ಲೋಕಸಭಾ ಚುನಾವಣೆ : ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಅಧಿಕಾರಿಗಳು ಬಿಡುವಂತಿಲ್ಲ

ತುಮಕೂರು : ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ-ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟಲ್ಲಿ ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಮ್ಮ ಕಚೇರಿಯಲ್ಲಿಂದು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆಯನ್ನು ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಚುನಾವಣಾ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿ/ಸಿಬ್ಬಂದಿಗಳು ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ನೆಪ ಹೇಳಿ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನಿರ್ಮಿತಿ ಕೇಂದ್ರ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್, ಪಾಲಿಕೆ, ನಗರ ಸ್ಥಳೀಯ ಸಂಸ್ಥೆ ಸೇರಿದಂತೆ ವಿವಿಧ ಇಂಜಿನಿಯರಿಂಗ್ ಇಲಾಖೆಗಳು ಹಾಲಿ ಚಾಲ್ತಿಯಲ್ಲಿರುವ-ಟೆಂಡರ್ ಕರೆಯಲಿರುವ – ಟೆಂಡರ್ ಕರೆದಿರುವ ಕಾಮಗಾರಿಗಳ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕೂಡಲೇ ಒದಗಿಸಬೇಕೆಂದು ನಿರ್ದೇಶಿಸಿದರಲ್ಲದೆ ನೀತಿ ಸಂಹಿತೆ ಜಾರಿ ಅವಧಿ ಮುಕ್ತಾಯವಾಗುವವರೆಗೂ ಯಾವುದೇ ಟೆಂಡರ್‍ಗಳನ್ನು ಕರೆಯತಕ್ಕದ್ದಲ್ಲ ಹಾಗೂ ಯಾವುದೇ ಹೊಸ ಟೆಂಡರ್ ಆದೇಶಗಳನ್ನು ನೀಡತಕ್ಕದ್ದಲ್ಲ. ಈಗಾಗಲೇ ಕರೆದಿರುವ ಟೆಂಡರ್‍ಗಳನ್ನು ಸ್ಥಗಿತಗೊಳಿಸಬೇಕು ಹಾಗೂ ಟೆಂಡರ್‍ಗಳನ್ನು ತೆರೆಯತಕ್ಕದ್ದಲ್ಲ. ಕುಡಿಯುವ ನೀರಿನ ಕಾಮಗಾರಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ರಾಜಕೀಯ ಪಕ್ಷಗಳು, ರಾಜಕೀಯ/ಸಾರ್ವಜನಿಕ ಮುಖಂಡರು, ಮತ್ತಿತರರು ಸಂಬಂಧಿಸಿದ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆಯದೆ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅಳವಡಿಸಲಾದ ಬ್ಯಾನರ್ಸ್, ಪೋಸ್ಟರ್ಸ್, ಬಂಟಿಂಗ್ಸ್, ಫ್ಲೆಕ್ಸ್‍ಗಳನ್ನು ನಿಯಮಾನುಸಾರ ಕೂಡಲೇ ತೆಗೆದು ಹಾಕಲು ಕ್ರಮಕೈಗೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾದ ಬ್ಯಾನರ್ಸ್, ಪೋಸ್ಟರ್ಸ್, ಬಂಟಿಂಗ್ಸ್, ಫ್ಲೆಕ್ಸ್‍ಗಳನ್ನು ನಿಯಮಾನುಸಾರ ಕೂಡಲೇ ತೆಗೆದು ಹಾಕಲು ಕ್ರಮ ಕೈಗೊಂಡು ಪ್ರತಿ ದಿನ ನಿಗಧಿತ ನಮೂನೆಯಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಸರ್ಕಾರಿ/ಅರೆ ಸರ್ಕಾರಿ/ ನಿಗಮ- ಮಂಡಳಿಗಳ ಅಧ್ಯಕ್ಷರು-ಉಪಾಧ್ಯಕ್ಷರು ಸೇರಿದಂತೆ ರಾಜಕೀಯ ಪ್ರತಿನಿಧಿಗಳಿಗೆ ನೀಡಿರುವ ವಾಹನವನ್ನು ಹಾಗೂ ಲೋಕೋಪಯೋಗಿ ಇಲಾಖೆ ಸೇರಿ ಇತರೆ ಸರ್ಕಾರಿ ಪ್ರವಾಸಿ ಮಂದಿರ, ತಪಾಸಣಾ ಮಂದಿರಗಳನ್ನು ವಶಕ್ಕೆ ಪಡೆಯಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಸರ್ಕಾರಿ-ರಾಜಕೀಯ ಜಾಹೀರಾತುಗಳನ್ನು ತೆಗೆಯಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಎಲ್ಲಾ ಚೆಕ್‍ಪೋಸ್ಟ್‍ಗಳನ್ನು ಕೂಡಲೇ ಸ್ಥಾಪಿಸಿ ಕಾರ್ಯಗತಗೊಳಿಸಬೇಕು. ಎಲ್ಲಾ ಎಂಸಿಸಿ ತಂಡಗಳನ್ನು ತಕ್ಷಣದಿಂದಲೇ ಕಾರ್ಯಗತಗೊಳಿಸಬೇಕು. ಯಾವುದೇ ಅಧಿಕಾರಿ- ನೌಕರರು ಯಾವುದೇ ಮಂತ್ರಿಗಳು ನಡೆಸುವ ಸಭೆ- ರಾಜಕೀಯ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಲಾಗಿದೆ. ಮಂತ್ರಿಗಳು, ಇತರೆ ಗಣ್ಯರ ಶಿಷ್ಟಾಚಾರ ವ್ಯವಸ್ಥೆಗೆ ಅವಕಾಶವಿರುವುದಿಲ್ಲ. ಚುನಾವಣಾ ದೂರು-ಮಾಹಿತಿಗಾಗಿ ಕಂಟ್ರೋಲ್ ರೂಂ ಸ್ಥಾಪಿಸಿ 2್ಠ47 ಕಾರ್ಯಗತಗೊಳಿಸಬೇಕು. ಯಾವುದೇ ಅಧಿಕಾರಿ-ಸಿಬ್ಬಂದಿಗಳು ಶಿಸ್ತುಕ್ರಮಕ್ಕೆ ಗುರಿಯಾಗದಂತೆ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *