ಸಾಹಿತಿ ಎನ್.ನಾಗಪ್ಪ ಇನ್ನಿಲ್ಲ

ತುಮಕೂರು : ಸಾಹಿತಿ ಹಾಗೂ ಕವಿಗಳಾದ ಎನ್.ನಾಗಪ್ಪನವರು(71ವರ್ಷ) ಇಂದು ನಿಧನ ಹೊಂದಿದರು.

ವಿದ್ಯಾರ್ಥಿ ದೆಸೆಯಿಂದಲೇ ವೈಚಾರಿಕತೆ ಬೆಳೆಸಿಕೊಂಡಿದ್ದ ಎನ್.ನಾಗಪ್ಪನವರು ಬರಗೂರು ರಾಮಚಂದ್ರಪ್ಪನವರ ಶಿಷ್ಯರಾಗಿದ್ದರು, ಈ ಹಿನ್ನೆಲೆಯಿಂದಲೇ ಬಂಡಾಯ ಸಾಹಿತ್ಯದಲ್ಲೇ ಗುರುತಿಸಿಕೊಂಡು, ಬಂಡಾಯ ಸಾಹಿತ್ಯ ಮತ್ತು ಚಳುವಳಿಯಲ್ಲಿ 80ರ ದಶಕದಿಂದಲೂ ಗುರುತಿಸಿಕೊಂಡಿದ್ದ ನಾಗಪ್ಪನವರು ತಾವು ವೈಚಾರಿಕತೆ ಬೇಳಸಿಕೊಂಡಿದ್ದಲ್ಲದೆ, ಸಾವಿರಾರು ವಿದ್ಯಾರ್ಥಿಗಳನ್ನು ವೈಚಾರಿಕ ನೆಲೆಗೆ ಬರಲು ಕಾರಣಕರ್ತರಾಗಿದ್ದರು.

ಕನ್ನಡ ಉಪನ್ಯಾಸಕರಾಗಿದ್ದ ನಾಗಪ್ಪನವರು ಚಿಕ್ಕನಾಯಕನಹಳ್ಳಿಯಲ್ಲಿ ಚಿಂತಕ ಕೆ.ದೊರೈರಾಜ್ ಒಟ್ಟಿಗೆ ಒಂದೇ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದವರು, ಈ ಇಬ್ಬರದ್ದು 50ವರ್ಷದ ಸ್ನೇಹ, ಇವರು ಸಾಕವ್ವ ಕವನ ಸಂಕಲನವನ್ನು ತಂದ ಮೇಲೆ ಇವರನ್ನು ಸಾಕವ್ವ ನಾಗಪ್ಪ ಅಂತಲೂ ಕರೆಯುತ್ತಿದ್ದರು, ಇವರು ಹಿರಿಯರು, ಕಿರಿಯರು ಎಂಬ ಭೇದಭಾವವಿಲ್ಲದೆ ಬೆರೆಯುತ್ತಿದ್ದರು, ಕಿರಿಯರು ಬರೆಯುತ್ತಿದ್ದನ್ನು ಕಂಡರೆ, ಅವರ ಬರವಣಿಗೆಯನ್ನು ಓದಿ ತಿದ್ದುವುದಲ್ಲದೆ, ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು.

ಇವರು ಅಂತರ್ಜಾತಿ ವಿವಾಹಿತವಾಗಿದ್ದರಿಂದ ತುಮಕೂರಿನಲ್ಲಿ ವೈಚಾರಿಕತೆ ಬೆಳೆಸುವುದಲ್ಲದೆ, ಹಲವಾರು ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದ್ದರು.

ಇವರು ಪ್ರಾಂಶುಪಾಲರಾಗಿ ನಿವೃತ್ತಿಯಾದ ವರ್ಷದಲ್ಲೇ ಗುಬ್ಬಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳದ ನಾಗಪ್ಪನವರು, ಪ್ರಮುಖ ಸಾಹಿತ್ಯ ಕಾರ್ಯಕ್ರಮಗಳಿಗೆ ತಪ್ಪದೆ ಬರುತ್ತಿದ್ದರು. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಏನಣ್ಣ, ಚೆನ್ನಾಗಿದ್ದೀಯ ಅಂತಲೇ ಮಾತನಾಡಿಸುತ್ತಿದ್ದ ನಾಗಪ್ಪನವರು, ತುಂಬಾ ಮೃದು ವ್ಯಕ್ತಿತ್ವದವರಾಗಿದ್ದರು.

ನಾಗಪ್ಪನವರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದು, ಇತ್ತೀಚೆಗೆ ತಮ್ಮ ಹಿರಿಯ ಮಗ ಕೆಲಸ ನಿರ್ವಹಿಸುತ್ತಿದ್ದ ದುಬೈನ ರಿಯಾದ್ ಗೆ ತೆರಳಿ ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ಅಲ್ಲಿದ್ದರು.

ಕಳೆದ ವಾರ ರಿಯಾದ್ ನಿಂದ ಪತ್ನಿ, ಮಗನೊಂದಿಗೆ ಬೆಂಗಳೂರಿನ ಕಿರಿಯ ಮಗನ ಮನೆಗೆ ಆಗಮಿಸಿದ್ದರು, ನಿನ್ನೆ ತುಮಕೂರಿಗೆ ಹೋಗಿ ಬರುವುದಾಗಿ ಒಬ್ಬರೆ ಬಂದ ನಾಗಪ್ಪನವರು ಗೋಕುಲ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಗಪ್ಪನವರ ಸಾವಿನ ಸುದ್ದಿ ತಿಳಿದ ಕೂಡಲೇ ಸ್ನೇಹಿತರು, ಒಡನಾಡಿಗಳು ಜಿಲ್ಲಾಸ್ಪತ್ರೆಯ ಶವಗಾರದ ಬಳಿ ತೆರಳಿ ಅಂತಿಮ ದರ್ಶನ ಪಡೆದರು.

ಮೇ 8ರ ಭಾನುವಾರ ಬೆಳಿಗ್ಗೆ 10ಗಂಟೆಯ ತನಕ ತುಮಕೂರು ನಗರದ ಗೋಕುಲ ಬಡಾವಣೆಯ ಮೃತರ ನಿವಾಸದ ಬಳಿ ಅಂತಿಮ ದರ್ಶನ ಏರ್ಪಡಿಸಲಾಗಿದ್ದು, ಆನಂತರ ತುಮಕೂರಿನ ಗಾರ್ಡನ್ ರಸ್ತೆಯ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *