ತುಮಕೂರು : ಪ್ರಜಾ ಪ್ರಭುತ್ವದ ಬಹುದೊಡ್ಡ ಪಿಡುಗಾಗಿರುವ ಭ್ರಷ್ಟಚಾರವನ್ನು ಬುಡ ಸಮೇತ ಕಿತ್ತೊಗೆಯಲು ಲೋಕಾಯುಕ್ತ ಸಂಸ್ಥೆ ಸದಾ ಬದ್ಧವಾಗಿದೆ ಎಂದು ಉಪ ಲೋಕಾಯುಕ್ತ ಬಿ. ವೀರಪ್ಪ ಹೇಳಿದರು.
ನಗರದ ಪರಿವೀಕ್ಷಣಾ ಮಂದಿರದಲ್ಲಿ ಭಾನುವಾರ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ 3 ದಿನಗಳ ಕಾಲ ಲೋಕಾಯುಕ್ತ ಕುಂದು-ಕೊರತೆ ಸಭೆ, ಬಾಕಿ ದೂರು ಅರ್ಜಿಗಳ ವಿಲೇವಾರಿ, ಕಾನೂನು ಅರಿವು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ದೂರುಗಳು ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ತಿಳಿಸಿದರು.
ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಅಕ್ಟೋಬರ್ 18ರಂದು ನಡೆದ ಸಾರ್ವಜನಿಕರ ಅಹವಾಲು ಸಭೆಯಲ್ಲಿ ಸಲ್ಲಿಕೆಯಾಗಿದ್ದ 299 ಹೊಸ ದೂರುಗಳಿಗೆ ಸಂಬಂಧಿಸಿದಂತೆ ಸೂಕ್ತ ವಿಚಾರಣೆ ನಡೆಸಿ 80 ಪ್ರಕರಣಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಜಿಲ್ಲೆಗೆ ಸಂಬಂಧಪಟ್ಟ ಬಾಕಿ ಇದ್ದ 183 ಹಳೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಕ್ಟೋಬರ್ 19ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದೂರುದಾರರು ಮತ್ತು ಪ್ರತಿ ದೂರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಿ 71 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು ಎಂದು ತಿಳಿಸಿದರು.
ಗುಬ್ಬಿ ಪಟ್ಟಣದ ಮಳೆ ನೀರಿನಿಂದ ನಿರಾಶ್ರಿತರಾಗಿದ್ದ ಹಂದಿಜೋಗರ ಕಾಲೋನಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ ತಾಲೂಕು ಆಡಳಿತದಿಂದ ಗುರುತಿಸಿರುವ ಸಾತೇನಹಳ್ಳಿ ಪ್ರದೇಶಕ್ಕೆ ತೆರಳುವಂತೆ ನಿವಾಸಿಗಳ ಮನವೊಲಿಸಲಾಗಿದೆ. ನಂತರ ನಿರಾಶ್ರಿತರಿಗಾಗಿ ತಾಲ್ಲೂಕು ಆಡಳಿತದಿಂದ ನಿರ್ಮಿಸಿರುವ ತಾತ್ಕಾಲಿಕ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಲಾಗಿದೆ ಎಂದರು.
ಸರ್ಕಾರಿ ಇಲಾಖಾಧಿಕಾರಿ-ಸಿಬ್ಬಂದಿಗಳು ಸಾರ್ವಜನಿಕರಿಗೆ ಸಕಾಲದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು. ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು. ಭ್ರಷ್ಟಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾರ್ವಜನಿಕರು ಕೂಡ ಬದಲಾಗಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಕೆ.ವಿ. ಅಶೋಕ್, ತುಮಕೂರು ಕರ್ನಾಟಕ ಲೋಕಾಯುಕ್ತ ಪೆÇಲೀಸ್ ಅಧೀಕ್ಷಕ ಎ.ವಿ. ಲಕ್ಷ್ಮೀನಾರಾಯಣ, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಹಾಜರಿದ್ದರು.
ಭ್ರಷ್ಟಾಚಾರ ನರ್ಮೂಲನೆಗೆ ಪ್ರಜಾಪ್ರಭುತ್ವದ ನಾಲ್ಕು ಅಂಗಗಳು ಬಲಗೊಳ್ಳಬೇಕುಃ
ಇದಕ್ಕೂ ಮುನ್ನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ಕುರಿತು ಏರ್ಪಡಿಸಿದ್ದ ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಭ್ರಷ್ಟಚಾರ ನಿರ್ಮೂಲನೆಯಲ್ಲಿ ಪ್ರಜಾ ಪ್ರಭುತ್ವದ ನಾಲ್ಕು ಅಂಗಗಳು ಬಲಗೊಳ್ಳಬೇಕು. ಪ್ರಜಾಪ್ರಭುತ್ವದ ನಾಲ್ಕು ಅಂಗಗಳಾದ ಶಾಸಕಾಂಗ, ನ್ಯಾಯಾಂಗ, ಕಾಯಾರ್ಂಗ ಮತ್ತು ಪತ್ರಿಕಾ ರಂಗ ಬಲಗೊಂಡಾಗ ಮಾತ್ರ ಸಮಾಜದಲ್ಲಿ ಸಂಪೂರ್ಣವಾಗಿ ಭ್ರಷ್ಟಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭ್ರಷ್ಟಚಾರವ ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿದ್ದು, ಭ್ರಷ್ಟಚಾರವನ್ನು ತಡೆಗಟ್ಟಲು ಮತ್ತಷ್ಟು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಮತ್ತು ಜನರೂ ಸಹ ಬದಲಾಗಬೇಕು. ರಾಜ್ಯ ಸರ್ಕಾರದ ಯಾವುದೇ ಇಲಾಖಾಧಿಕಾರಿ-ಸಿಬ್ಬಂದಿಗಳು ಕರ್ತವ್ಯ ಲೋಪವೆಸಗಿದ ಬಗ್ಗೆ ನಿಖರ ಮಾಹಿತಿ, ನೈಜತೆಯಿಂದ ಕೂಡಿರುವ ದೂರುಗಳನ್ನು ಲೋಕಾಯುಕ್ತ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಸಾರ್ವಜನಿಕರ ಸೇವೆಗೆ ಲೋಕಾಯುಕ್ತ ಸದಾ ಸಿದ್ಧವಿರುತ್ತದೆ ಎಂದು ತಿಳಿಸಿದರು.
ಹೊರಗಡೆ ಔಷಧಿ ತರಲು ಚೀಟಿ ನೀಡುವಂತಿಲ್ಲ-ವೀರಪ್ಪ ಸೂಚನೆ
ನಂತರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಅವರು ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೊರಗಡೆ ಔಷಧಿಗಳನ್ನು ತರಲು ಚೀಟಿಗಳನ್ನು ನೀಡಬಾರದು. ಪ್ರಯೋಗಾಲಯದ ಪರೀಕ್ಷೆಗಳನ್ನು ಖಾಸಗಿ ಪ್ರಯೋಗಾಲಯದಲ್ಲಿ ಮಾಡಿಸಲು ಸೂಚಿಸಬಾರದು. ತಪ್ಪಿದಲ್ಲಿ ಸಂಬಂಧಪಟ್ಟ ವೈದ್ಯರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸೂಚನೆ ನೀಡಿದರು.