ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ರೈತರಿಂದ ತೀವ್ರ ವಿರೋಧ

ತುಮಕೂರು : ತುಮಕೂರು ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ರೈತರು ಮತ್ತು ಸ್ಥಳೀಯರ ಮಾತು ಕೇಳದೇ ಸರ್ವೇ ಕಾರ್ಯ ಆರಂಭ ಮಾಡಿದ ಎನ್.ಹೆಚ್.ಎ.ಐ. ಅಧಿಕಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ತುಮಕೂರು ಹೊರ ವರ್ತುಲ 44 ಕಿ.ಮೀ. ಉದ್ದದ ಔಟರ್ ರಿಂಗ್ ರಸ್ತೆ ನಿರ್ಮಾಣ ಮಾಡಲು ಎನ್.ಹೆಚ್.ಎ.ಐ. ಮುಂದಾಗಿದ್ದು ಇದು 24 ಹಳ್ಳಿಗಳ ಮೇಲೆ ಹಾದು ಹೋಗುತ್ತದೆ, ಈಗಾಗಲೇ ಕೆಲವು ಗ್ರಾಮಗಳಲ್ಲಿ ಸರ್ವೇ ಕಾರ್ಯ ನೆರವೇರಿಸಿ ಅಧಿಕಾರಿಗಳು ಅಳತೆ ಕಲ್ಲುಗಳನ್ನು ಸಹ ಅಳವಡಿಸಿರುತ್ತಾರೆ. ಆದರೆ ಭೈರಸಂದ್ರ ಗ್ರಾಮದಲ್ಲಿ ಸರ್ವೇ ಕಾರ್ಯ ಮಾಡಿ ಕಲ್ಲು ಅಳವಡಿಸಲು ಆಗಮಿಸಿದ್ದ ಅಧಿಕಾರಿಗಳನ್ನು ತಡೆದಿರುವ ರೈತರು ಯಾವುದೇ ಕಾರಣಕ್ಕೂ ನಾವುಗಳು ನಮ್ಮ ಜಮೀನುಗಳನ್ನು ನಿಮ್ಮ ಸ್ವಾಧೀನಕ್ಕೆ ಬಿಟ್ಟುಕೊಡುವುದೂ ಇಲ್ಲ, ಸರ್ವೇ ಕಾರ್ಯ ಮಾಡಲು ನಾವು ಅನುವು ಮಾಡಿಕೊಡುವುದಿಲ್ಲ ಎಂದು ಘೇರಾವ್ ಹಾಕಿದ್ದಾರೆ, ಇವರುಗಳು ಪ್ರತಿಭಟನೆ ಮಾಡುವ ಸುಳಿವು ಅರಿತಿದ್ದ ಅಧಿಕಾರಿಗಳು ಪೊಲೀಸರ ರಕ್ಷಣೆಯೊಂದಿಗೆ ಸರ್ವೇ ಕಾರ್ಯ ನಡೆಸಲು ಬಂದಿದ್ದರು, ಆದರೆ ರೈತರಿಂದ ತೀವ್ರ ಆಕ್ಷೇಪ ಬಂದ ಪರಿಣಾಮ ಘಟನೆಯು ಉಗ್ರ ಸ್ವರೂಪಕ್ಕೆ ಹೋಗುತ್ತಿತ್ತು. ಆದರೆ ಕೆಲವು ರೈತರು ಸದರಿ ವಿಷಯವನ್ನು ತಹಶೀಲ್ದಾರ್‍ರವರ ಗಮನಕ್ಕೆ ತಂದ ಪರಿಣಾಮ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ರಾಜೇಶ್ವರಿ ಅವರು ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ್‍ರವರು ಎನ್.ಹೆಚ್.ಎ.ಐ. ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ಚರ್ಚೆ ನಡೆಸಿ, ರೈತರ ಅಹ್ವಾಲುಗಳನ್ನು ಆಲಿಸಿ, ತದನಂತರ ಸವೇ ಕಾರ್ಯ ಮಾಡಿ ಕಲ್ಲುಗಳನ್ನು ಅಳವಡಿಸದಂತೆ 15 ದಿನಗಳ ಕಾಲವಕಾಶವನ್ನು ಕೊಡಿಸಿಕೊಟ್ಟಿದ್ದಾರಲ್ಲದೇ ಸದರಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಾವು ಗೃಹ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು, ಉಪ-ವಿಭಾಗಾಧಿಕಾರಿಗಳು ಹಾಗೂ ಮಾಜಿ ಶಾಸಕರು ಸೇರಿದಂತೆ ವಿವಿಧ ಮುಖಂಡರುಗಳನ್ನು ಕರೆಯಿಸಿ ಒಂದು ಸಭೆ ಮಾಡಿಸಿ, ತದ ನಂತರ ಮುಂದುವರೆಯುವುದಾಗಿ ಭರವಸೆಯನ್ನು ಸಹ ನೀಡಿರುತ್ತಾರೆ. ತಹಶೀಲ್ದಾರ್‍ರವರ ಭರವಸೆಗೆ ಅಧಿಕಾರಿಗಳು ಮತ್ತು ರೈತರು ಸಮ್ಮತಿಯನ್ನು ಸೂಚಿಸಿದ್ದು ಸಮಸ್ಯೆಯು ಸದ್ಯಕ್ಕೆ ತಿಳಿಯಾಗಿರುತ್ತದೆ.

ಈ ಕುರಿತು ಸ್ಥಳೀಯ ರೈತರೊಬ್ಬರು ಮಾತನಾಡಿ ಈ ಭಾಗದಲ್ಲಿ ಬಹುತೇಕ ರೈತರು ಸಣ್ಣ ಹಿಡುವಳಿದಾರರಾಗಿದ್ದು ನಮ್ಮಗಳಿಗೆ ಬಹಳ ಅನ್ಯಾಯವಾಗುತ್ತಿದೆ, ನಮಗೆ ಇಲ್ಲಿ ಉಳುಮೆ ಮಾಡಲು ಇರುವ ಜಾಗ ಬಹಳ ಸಣ್ಣ ಪ್ರಮಾಣದಾಗಿದ್ದು, ಅವುಗಳನ್ನೇ ನಾವು ಬಿಟ್ಟುಕೊಟ್ಟರೇ ನಮ್ಮಗಳ ಮುಂದಿನ ಜೀವನ ತುಂಬಾ ಕಷ್ಟಕರವಾಗಿರುತ್ತದೆ, ಆದುದರಿಂದ ನಾವುಗಳು ಜಮೀನುಗಳನ್ನು ನೀಡಲು ಸಿದ್ಧರಿಲ್ಲ, ಪ್ರಸ್ತುತ ಇರುವ ದಾಬಸ್‍ಪೇಟೆ ಇಂದ ಗುಬ್ಬಿ ರಸ್ತೆಯು 80 ಅಡಿ ರಸ್ತೆಯಿದ್ದು ಅದನ್ನೇ ತಾವುಗಳು ಅಭಿವೃದ್ಧಿಪಡಿಸಿಕೊಳ್ಳಬಹುದು ಅದನ್ನು ಬಿಟ್ಟು ನಮ್ಮಗಳ ಜಮೀನುಗಳ ಮೇಲೆ ಏಕೆ ರಸ್ತೆಯನ್ನು ನಿರ್ಮಾಣ ಮಾಡುತ್ತೀರಿ ಎಂದು ತಮ್ಮ ಸಮಸ್ಯೆಯನ್ನು ಸಹ ಹೊರ ಹಾಕಿರುವ ಘಟನೆ ನಡೆದಿದೆ. ನಮಗೆ ನಮ್ಮ ಜಮೀನು ಮುಖ್ಯ ಹೆದ್ದಾರಿ ನಮಗೆ ಬೇಕಿಲ್ಲ ಅದೇ ನಮ್ಮ ಒತ್ತಾಯ ಎಂದು ಆಕ್ರೋಷ ಹೊರ ಹಾಕಿದ ಹಿನ್ನಲೆಯಲ್ಲಿ ತಹಶೀಲ್ದಾರ್‍ರವರು ರೈತರ ಸಭೆಯಲ್ಲಿ ತಾವುಗಳು ಅಹ್ವಾಲನ್ನು ಸಲ್ಲಿಸಿ, ನಂತರ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಸಮಸ್ಯೆಯನ್ನು ಬಗೆಹರಿಸೋಣ ಎಂಬ ವಿಶ್ವಾಸವನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಎ. ಗೋವಿಂದರಾಜು, ನಂದಿಹಳ್ಳಿ, ಭೈರಸಂದ್ರ, ಪೆರಮ್ಮನಹಳ್ಳಿ, ದೇವರಹೊಸಹಳ್ಳಿ ರೈತರುಗಳಾದ ಜಿ.ಪಾಲನೇತ್ರಯ್ಯ, ಉದಯ್ ಕುಮಾರ್, ರಮೇಶ್, ಸಿದ್ಧಲಿಂಗಪ್ಪ, ಲಿಂಗರಾಜು, ಪ್ರಮೋದ್, ರಾಜಣ್ಣ, ಗೋವಿಂದರಾಜು ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *