ತುಮಕೂರು- ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ ಕೆಐಎಡಿಬಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಹಾಗೂ ಅವರ ಮನೆ ಮೇಲೆ ಬೆಳ್ಳಂಬೆಳಿಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ಬಿ.ಹೆಚ್. ರಸ್ತೆಯ ಎಸ್‍ಐಟಿ ಕಾಲೇಜು ಪಕ್ಕದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ತುಮಕೂರು ವಲಯದ ಕಚೇರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜೇಶ್ ರವರ ಕಚೇರಿ, ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿರುವ ಅವರ ತಂದೆಯ ಮನೆ ಹಾಗೂ ಬೆಂಗಳೂರಿನಲ್ಲಿರುವ ಮನೆ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚು ಅಕ್ರಮವಾಗಿ ಸಂಪಾದನೆ ಮಾಡಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ತುಮಕೂರು ಕೆಐಎಡಿಬಿ ಕಚೇರಿ ಮೇಲೆ ಚಿತ್ರದುರ್ಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಕಚೇರಿಯಲ್ಲಿ ಕಡತಗಳು ಹಾಗೂ ವಿವಿಧ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ತುಮಕೂರು, ಮಳವಳ್ಳಿ ಹಾಗೂ ಬೆಂಗಳೂರು ಮೂರು ಕಡೆಗಳಲ್ಲೂ ಲೋಕಾಯುಕ್ತ ಅಧಿಕಾರಿಗಳ ಮೂರು ತಂಡ ದಾಳಿ ಮಾಡಿದ್ದು, ಮನೆಗಳಲ್ಲಿ ಇರುವ ಚಿನ್ನ, ಬೆಳ್ಳಿ, ನಗದು ಸೇರಿದಂತೆ ಇತರೆ ಆಸ್ತಿಪಾಸ್ತಿಯ ದಾಖಲಾತಿಗಳ ತಪಾಸಣೆ ನಡೆಸಿದರು.
ಕೆಐಎಡಿಬಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜೇಶ್ ಅವರು ಪ್ರತಿದಿನ ಬೆಂಗಳೂರಿನಿಂದ ತುಮಕೂರಿಗೆ ಓಡಾಡುತ್ತಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆಯೇ ಲೋಕಾಯುಕ್ತ ಅಧಿಕಾರಿಗಳ ಬೆಂಗಳೂರಿನ ಕೋರಮಂಗಲದ ನಿವಾಸದಲ್ಲಿ ರಾಜೇಶ್ ಅವರನ್ನು ಲಾಕ್ ಮಾಡಿದ್ದಾರೆ ಎಂದು ಹೇಳಲಾಗಿದೆ.