ತುಮಕೂರು- ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಬಂದಿರುವ ಹೊಣೆಯನ್ನು ಶಿಕ್ಷಕರು ಹಾಗೂ ಶಾಲೆಗಳ ಮೇಲೆ ಹೊರಿಸಿ ಶಿಕ್ಷಕರ ವಿರುದ್ಧ ಸರ್ಕಾರ ಹೊರಡಿಸಿರುವ ಅವೈಜ್ಞಾನಿಕ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಶಾಲಾ-ಕಾಲೇಜು ಶಿಕ್ಷಕರು ಹಾಗೂ ಉಪನ್ಯಾಸಕರ ಜತೆ ಸೇರಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಶಾಲಾ-ಕಾಲೇಜು ಶಿಕ್ಷಕರು ಹಾಗೂ ಉಪನ್ಯಾಸಕರ ಸಮಸ್ಯೆ ಆಲಿಸಿದ ನಂತರ ಮಾತನಾಡಿದ ಅವರು, ಫಲಿತಾಂಶ ಕಡಿಮೆ ಬಂದ ತಕ್ಷಣ ಶಿಕ್ಷಕರ ಮೇಲೆ ಬರೆ ಎಳೆಯುವುದು ಈ ಸರ್ಕಾರದ ಕೆಲಸವಾಗಿದೆ. ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳ ಶಿಕ್ಷಕರಿಗೆ ಇಂಕ್ರಿಮೆಂಟ್ ಕಡಿತ ಮಾಡುವ ಆದೇಶ ಈಗಾಗಲೇ ಸರ್ಕಾರದಿಂದ ಹೊರ ಬಿದ್ದಿದೆ. ಹಾಗೆಯೇ ಶೇ. 50ಕ್ಕಿಂತ ಕಡಿಮೆ ಫಲಿತಾಂಶ ಬಂದರೆ ಅಂತಹ ಶಾಲೆಗಳಿಗೆ ಅನುದಾನವನ್ನು ಕೊಡುವುದಿಲ್ಲ ಎಂದು ಹೇಳಿದೆ. ಇದನ್ನೆಲ್ಲಾ ಗಮನಿಸಿದರೆ ಸರ್ಕಾರಕ್ಕೆ ಗುಣಾತ್ಮಕ ಶಿಕ್ಷಣದ ಕಾಳಜಿ ಇದೆಯಾ, ಇಲ್ಲವಾ ಎಂಬ ಅನುಮಾನಗಳು ಮೂಡುತ್ತವೆ. ಕೇವಲ ಶಿಕ್ಷಕರನ್ನು ಬಲಿಪಶು ಮಾಡುವ ನಿರ್ಧಾರ ಸರಿಯಿಲ್ಲ ಎಂದು ಆಕ್ಷೇಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾಗಿದ್ದು, ಶಿಕ್ಷಕರ ಜ್ವಲಂತ ಸಮಸ್ಯೆ ನೂರಾರು ಇದ್ದರೂ ಸಹ ಒಂದೇ ಒಂದು ಸಮಸ್ಯೆ ಬಗ್ಗೆಯೂ ಚರ್ಚೆ ಮಾಡಿಲ್ಲ. ಕೇವಲ ಅವೈಜ್ಞಾನಿಕ ಆದೇಶಗಳನ್ನು ಜಾರಿ ಮಾಡಿ ಶಿಕ್ಷಕರನ್ನು ಬಲಿಪಶು ಮಾಡುವುದೇ ಈ ಸರ್ಕಾರದ ಸಾಧನೆಯಾಗಿದೆ. ಈ ಕೂಡಲೇ ಸರ್ಕಾರ ತನ್ನ ಅವೈಜ್ಞಾನಿಕ ಆದೇಶಗಳನ್ನು ಹಿಂಪಡೆದು ಗುಣಾತ್ಮಕ ಶಿಕ್ಷಣ ನೀಡಲು ಏನು ಕ್ರಮ ಕೈಗೊಳ್ಳಬೇಕೋ ಆ ಕೆಲಸವನ್ನು ಮಾಡಲಿ ಎಂದು ಅವರು ಆಗ್ರಹಿಸಿದರು.
ಶಿಕ್ಷಣದ ಮಹತ್ವವನ್ನು ಅರಿಯದ, ಶಿಕ್ಷಣದ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದ ಒಬ್ಬ ಶಾಸಕರನ್ನು ಶಿಕ್ಷಣ ಮಂತ್ರಿಗಳನ್ನಾಗಿ ಮಾಡಿರುವುದು ದುರಂತ. ಕನ್ನಡವನ್ನೇ ಓದಲು ಬಾರದ ಮಂತ್ರಿಗಳಿಂದ ಕನ್ನಡ ಶಾಲೆಗಳ ಅಳಿವು-ಉಳಿವಿನ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕಳೆದ ವರ್ಷ ಸಿಸಿ ಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು, 8 ಮತ್ತು 9ನೇ ತರಗತಿಗೂ ರಾಜ್ಯಮಟ್ಟದ ಪರೀಕ್ಷೆ ಮಾಡಬೇಕು. ಎಸ್ಸೆಸ್ಸೆಲ್ಸಿಯಲ್ಲಿ ಒಂದಲ್ಲ, ಎರಡಲ್ಲ, ಮೂರು ಪರೀಕ್ಷೆ ಮಾಡಬೇಕು ಎಂಬ ಸರ್ಕಾರದ ನಿರ್ಧಾರಗಳು ಪೆÇೀಷಕರಲ್ಲಿ ಗೊಂದಲ, ಶಿಕ್ಷಕರಲ್ಲಿ ಗೊಂದಲ ಮೂಡಿಸಿವೆ. ಈ ಗೊಂದಲ ನಿವಾರಣೆ ಮಾಡುವ ಗೋಜಲಿಗೆ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಹೋಗದೇ ಇರುವುದು ದುರಂತ ಎಂದರು.
ಇದೆಲ್ಲದರ ಪರಿಣಾಮ ಎಸ್ಸೆಸ್ಸೆಲ್ಸಿ ಫಲಿತಾಂಶ ಭಾರೀ ಕಡಿಮೆಯಾಯಿತು. ಫಲಿತಾಂಶ ಕಡಿಮೆ ಬಂದ ತಕ್ಷಣ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡುವುದು ಈ ಸರ್ಕಾರಕ್ಕೆ ರೂಢಿಗತವಾಗಿದೆ. ಮಕ್ಕಳ ಫಲಿತಾಂಶ ಕೇವಲ ಶಿಕ್ಷಕರ ಮೇಲೆ ಮಾತ್ರ ನಿಂತಿದೆಯಾ, ಆಡಳಿತ ಪರಿಣಾಮ ಶಿಕ್ಷಕರ ಮೇಲೆ ಮತ್ತು ವಿದ್ಯಾರ್ಥಿಗಳ ಮೇಲೆ ಇಲ್ಲವಾ ಎನ್ನುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದರು.
ಶಾಲೆಯಲ್ಲಿ ಪಾಠ-ಪ್ರವಚನ ಮಾಡುವ ಶಿಕ್ಷಕರ ಕೈಯಲ್ಲಿ ಪಾಠ ಮಾಡುವ ಕೆಲಸ ಬಿಟ್ಟು ಉಳಿದೆಲ್ಲಾ ಕೆಲಸವನ್ನು ಸರ್ಕಾರ ಮಾಡಿಸುತ್ತಿದೆ. ಕುರಿ ಗಣತಿ, ನಾಯಿ ಗಣತಿಯೊಂದನ್ನು ಬಿಟ್ಟು ಎಲ್ಲ ಗಣತಿಯನ್ನು ಶಿಕ್ಷಕರೇ ಮಾಡಬೇಕು. ಮಾರುಕಟ್ಟೆಯಿಂದ ಮೊಟ್ಟೆ ತಲೆಮೇಲೆ ಹೊತ್ತು ತರಬೇಕು, ಸೊಪ್ಪು ತರಬೇಕು, ಅಡುಗೆ ಮಾಡಿಸಿ ಬಡಿಸಬೇಕು. ಮನೆಗೆ ಹೋಗಿ ಮಕ್ಕಳನ್ನು ಕರೆ ತರಬೇಕು. ಈ ಎಲ್ಲದರ ಮಧ್ಯೆ ಅವರಿಗೆ ಪಾಠ ಮಾಡಲು ಪುರಸ್ಸೊತ್ತೇ ಕೊಡದ ಕಾಲಘಟ್ಟದಲ್ಲಿ ಫಲಿತಾಂಶ ಕಡಿಮೆ ಇದೆ, ಕ್ರಮ ಕೈಗೊಳ್ಳುತ್ತೇವೆ ಎನ್ನುವುದು ಅತ್ಯಂತ ಕ್ರೂರ ಪದ್ದತಿ ಎಂದು ಆಕ್ರೋಶ ಹೊರ ಹಾಕಿದರು.
1990ರ ಕಾಲಘಟ್ಟದಲ್ಲಿ ಶೇ. 40 ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಿಕ್ಷಕರಿಗೆ ಇಂಕ್ರಿಮೆಂಟ್ ಕಡಿತ ಮಾಡುವ ಆದೇಶವನ್ನು ಅಂದಿನ ಸರ್ಕಾರ ಮಾಡಿತ್ತು. 2005-06 ರಲ್ಲಿ ಆ ಆದೇಶವನ್ನು ವಾಪಸ್ ಪಡೆಯಲಾಯಿತು. ಗುಣಮಟ್ಟದ ಪಾಠ ಮಾಡಲು ಶಿಕ್ಷಕರಿಗೆ ಬೂಸ್ಟ್ ನೀಡಿ ಹೆಚ್ಚಿನ ಪೆÇ್ರೀತ್ಸಾಹ ನೀಡುವ ಕೆಲಸವನ್ನು ಅಂದಿನ ಸರ್ಕಾರ ಮಾಡಿತ್ತು ಎಂದರು.
ಸಿಸಿಟಿವಿಯ ಕೈಚಳಕ, ಸರ್ಕಾರಿ ಅಧಿಕಾರಿಗಳ ಧೋರಣೆಗಳು, ಸರಿಯಾಗಿ ಶಿಕ್ಷಕರ ನಿಯೋಜಿಸದ ಕ್ರಮಗಳು ಎಲ್ಲವೂ ಒಟ್ಟುಗೂಡಿ ಫಲಿತಾಂಶ ಕಡಿಮೆಯಾಗಲು ಕಾರಣವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರವಿಕುಮಾರ್, ನಿವೃತ್ತ ಉಪನ್ಯಾಸಕರಾದ ರೇವಣಸಿದ್ದಯ್ಯ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಉಪನ್ಯಾಸಕರು ಉಪಸ್ಥಿತರಿದ್ದರು.