ತುಮಕೂರು:ಸಾಹಿತಿಗಳು,ಬರಹಗಾರರು ಒಂದು ಸರಕಾರ ಅಥವಾ ಓರ್ವ ಜನಪ್ರತಿನಿಧಿಯ ವಿರುದ್ದ ಜನ್ನಾಭಿಪ್ರಾಯ ಮೂಡಿಸಬಲ್ಲರು ಎಂಬುದಕ್ಕೆ ಕಳೆದ ವಿಧಾನಸಭಾ ಚುನಾವಣೆಯೇ ಸಾಕ್ಷಿಯಾಗಿದ್ದು,ಕನ್ನಡಿಗರು,ಕನ್ನಡ ಶಾಲೆಗಳ ಮಕ್ಕಳನ್ನು ನಿರ್ಲಕ್ಷಿಸಿದ್ದ,ಹಲವರನ್ನು ಸೋಲಿಸಿ ಮನೆಗೆ ಕಳುಹಿಸುವಲ್ಲಿ ಸಾಹಿತಿಗಳು,ಬರಹಗಾರರ ಪಾತ್ರ ದೊಡ್ಡದಿದೆ ಎಂದು ಸಂಸ್ಕøತಿ ಚಿಂತಕರು ಹಾಗೂ ರಂಗಸಮಾಜದ ಸದಸ್ಯರಾದ ಡಾ.ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ವತಿಯಿಂದ ಸರಕಾರದ ವಿವಿಧ ಆಕಾಡೆಮಿ ಮತ್ತು ಪ್ರಾಧಿಕಾರಿಗಳಿಗೆ ನೇಮಕಗೊಂಡಿರುವ ಜಿಲ್ಲೆಯ ಸಾಹಿತಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಕನ್ನಡಿಗರಾಗಿ,ಕನ್ನಡಕ್ಕೆ ಕೆಲಸ ಮಾಡಿದವರನ್ನು ಸರಕಾರ ಗುರುತಿಸಿ,ನಾಮ ನಿರ್ದೇಶನ ಮಾಡಿದೆ. ಇವರನ್ನು ಅಭಿನಂದಿಸುವ ಮೂಲಕ ಸಾಹಿತ್ಯ ಪರಿಷತ್ ಕನ್ನಡವನ್ನು ಬೆಳೆಸುವ ಕೆಲಸ ಮಾಡುತ್ತಿದೆ ಎಂದರು.
ಸರಕಾರದ ಅಕಾಡೆಮಿಗಳ ನೇಮಕದಲ್ಲಿ ತುಮಕೂರು ಜಿಲ್ಲೆಗೆ ಸಿಂಹಪಾಲು ಲಬಿಸಿದೆ.ಸರಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವಿವಿಧ ಜ್ಞಾನಶಾಖೆಗಳಲ್ಲಿ ಕೆಲಸ ಮಾಡಲು ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಮಾಡಿ ಹೆಸರು ಮಾಡಿದ ವ್ಯಕ್ತಿಗಳನ್ನು ಆಯ್ಕೆ ಮಾಡಿರುವುದು ಸಂತೋಷ ಪಡುವ ವಿಚಾರವಾಗಿದೆ.ಎಲ್ಲರೊಂದಿಗೆ ಒಡನಾಟವಿದೆ.ಇದರಲ್ಲಿ ನನ್ನ ಶಿಷ್ಯರೂ ಇರುವುದು ನನಗೆ ಮತ್ತಷ್ಟು ಹೆಮ್ಮೆಯನ್ನು ತಂದುಕೊಡುತ್ತದೆ.ನಿಮ್ಮಿಂದ ಮತ್ತಷ್ಟು ಕನ್ನಡ ಕಟ್ಟುವ ಕೆಲಸವನ್ನು ನಿರೀಕ್ಷಿಸುವ ಆಶಯವನ್ನು ಡಾ..ರಾಜಪ್ಪ ದಳವಾಯಿ ವ್ಯಕ್ತಪಡಿಸಿದರು.

ಅಭಿನಂದನಾ ನುಡಿಗಳನ್ನಾಡಿದ ಹಿರಿಯ ಸಾಹಿತಿ ಡಾ.ಅಗ್ರಹಾರ ಕೃಷ್ಣಮೂರ್ತಿ,ಕಲೆ,ಸಾಹಿತ್ಯ, ಸಂಸ್ಕøತಿಯ ಕೆಲಸವೂ ವ್ಯಕ್ತಿಗೆ ಗೌರವ ತಂದುಕೊಡಬಲ್ಲವು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ವೈಷಮ್ಯದ ವಿರುದ್ದ ಬರೆಯುತ್ತಿರುವ ಅನೇಕರು ಈ ಬಾರಿಯ ಅಕಾಡೆಮಿಗಳಿಗೆ ನೇಮಕಗೊಂಡಿರುವುದನ್ನು ಕಾಣಬಹು ದಾಗಿದೆ.ಸಾಹಿತ್ಯದ ಮೂಲಕ ಜನರ ನಡುವೆ ಬಾಂಧವ್ಯ ಬೆಸೆಯುವ ಕೆಲಸ ಮಾಡಿದವರನ್ನು ಸರಕಾರ ಗುರುತಿಸಿರುವುದು. ನಮ್ಮ ದಾರಿ ಸರಿಯಿದೆ ಎಂಬುದನ್ನು ಸಾಭೀತು ಪಡಿಸಿದಂತಾಗಿದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ್ ಮಾತನಾಡಿ, ತುಮಕೂರು ಜಿಲ್ಲೆಯ ಮೂಲದ 13 ಜನ ಪ್ರತಿಭಾವಂತರನ್ನು ಸರಕಾರ ಗುರುತಿಸಿ,ನಾಮನಿರ್ದೇಶನ ಮಾಡಿರುವುದು ಈ ಜಿಲ್ಲೆಗೆ ಸಂದ ಗೌರವ ಮತ್ತು ಹೆಮ್ಮೆ ಪಡುವ ವಿಚಾರ. ಜಿಲ್ಲಾ ಕಸಾಪ ಇಡೀ ರಾಜ್ಯದಲ್ಲಿಯೇ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ,ಕನ್ನಡ ಸಾಹಿತ್ಯ ಪರಿಷತ್ ಜನಸಾಮಾನ್ಯರ ಪರಿಷತ್ತಾಗಿ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ನಾಡು,ನುಡಿಗಾಗಿ ದುಡಿದ,ಸರಕಾರದ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರ ಗಳಿಗೆ ನೇಮಕವಾದ 13 ಜನ ಜಿಲ್ಲೆಯ ಸಾಹಿತಿಗಳು, ಕಲಾವಿದರುಗಳನ್ನು ಅಭಿನಂದಿಸಲಾಗುತ್ತಿದೆ.ನೇಮಕಗೊಂಡಿರುವ ಸಾಹಿತಿಗಳು, ಕಲಾವಿದರು ತಮ್ಮ ಅಕಾಡೆಮಿ ಅಥವಾ ಪ್ರಾದಿಕಾರದ ಒಂದೊಂದು ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಾಡಲು ಅವಕಾಶ ಮಾಡಿಕೊಟ್ಟರೆ, ಅದು ಜಿಲ್ಲೆಯ ಮಟ್ಟಿಗೆ ದೊಡ್ಡ ಉಪಯೋಗವಾಗಲಿದೆ.ಕನ್ನಡದ ತೇರು ಎಳೆಯುವ ಕಾಯಕದಲ್ಲಿ ನಾವು,ನೀವು ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಸಾಪ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್,ಕರ್ನಾಟ್ಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ್,ಕನ್ನಡ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ.ಕರಿಗೌಡ ಬೀಚನಹಳ್ಳಿ, ಕನ್ನಡ ಗಡಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಚಾಣಗೆರೆ ವೆಂಕಟರಾಮಯ್ಯ,ಕುವೆಂಪು ಭಾಷಾ ಭಾರತಿಯ ಸದಸ್ಯರಾದ ಡಾ.ಎಸ್. ಗಂಗಾಧರ ಯ್ಯ,ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಉಗಮಶ್ರೀನಿವಾಸ್,ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಡಾ.ರವಿಕುಮಾರ್ ನೀ.ಹ.,ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾದ ಶ್ರೀಮತಿ ಅನಿತಾ ನಟರಾಜ್ ಹುಳಿಯಾರ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಕೆಂಕೆರೆ ಮಲ್ಲಿಕಾರ್ಜುನ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಶ್ರೀಮತಿ ಸುಮಾ ಸತೀಶ್, ಕುವೆಂಪು ಭಾಷಾ ಭಾರತಿ ಸದಸ್ಯರಾದ ಡಾ.ಚಿತ್ತಯ್ಯಪೂಜಾರ್, ಕರ್ನಾಟಕ ಲಲಿತಕಲಾ ಆಕಾಡೆಮಿ ಸದಸ್ಯರಾದ ಮನುಚರ್ಕವತಿ, ಪುಸ್ತಕ ಆಯ್ಕೆ ಸಮಿತಿ ಸದಸ್ಯರಾದ ಹಂ.ಗು, ರಾಜೇಶ್, ಕುವೆಂಪು ಭಾಷಾ ಭಾರತಿ ಸದಸ್ಯರಾದ ನಾರಾಯಣ ಹೊಡಘಟ್ಟ ಅವರುಗಳನ್ನು ಜಿಲ್ಲಾ ಕಸಾಪ ವತಿಯಿಂದ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಡಿ.ಎನ್.ಯೋಗೀಶ್ವರಪ್ಪ,ಕಂಟಲಗೆರೆ ಸಣ್ಣಹೊನ್ನಯ್ಯ, ಕೋಶಾಧ್ಯಕ್ಷ ಎಂ.ಹೆಚ್.ನಾಗರಾಜು, ಸಂಘಟನಾ ಕಾರ್ಯದರ್ಶಿಗಳಾದ ಜಿ.ಹೆಚ್.ಮಹದೇವಪ್ಪ, ಎಸ್.ಯೋಗಾನಂದ ಹಾಗೂ ಸಂಚಾಲಕರಾದ ಕೆ.ಎಸ್.ತೇಜಶ್ವನಿ ಮತ್ತು ಡಾ.ಅಜಯ್ ಉಪಸ್ಥಿತರಿದ್ದರು.