ತುಮಕೂರು : ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಕಳೆದ ಏಪ್ರಿಲ್ 26ರಂದು ಜರುಗಿದ ಚುನಾವಣೆಯ ಮತ ಎಣಿಕೆ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ರಾತ್ರಿ ನಡೆದ ಮತ ಎಣಿಕೆ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮತ ಎಣಿಕಾ ಕಾರ್ಯಕ್ಕೆ ನಿಯೋಜಿಸುವ ಅಧಿಕಾರಿ/ಸಿಬ್ಬಂದಿಗಳಿಗೆ 2 ಹಂತದ ತರಬೇತಿ ನೀಡಬೇಕು. ಎಣಿಕೆಗೆ ನಿಯೋಜನೆಗೊಂಡವರು ಎಣಿಕಾ ಕೇಂದ್ರದಲ್ಲಿ ಜೂನ್ 4ರ ಬೆಳಿಗ್ಗೆ 5 ಗಂಟೆಗೆ ಹಾಜರಿರಬೇಕು ಎಂದು ಸೂಚಿಸಿದರು.
ತುಮಕೂರು ಲೋಕಸಭಾ ಕ್ಷೇತ್ರಕ್ಕೊಳಪಡುವ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಮಧುಗಿರಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕಾ ಕಾರ್ಯ, ಇಟಿಪಿಬಿಎಂಎಸ್ (Electronically Transmitted Postal Ballot System) ಹಾಗೂ ಅಂಚೆ ಮತಪತ್ರ(85 ವರ್ಷ ಮೇಲ್ಪಟ್ಟ, ವಿಶೇಷ ಚೇತನ, ಅಗತ್ಯ ಸೇವೆಯಲ್ಲಿರುವ, ಚುನಾವಣಾ ಸಿಬ್ಬಂದಿ ಹಾಗೂ ಅಂಚೆ ಮೂಲಕ ಸ್ವೀಕರಿಸಿದ)ಗಳ ಎಣಿಕಾ ಕಾರ್ಯವನ್ನು ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ನಡೆಸಲಾಗುವುದು. ಅದೇ ರೀತಿ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ಕ್ಷೇತ್ರದ ಮತ ಎಣಿಕೆಯನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಸಲಾಗುವುದು. ಮತ ಎಣಿಕೆಗಾಗಿ ಎಣಿಕಾ ಕೊಠಡಿ, ಟೇಬಲ್, ಗಣಕಯಂತ್ರ, ಪ್ರಿಂಟರ್ ಸೇರಿದಂತೆ ಅಗತ್ಯ ಸಾಮಗ್ರಿಗಳ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಎಣಿಕಾ ಕೇಂದ್ರದಲ್ಲಿರುವ ಭದ್ರತಾ ಕೊಠಡಿಯನ್ನು ಜೂನ್ 4ರ ಬೆಳಿಗ್ಗೆ 7.30 ಗಂಟೆಗೆ ತೆರೆಯಲಾಗುವುದು. ನಂತರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯವನ್ನು ಪ್ರಾರಂಭಿಸಬೇಕು. ಮೊದಲಿಗೆ ಅಂಚೆ ಮತ ಪತ್ರ ನಂತರ ಇವಿಎಂ ಮತಪತ್ರಗಳ ಎಣಿಕೆಯನ್ನು ಪ್ರಾರಂಭಿಸಬೇಕು. ಭದ್ರತಾ ಕೊಠಡಿ ತೆರೆಯುವ ಸಂದರ್ಭದಲ್ಲಿ ಚುನಾವಣಾ ಅಭ್ಯರ್ಥಿಗಳು, ಚುನಾವಣಾ ವೀಕ್ಷಕರು, ಚುನಾವಣಾ ಏಜೆಂಟರುಗಳು ಹಾಜರಿರುವಂತೆ ಅವರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.
ಎಣಿಕಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಮತ ಎಣಿಕೆ ಗೌಪ್ಯತೆಯನ್ನು ಕಾಪಾಡಬೇಕೆಂದು ಎಚ್ಚರಿಕೆ ನೀಡಿದರಲ್ಲದೆ ಮತ ಎಣಿಕಾ ಕೇಂದ್ರದೊಳಗೆ ಮೊಬೈಲ್ ಫೋನ್, ಇಂಕ್‍ಪೆನ್, ಬ್ಲೇಡ್, ಚಾಕು, ಮತ್ತಿತರ ಆಯುಧಗಳು, ಸ್ಮಾರ್ಟ್ ವಾಚ್, ಸ್ಮಾರ್ಟ್ ಪೆನ್, ನೀರಿನ ಬಾಟಲಿ, ಕಬ್ಬಿಣದ ವಸ್ತುಗಳು, ಬೆಂಕಿ ಪೊಟ್ಟಣ, ಬೀಡಿ/ಸಿಗರೇಟ್, ತಂಬಾಕು, ತಿಂಡಿ ಪದಾರ್ಥಗಳನ್ನು ತರಲು ಅವಕಾಶವಿರುವುದಿಲ್ಲ. ಮತ ಎಣಿಕೆ ಮಾಡಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್‍ನಂತೆ 112 ಟೇಬಲ್, ಇಟಿಪಿಬಿಎಂಎಸ್ ಮತ್ತು ಅಂಚೆ ಮತ ಪತ್ರ ಎಣಿಕೆಗಾಗಿ 1+10 ಹಾಗೂ ರಿಟರ್ನಿಂಗ್ ಅಧಿಕಾರಿಗಳಿಗೆ 1 ಸೇರಿ ಒಟ್ಟು 124 ಎಣಿಕಾ ಟೇಬಲ್‍ಗಳ ವ್ಯವಸ್ಥೆ ಮಾಡಬೇಕೆಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಪಾಲಿಕೆ ಆಯುಕ್ತ ಅಶ್ವಿಜ, ಚುನಾವಣಾ ತಹಶೀಲ್ದಾರ್ ರೇಷ್ಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಜರಿದ್ದರು.