬೇಕು, ಸಂಭ್ರಮಿಸಬೇಕು. ಇತ್ತೀಚೆಗಷ್ಟೇ ತುಮಕೂರು ದಸರಾ ಉತ್ಸವವನ್ನು ಜಿಲ್ಲೆಯಾದ್ಯಂತ ನಾವೆಲ್ಲರೂ ಅತ್ಯಂತ ಸಂಭ್ರಮ, ಸಡಗರ, ಭಕ್ತಿಭಾವಗಳಿಂದ ಯಶಸ್ವಿಯಾಗಿ ನಡೆಸಿದ್ದೇವೆ. ಈ ಕಾರ್ಯಕ್ರಮವನ್ನು ನಾಡಿನ ಜನತೆ ತುಮಕೂರಿನ ಐತಿಹಾಸಿಕ ಕಾರ್ಯಕ್ರಮವೆಂದು ಹೆಮ್ಮೆಯಿಂದ ಹೇಳುತ್ತಿರುವುದು ಜಿಲ್ಲೆಯ ಸಾಂಸ್ಕøತಿಕ ಪರಂಪರೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ರಾಜ್ಯೋತ್ಸವದ ಪ್ರಯುಕ್ತ ನಗರದ ಟೌನ್‍ಹಾಲ್ ವೃತ್ತದಿಂದ ಬೆಳ್ಳಿ ರಥದಲ್ಲಿರಿಸಿದ ನಾಡದೇವಿಯ ಭವ್ಯ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. 

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಟೌನ್‍ಹಾಲ್ ವೃತ್ತದಿಂದ ಮಹಾತ್ಮಗಾಂಧಿ ಕ್ರೀಡಾಂಗಣದವರೆಗೆ ಸಂಚರಿಸಿತು. ಮೆರವಣಿಗೆಯಲ್ಲಿ ಕಂಸಾಳೆ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು.  ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕನ್ನಡ ನಾಡಿನ ಜ್ಞಾನ ಪೀಠ ಪ್ರಶಸ್ತಿ ಪುರಸ್ಕøತ ಕವಿ, ಸಾಹಿತಿಗಳ ಭಾವಚಿತ್ರ, ಹೆಸರಾಂತ ಕವಿಗಳ ಅರ್ಥಪೂರ್ಣ ಬರಹದ ಸಾಲುಗಳ ಪ್ರದರ್ಶನ ಫಲಕಗಳನ್ನು ಹಿಡಿದು ಸಾಗಿದ್ದು, ಅರ್ಥಪೂರ್ಣವಾಗಿತ್ತು 

ಕೃಷಿ, ತೋಟಗಾರಿಕೆ, ಆಹಾರ, ಆರೋಗ್ಯ, ರೇಷ್ಮೆ, ಪಶುಸಂಗೋಪನೆ, ಜಿಲ್ಲಾ ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರ ವಾಹನಗಳು ಸರ್ಕಾರಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದವು. 

ಈ ಸಂದರ್ಭದಲ್ಲಿ ಕಬಡ್ಡಿ ಕ್ರೀಡಾ ಸಾಧಕರಾದ ನಂಜೇಗೌಡ, ಮಹಮ್ಮದ್ ಇಸ್ಮಾಯಿಲ್ ಎಲ್. ಹಾಗೂ ಪಿ.ಎನ್.ರಾಮಯ್ಯ;  ಅಥ್ಲೆಟಿಕ್ಸ್‍ನಲ್ಲಿ ಸಾಧನೆಗೈದ ಟಿ.ಕೆ.ಆನಂದ್, ಟಿ.ಎ.ನರೇಶ್‍ಬಾಬು ಹಾಗೂ ಶಶಾಂಕ್ ವರ್ಮ; ಜಿಮ್ನಾಸ್ಟಿಕ್ಸ್ ಸಾಧಕ ಸುಧೀರ್ ದೇವದಾಸ್; ಕುಸ್ತಿಯಲ್ಲಿ ಉಮೇಶ್; ಖೋ-ಖೋ ಕ್ರೀಡೆಯಲ್ಲಿ ಟಿ.ಎ.ರಾಘವೇಂದ್ರ ಕುಮಾರ್ ಹಾಗೂ ಕು: ಟಿ.ಎನ್. ಹರ್ಷಿತ; ಯೋಗದಲ್ಲಿ ಡಾ: ಎಂ.ಎಸ್. ಜಗದೀಶ  ಸೇರಿದಂತೆ ವಿವಿಧ ಕ್ರೀಡೆಯಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದ ಜಿ.ವಿ. ಉಮೇಶ್, ಕು: ಜಿ.ವಿ.ಜಯತೇಷ್ಣ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. 

ಸಮಾರಂಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಜಿಲ್ಲೆಯ ಕಲಾವಿದರು, ಸಾಹಿತಿಗಳು, ಕನ್ನಡಾಭಿಮಾನಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿ/ಸಿಬ್ಬಂದಿ, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *