ಯಾಕೋ ನನ್ನ ಹೆತ್ತಮ್ಮ ಮತ್ತು ನನ್ನ ಸಾಕಿ ಸಲಹಿದ ಅಮ್ಮಂದಿರು ತುಂಬಾ ಕಾಡಲಾರಂಭಿಸಿದರು, ಅವರೆಲ್ಲಾ ಇರದಿದ್ದರೆ ನಾನು ಈ ಲೇಖನ ಬರೆಯುವ ಅವಶ್ಯಕತೆ ಇರಲಿಲ್ಲವೋನೋ.
ನಾನು ಹುಟ್ಟುತ್ತಲೇ ದುರದೃಷ್ಟನಾಗಿ ಹುಟ್ಟಿದೆನಂತೆ, ಅದೂ ನಮ್ಮಮ್ಮನಿಗೆ 7 ತಿಂಗಳು ಆಗಿದ್ದಾಗಲೇ ಹುಟ್ಟಿದ್ದರಿಂದ ನಾನು ಬದುಕುವುದಿಲ್ಲ ಎಂದುಕೊಂಡಿದ್ದರಂತೆ, ನನ್ನ ತಂದೆ ಕುಡಿದು ಬಂದು ಇಲಿ ಮರಿಯಷ್ಟು ಇದ್ದಾನೆ, ಮನೆ ಹಿಂದಿನ ಕಟ್ಟೆಗೆ ಎಸೆದು ಬಿಡು ಅನ್ನುತ್ತಿದ್ದರಂತೆ, ನನ್ನ ಅಣ್ಣ ಲಕ್ಷ್ಮಣ ನನ್ನ ಬಳಿ ಬಂದು ಮುತ್ತು ಕೊಟ್ಟು ಅಮ್ಮ ಪಾಪ ಮುದ್ದಾಗಿದೆ ಎಸೆಯ ಬೇಡಮ್ಮ ಅಂತ ಬೆಡ್ ಶೀಟ್ನಲ್ಲಿ ಮುಚ್ಚಿಟ್ಟು ದೂರಿ ದೂರಿ ಆಡುತ್ತಿದ್ದನಂತೆ.
ನನ್ನಮ್ಮ ದೇವರಿಗೆ ಹರಕೆ ಕಟ್ಟಿ ಉಳಿಸಿಕೊಂಡರಂತೆ, ನಮ್ಮಪ್ಪ ಪರಮ ದೈವ ಭಕ್ತನಾಗಿದ್ದರಿಂದ ಭ್ರಾಹ್ಮಣರನ್ನು ಹೆಸರಿಡಲು 9ನೇ ದಿನಕ್ಕೆ ಕರೆದಾಗ ಆ ಮಗು ನಿನಗೆ ಕಂಟಕದಿಂದ ಹುಟ್ಟಿದ್ದು, ನಿನ್ನ ಬಲಿ ಪಡೆಯುತ್ತದೆ, ಬ್ರಾಹ್ಮಣರಿಗೆ 9ತರಹದ ಧಾನ್ಯ ಬೆಳ್ಳಿಯ ಗೋವನ್ನು ದಾನ ಮಾಡಿದರೆ ಉಳಿಯುತ್ತೀಯ ಎಂದು ನಮ್ಮಪ್ಪನಿಗೆ ಬ್ರಾಹ್ಮಣ ಶಾಸ್ತ್ರಿ ಹೇಳಿದರಂತೆ.
ಅದರಂತೆ 1972ರಲ್ಲೇ ನಮ್ಮಪ್ಪ ಬ್ರಾಹ್ಮಣರಿಗೆ 9 ತರಹದ ಧಾನ್ಯ, ಬೆಳ್ಳಿ ಗೋವು ನೀಡಿ ವೆಂಕಟಾಚಲ ಎಂದು ಆ ಬ್ರಾಹಣರು ನನಗೆ ನಾಮಕರಣ ಮಾಡಿ, ನನ್ನ ಬಾಯಿಗೆ ಬೆಲ್ಲ ಹಾಕಿದಾಗ ಚಪ್ಪರಿಸಿ ತಿಂದಿದ್ದನ್ನು ಕಂಡ ಬ್ರಾಹ್ಮಣ ಶಾಸ್ತ್ರಿಗಳು ಮಗು ಚೂಟಿಯಿದೆ, ಇನ್ನ ಯಾರೂ ಸಾಯುವುದಿಲ್ಲ ಎಂದು ನಮ್ಮಪ್ಪ ಸಾಯುವ ಕಂಟಕದಿಂದ ಪಾರು ಮಾಡಿದರಂತೆ, 9ತರಹದ ಧಾನ್ಯ ತುಂಬಿದ ಮೊರದಲ್ಲಿದ್ದ ಬೆಳ್ಳಿ ಗೋವು ಮತ್ತು ಹೊಸ ಬಟ್ಟೆ, ಕಾಯಿ, ಬಾಳೆ ಹಣ್ಣು ಎಲ್ಲವನ್ನೂ ತಲೆ ಮೇಲೆ ಇಟ್ಟುಕೊಂಡು ಬ್ರಾಹ್ಮಣರ ಮನೆಗೆ ನಮ್ಮ ದೊಡ್ಡ ಅಣ್ಣ ಕೊಟ್ಟು ಬಂದರಂತೆ.

ಸ್ಕೂಬಿಯೊಂದಿಗೆ ಆಟವಾಡುತ್ತಿರುವ ಅಮ್ಮ,
ನಮ್ಮಪ್ಪನಿಗೆ ಕಂಟಕವಾಗಿದ್ದ ನಾನು ಆಗಲೇ ನನ್ನ ತಾಯಿ ಸಾಯಿಸದೇ ಸಲಹಿ, ನನಗೆ ಒಳ್ಳೆಯದಾಗಲಿ ಎಂದು ಆಗಾಗ ದೇವಸ್ಥಾನದಲ್ಲಿ ಹಣ್ಣು ಕಾಯಿ ಮಾಡಿಸೋರಂತೆ, ಹೇಗೋ ಶಾಲೆಗೆ ಹೋಗುವಂತಾದ ಮೇಲೆ ನಮ್ಮ ಮನೆಯಲ್ಲಿ ತುಂಬಾ ಬಡತನವಿದ್ದುದರಿಂದ 4ನೇ ತರಗತಿಯವರೆಗೂ ಬಹಳ ದಿನ ಶಾಲೆಗೆ ಉಪವಾಸವೇ ಹೋಗುತ್ತಿದ್ದನ್ನು ನೋಡಿದ್ದ ನನ್ನ ಪಕ್ಕದಲ್ಲಿ ಕೂರುತ್ತಿದ್ದ ಹೊಸಕೆರೆ ಶಾಂತಣ್ಣ-ಭಾಗಮ್ಮನವರ ಮಗ ಓಂಕಾರಮೂರ್ತಿ ಲೆಕ್ಕ ಮಾಡಿ ಕೊಡು ನಿನಗೆ ನಮ್ಮ ಮನೆಯಲ್ಲಿ ಊಟಕ್ಕೆ ಕೊಡುತ್ತೇನೆ ಎಂದು ಹೇಳಿದ್ದ.
ಓಂಕಾರಮೂರ್ತಿ ಅವರ ಅಮ್ಮನಿಗೆ ವೆಂಕಟಾಚಲ ಕೆಲವು ಸಲ ಊಟವಿಲ್ಲದೆ ಶಾಲೆಗೆ ಬರುತ್ತಾನೆ ಅಂದಾಗ ಭಾಗಮ್ಮ ಅವನೂ ನನ್ನ ಮಗನೇ ಅವನೂ ನಿನ್ನ ಗಳೆಯನಾಗಿರುವ ತನಕ ನಮ್ಮ ಮನೆಯಲ್ಲಿ ನಾನು ಬದುಕಿರುವ ತನಕ ಊಟ ಹಾಕುತ್ತೇನೆ ಎಂದು ಮಗನ ತಲೆಯ ಮೇಲೆ ಕೈ ಇಟ್ಟು ಆಣೆ ಮಾಡಿದರು.
ಈಗಲೂ ನಾನು ಊರಿಗೆ ಹೋದಾಗ ನನಗೆ ಅನ್ನ ಹಾಕಿ ಸಾಕಿದ ಭಾಗಮ್ಮನ ಕಾಲಿಗೆ ನಮಸ್ಕರಿಸಿ ಮನೆಯಲ್ಲಿ ಊಟ ಮಾಡಿಕೊಂಡು ಬರುತ್ತೇನೆ, ಆ ತಾಯಿ ಇಲ್ಲಿವರೆವಿಗೂ ನನ್ನ ಯಾವ ಜಾತಿ, ಯಾವ ಮನೆಯ ಮಗ ಎಂದು ಕೇಳಿಲ್ಲ, ನಾನು ಹೋದ ಕೂಡಲೇ ಓಂಕಾರ ಸಿಕ್ಕದ್ದನೇ, ಅವನ್ನ ಕೈ ಬಿಡಬೇಡ ಎಂದು ಕಣ್ಣೀರಾಗುತ್ತಾರೆ.
ಕೈ ಹಿಡಿದು, ಕೆನ್ನೆ ಸವರಿ ಪ್ರೀತಿ ತೋರಿಸಿ, ನನ್ನನ್ನೂ ಮೌನಕ್ಕೆ ಜಾರಿಸುತ್ತಾರೆ, ಅಮ್ಮ ಹೋಗಿ ಬರಲಾ ಅಂದಾಗ ಯಲ್ಲಮ್ಮ ಹೇಗಿದ್ದಾರೆ ಅವಳು ನಿಮ್ಮ ದೇವರು ಅವಳಿಗೆ ಕಣ್ಣೀರು ತರಿಸಬೇಡ ಅಂದು ಬೆನ್ನ ಮೇಲೆ ಹೊಡೆದು ಸದಾಣ್ಣ ವೆಂಕಟಾಚಲ ಹೋಗ್ತಾನಂತೆ ಓಂಕಾರನಿಗೆ ಪೋನ್ ಮಾಡು ಎನ್ನುತ್ತಾ ಕಣ್ಣೀರು ಒರೆಸಿಕೊಳ್ಳುತ್ತಾರೆ.
ಆ ತಾಯಿ ಭಾಗಮ್ಮನ ಮಡಿಲ ಪ್ರೀತಿಗೆ ನಾನು ಏನು ಮಾಡಿದ್ದೇನೆ ನನಗೆ ತಿಳಿಯದು, ಹೋದಾಗ ನಾನು ಒಂದಿಷ್ಟು ಹಣ್ಣು ತೆಗೆದುಕೊಂಡು ಹೋಗಿರಬಹುದಷ್ಟೇ, ಅಲ್ಲಿಂದ ಬಂದ ಮೇಲೆ ನನ್ನಮ್ಮನ ಪಕ್ಕ ಕೂತು ಸುಮ್ಮನೇ ಮೌನಿಯಾಗಿ ಅಮ್ಮನನ್ನು ತುಂಬಿಕೊಳ್ಳುತ್ತೇನೆ, ನನ್ನಮ್ಮ ಯಾಕಪ್ಪ ದುಡ್ಡಿಲ್ಲವೇನೋ ಜೀವನ್ನಕ್ಕೇನಾದರೂ ತೊಂದರೆಯಾಯಿತೆ ಅಂತ ತಮ್ಮ ಎಲೆ ಅಡಿಕೆ ಚೀಲದಲ್ಲಿನ ಪುಡಿಗಾಸು ನೀಡಲು ಬರುತ್ತಾರೆ ಬೇಡಮ್ಮ ಅಂದರೂ ಮತ್ತೊಮ್ಮೆ ತಬ್ಬಿ ಮುದ್ದಾಡಿ ಮಕ್ಕಳನ್ನು ಹೊಡೆಯಬೇಡ, ಬೈಯ ಬೇಡ, ನೀನು ದೇವರಿಂದ ಬದುಕಿದ್ದೀಯ, ನಿಮ್ಮಪ್ಪ ನೀನು ಹುಟ್ಟಿದಾಗಲೇ ಸಾಯಬೇಕಿತ್ತು, ನಿನಗೆ ತಿರುಪತಿ ವೆಂಕಟರಮಣಸ್ವಾಮಿ ಹೆಸರು ಇಟ್ಟಿದ್ದಕ್ಕೆ ಬದುಕಿತು ಎಂದು ಮುಖ ನೋಡಿ ದಡವುತ್ತಾರೆ.
ಆ ಕಡೆಯಿಂದ ಒಂದು ಪೋನ್ ಬರುತ್ತದೆ ಕಂದಾ ಬರಲೇ ಇಲ್ಲವಲ್ಲೋ ನನ್ನ ಪೆನ್ಷನ್ ಬರುತ್ತಿಲ್ಲ, ನನ್ನ ಮಕ್ಕಳು ಯಾರು ನನ್ನ ಪೋಸ್ಟಾಫೀಸ್ಗೆ ಕರಕೊಂಡು ಹೋಗಲ್ಲ, ಯಾವಾಗ ಬಂತೀಯ ಅಂತ ಕೇಳಿದಾಗ, ಅಮ್ಮ ಬರುತ್ತೀನಮ್ಮ ಅಂದರೆ ನನಗೆ ಗೊತ್ತಿಲ್ಲ, ನೀನು ಬರೋ ತನಕ ನಾನು ತಿಂಡಿ, ಊಟ ಮಾಡಲ್ಲ, ಬಾ ನೋಡಂಗೆ ಆಗೈತೆ ಬರದಿದ್ದರೆ ಇನ್ನಾ ನಾನು ಮಾತನಾಡಿಸೊಲ್ಲ ಎಂಬ ಬೆದರಿಕೆ.

ಬೋರಮ್ಮನವರ ಜೊತೆ
ಇವರು ತುಮಕೂರು ಬಿದರಮಳೆ ತೋಟದ ಬೋರಮ್ಮ ಅಂತ ಯಾವ ಜನ್ಮದ ಋಣಾನೋ ಏನೋ ಇವರು ಅಕಷ್ಮಿಕವಾಗಿ ನನಗೆ ಪರಿಚಯವಾದವರು, ನನ್ನ ಸಹೋದರಿ ಲತಾರವರ ಅಮ್ಮ, ಲತಾ ಸೊಗಡುವಿನಲ್ಲಿ ಕೆಲಸ ಮಾಡುವಾಗ ಒಂದಿನ ವೆಂಕಟಾಚಲರವರೇ ನಮ್ಮ ತಾಯಿ ಅಡ್ಮಿಟ್ ಆಗಿದ್ದಾರೆ ಬನ್ನಿ ಹೋಗೋಣ ಆಸ್ಪತ್ರೆಗೆ ಅಂತ ಕರೆದುಕೊಂಡು ಹೋದರು.
ತುಮಕೂರು ನರ್ಸಿಂಗ್ ಹೋಂ ಅಂತ ಎಂ.ಜಿ.ರಸ್ತೆಯ 2ನೇ ಕ್ರಾಸ್ನಲ್ಲಿತ್ತು, ಅಲ್ಲಿಗೆ ಹೋದಾಗ ಅಮ್ಮ ಬೋರಮ್ಮ ನರಳಾಡುತ್ತಿದ್ದರು, ವೈದ್ಯರ ಹತ್ತಿರ ಮಾತನಾಡಿದಾಗ ಅನಿಮೀಯ ಆಗಿದೆ ತುರ್ತಾಗಿ ಬ್ಲಡ್ ಬೇಕು ಎಂದರು, ಅದಕ್ಕೇನಂತೆ ನನ್ನದೇ ತೆಗೆದುಕೊಳ್ಳಿ ಅಂದೆ, ಅಲ್ಲಿ ಬೋರಮ್ಮನವರ ಕುಟುಂಬ ವರ್ಗ, ಸಂಬಂಧಿಕರು, ನೆಂಟರು ಎಲ್ಲಾ ಸೇರಿದ್ದರು, ನನ್ನೇ ನೋಡುತ್ತಿದ್ದ ವೈದ್ಯರು ನೀವೇನಾಗಬೇಕು ಎಂದು ಕೇಳಿದರು, ಅವರು ನಮ್ಮ ಅಮ್ಮ, ಅಮ್ಮನ ಜೀವ ಮುಖ್ಯನೋ ಸಂಬಂಧ ಮುಖ್ಯನೋ ಅಂತ ವೈದ್ಯರಿಗೆ ಕೇಳಿದಾಗ ಅವರು ನನ್ನ ಮುಖ ನೋಡಿ ಬ್ಲಡ್ ತಗೊಂಡು ಅಮ್ಮ ಬೋರಮ್ಮನಿಗೆ ಹಾಕಿದರು.
ಆ ವೈದ್ಯರ ಹೆಸರು ನನಗೆ ಗೊತ್ತಿಲ್ಲ, ನಾನು, ಲತಾ ನಮ್ಮ ಪತ್ರಿಕಾ ಕಛೇರಿಗೆ ನಮ್ಮ ಕೆಲಸಕ್ಕೆ ಹೋದೆವು, ಒಂದು ಗಂಟೆಯ ನಂತರ ವೈದ್ಯರು ಅಮ್ಮನ ಹತ್ತಿರ ಬಂದು ನಿಮ್ಮ ಮಗ ಬಂದು ಬ್ಲಡ್ ಕೊಡದಿದ್ದರೆ ನೀವು ಉಳಿಯುತ್ತಿರಲಿಲ್ಲ ಎಂದು ಹೇಳಿದರಂತೆ ಅಮ್ಮ ಬೋರಮ್ಮ ಉಷಾರಾದ ಮೇಲೆ ಲತಾನ್ನ ದಿನಾ ನನ್ನ ಕರೆದುಕೊಂಡು ಬಾ ಎಂದು ಪೀಡಿಸುತ್ತಿದ್ದರಂತೆ, ಒಂದಿನ ಲತಾ ಕೆಲಸ ಮುಗಿಸಿ ಹೊರಟಾಗ ಇವತ್ತು ನೀವು ಬರದಿದ್ದರೆ ಮನೆ ಒಳಕ್ಕೆ ಅಮ್ಮ ಬಿಟ್ಟುಕೊಳ್ಳುವುದಿಲ್ಲವಂತೆ ಅಂತ ಸಪ್ಪಗೆ ನಿಂತಾಗ ನಾನು ಅವರ ಮನೆಗೆ ಹೋದೆ.
ಮನೆಗೆ ಹೋದಾಗ ಅಮ್ಮ ದಿವಾನ್ ಕಾಟ್ ಮೇಲಿಂದ ಇಳಿದು ಬಂದು ನನ್ನ ತಬ್ಬಿಕೊಂಡು ನೀನು ನನ್ನ ಬದುಕಿಸಿದೆ, ನಾನು ಸತ್ತು ಹೋಗಿದ್ದರೆ ನನ್ನ ಹೆಣ್ಣು ಮಕ್ಕಳಿಗೆ ಯಾರು ದಿಕ್ಕು ಅಂತ ಅತ್ತು ಕರೆದು ಮುದ್ದಾಡಿ, ಇನ್ನು ಮೇಲೆ ನೀನು ನನ್ನ ಮಗನೇ ಎಂದು ಅಲ್ಲೇ ಗೋಡೆ ಮೇಲಿದ್ದ ಆಂಜನೇಯನ ಪೋಟೋ ಮೇಲೆ ಇವನೂ ನನ್ನ ಮಗನೇ, ನಾನು ಉಪವಾಸವಿದ್ದರೂ ಅವನಿರಬಾರದು ಅವನು ಉಪವಾಸವಿದ್ದರೆ ನಾನು ನಿನಗೆ ಕಡ್ಡಿ ಹಚ್ಚೋಲ್ಲ ಅಂತ ಆಂಜನೇಯನಿಗೆ ಬೈಯ್ದರು.
ಆ ನಂತರ ಅಮ್ಮ, ಲತಾ ಮತ್ತು ಅವರ ಅಕ್ಕ, ತಂಗಿ ಎಲ್ಲಾರೂ ಹೋಗಿ ತುಮಕೂರು ಡಿಸಿ ಕಛೇರಿ ಬಳಿಯಿರುವ ಕೋಟೆ ಆಂಜೇನೆಯನ ದೇವಸ್ಥಾನದಲ್ಲಿ ನಾನು ಚೆನ್ನಾಗಿರಲಿ ಅಂತ ಅರ್ಚನೆ ಮತ್ತು ರಸಾಯನ ಮಾಡಿಸಿ ಜನರಿಗೆ ಹಂಚಿದ್ದನ್ನು ಲತಾ ಆಗಾಗ್ಗೆ ನನಗೆ ಹೇಳುತ್ತಿರುತ್ತಾರೆ.
ಈಗಲೂ ಅಷ್ಟೇ ಅಮ್ಮ ಬೋರಮ್ಮ ಪೋನ್ ಮಾಡಿ ನನ್ನ ಮೊಮ್ಮಕ್ಕಳು ಚೆನ್ನಾಗಿದ್ದಾರ ಅಂತಲೇ ನನ್ನ ಮಕ್ಕಳನ್ನು ಕೇಳಿ, ಮನೆಗೆ ಬಾರೋ ನಾನು ನಿನ್ನ ಹತ್ತಿರ ಮಾತಡೋದು ಇದೆ ಅಂತ ರಂಪ ಮಾಡುತ್ತಾರೆ.
ಲತಾರವರು ಆಗಾಗ್ಗೆ ಅಮ್ಮ ನಿಮ್ಮದು ಯಾವ ಜನ್ಮದ ಸಂಬಂಧನೋ ದಿನಕ್ಕೆ ಒಂದು ಸಾರಿ ನಿಮ್ಮ ಹೆಸರನ್ನು ನಾನು ಆಫೀಸಿನಿಂದ ಹೋದಾಗ ವೆಂಕಟಾಚಲರಿಗೆ ಪೋನ್ ಮಾಡಿದ್ದ, ಯಾಕೆ ಬರಲಿಲ್ಲ ಅಂತ ಕೇಳು, ಪೋನ್ ಮಾಡಿ ಕೊಡು ಏನಾದರೂ ತೊಂದರೆ ಇದೆಯಾ ಕೇಳಾನ ಅನ್ನುತ್ತಾರಂತೆ.
ಇವರ ಮನೆಯವರೆಲ್ಲಾ ಅಣ್ಣ, ತಮ್ಮನಂತೆ ನನ್ನ ನೋಡುತ್ತಾರೆ ಅವರ ಮನೆಯಲ್ಲಿ ಏನೇ ಕಾರ್ಯಕ್ರಮವಾದರೂ ನಾನು ಅಲ್ಲಿರಬೇಕು, ಇಲ್ಲದಿದ್ದರೆ ಅಮ್ಮ ಬೋರಮ್ಮ ನಾಲ್ಕೈದು ಸಲ ಪೋನ್ ಮಾಡಿ ಬರುತ್ತೀಯೋ ನಾನೇ ಬರಲೋ ಎಂಬ ಸಿಟ್ಟು.
ನನ್ನಮ್ಮ ಲಕ್ಷ್ಮಣ ಅಪಘಾತವಾಗಿ ಆಸ್ಪತ್ರೆಯಲ್ಲಿದ್ದಾಗ ನನ್ನಮ್ಮ ಅವನನ್ನು ನೋಡಿಕೊಳ್ಳುತ್ತಿದ್ದ ಪರಿಯನ್ನು ನೋಡಿ, ಮಕ್ಕಳು ಎಷ್ಟೇ ದೊಡ್ಡವರಾದರೂ ಅಮ್ಮನಿಗೆ ಮಕ್ಕಳೇ ಕಣಪ್ಪ, ಅಮ್ಮನನ್ನು ಕೊನೆಗಾಲದಲ್ಲಿ ಚೆನ್ನಾಗಿ ನೋಡಿಕೊಳ್ಳಿ ಅಂತ ಅಮ್ಮ ಬೋರಮ್ಮ ಈಗಲೂ ಹೇಳುತ್ತಾರೆ.
ಅವರು ಸಣ್ಣಲಿಂಗಮ್ಮ ಅಂತ ಅವರಿಗೆ ಅದೇನು ಅಪರೇಷನ್ ಅಂತ ಗೊತ್ತಿಲ್ಲ, ಅವರಿಗೆ ತುಂಬಾ ಬೇಕಾದವರು ರಕ್ತ ಕೊಡದೆ ಓಡಿ ಹೋಗಿದ್ದರಿಂದ ನಾನು ರಕ್ತ ಕೊಡುವ ಪ್ರಮೇಯ ಬಂದಿತು. ನಾನು ರಕ್ತ ಕೊಟ್ಟು ಸುಮ್ಮನಾಗಿದ್ದೆ, ಒಂದಿನ ದಿನ ಸಣ್ಣಲಿಂಗಮ್ಮನಿಗೆ ಪೆನ್ಷನ್ ಬಂದಾಗ ನನ್ನ ಕೈಗೆ 500ರೂಪಾಯಿ ಇಟ್ಟು, ನೀನು ನನ್ನ ಮಗ ನಾನು ಬದುಕಿರುವ ತನಕ ದುಡ್ಡು ಕೊಡುತ್ತೇನೆ ಇದನ್ನು ಯಾರಿಗೂ ಹೇಳಬಾರದು, ನಿನ್ನ ಮದುವೆಯಲ್ಲಿ ನಾನೇ ಆರತಿ ಹಿಡಿಯಬೇಕು ಅಂತ ಆಗಾಗ್ಗೆ ಹೇಳೋರು, ನಾನು ಮದುವೆಯಾಗಿ ಮನೆ ತುಂಬಿಸಿಕೊಳ್ಳುವಾಗ ಸಣ್ಣಲಿಂಗಮ್ಮನವರು ಸೋಬಾನೆ ಪದ ಆಡಿ ಹರಸಿ ಹಣಗೆ ತಿಲಕವಿಟ್ಟು ನಿನಗೆ ಎರಡೂ ಗಂಡು ಮಕ್ಕಳಾಗಲಿ ಎಂದು ತಲೆ ಮೇಲೆ ಕೈಯಿಟ್ಟರು.
ನಾನು ಪ್ರೈಮರಿ ಶಾಲೆಯಲ್ಲಿದ್ದಾಗ ಪಂಚನಹಳ್ಳಿ ಸಮೀಪದ ನಿಡುವಳ್ಳಿಯ ಎನ್.ಎಸ್.ರಮೇಶ, ನಾನು ತುಂಬಾ ಆತ್ಮೀಯ ಗೆಳೆಯರು, ಭಾನುವಾರದ ದಿನ ಅವರ ಊರು ನಿಡುವಳ್ಳಿಗೆ ಇಬ್ಬರೂ ನಡೆದೇ ಹೋಗುತ್ತಿದ್ದೆವು, ಅವರ ಮನೆಗೆ ಹೋದಾಗ ಅವರಮ್ಮ ಗಿರಿಯಮ್ಮಹುಡುಗರು ಹಸಿದುಕೊಂಡು ಬಂದಿದ್ದಾರೆ ಎಂದು ಬಿಸಿ ಮುದ್ದೆ ಮಾಡಿ, ಗೊಜ್ಜು ಮಾಡಿ ಉಣ ಬಡಿಸೋರು, ನನ್ನ ಹತ್ತಿರ ಬಂದು ಅಪ್ಪ ಇಲ್ಲದ ಮಗ ಕಣಪ್ಪ ನನ್ನ ಮಗ ಹ್ಯಂಗೆ ಓದ್ತಾನೆ ಅಂತ ಗಿರಿಯಮ್ಮ ಕಣ್ಣೀರು ಒರೆಸಿಕೊಳ್ಳುತ್ತಿದ್ದರು, ನಾನು ಚಿಕ್ಕ ಹುಡುಗ ಆಗಿದ್ದರಿಂದ ಏನು ಹೇಳಬೇಕು ತೋಚದೆ, ಸ್ಕೂಲ್ ಫಸ್ಟ್ ಕಣವ್ವ ಎನ್ನುತ್ತಿದ್ದೆ.

ಎನ್.ಎಸ್.ರಮೇಶ, ಗಿರಿಯಮ್ಮನವರ ಜೊತೆ.
ಈಗ್ಗೆ ಮೂರು ತಿಂಗಳ ಹಿಂದೆ ರಮೇಶರ ತಾಯಿ ಗಿರಿಯಮ್ಮ ನೋಡಲು ಹೋದಾಗ, ಎಷ್ಟು ವರ್ಷವಾದ ಮೇಲೆ ಬಂದೋ ಕಂದ ಎಂದು ತಬ್ಬಿಕೊಂಡು ಕೆನ್ನೆಗೆ ಮುತ್ತು ಕೊಟ್ಟು ಮೈಡವಿ ಚೆನ್ನಾಗಿದ್ದಾಯ ಕಂದ ಎಂದು ಕೇಳಿ, ಪೋಟೋ ತೆಗೆಸಿಕೊಂಡರು.

ಮಾಳಕ್ಕನವರು.
ಇನ್ನಾ ಅಣೇಗೆರೆ ಶಂಕರಪ್ಪನವರ ಪತ್ನಿ ಮಾಳಕ್ಕ, ಅವರ ತೋಟ ರಸ್ತೆಯ ಬದಿಯಲ್ಲೇ ಇದ್ದುದರಿಂದ ಅಲ್ಲಿಯೇ ಇರುತ್ತಿದ್ದ ಮಾಳಕ್ಕ ಅಣೇಗೆರೆಗೆ ಹೋಗಲು ಅಲ್ಲಿಂದಲೇ ಹೋಗ ಬೇಕಿತ್ತು, ನಮ್ಮನ್ನ ಕಂಡ ಕೂಡಲೇ ಅಯ್ಯೋ ಬನ್ರಪ್ಪ ರಂಗ ಬಂದಂಗೆ ಬಂದ್ರಿ, ಏ ರಾಮ ಎಳನೀರು ಕೀಳೋ ಹುಡುಗ್ರು ಬಂದವ್ರೆ ಅಂತ ಒಂದಾದ ಮೇಲೆ ಒಂದು ಎಳ ನೀರು ಕುಡಿಸಿ, ಮನೆಗೆ ಹೋಗಾನ ಬಿರನೇ ಕೋಳಿ ಸಾರ್ ಮಾಡಿ ಬಿಡ್ತೀನಿ ಉಂಡು ಹೋಗಿವಿರಂತೆ ಅಂತ ಕೈ ಹಿಡಕೊಂಡು ನಿಂತು ಬಿಡುತ್ತಿದ್ದ ಮಾಳಕ್ಕ, ಕೊರೋನಾದಲ್ಲಿ ನಮ್ಮನ್ನೆಲ್ಲಾ ಅಗಲಿದ್ದು ತುಂಬಾ ನೋವಾಯಿತು.
ಇಷ್ಟು ಅಮ್ಮಂದಿರ ಜೊತೆಗೆ ನಾನು ಯಾವ ಯಾವ ಊರಿನಲ್ಲಿದ್ದರೂ ನನಗೆ ಒಬ್ಬೊಬ್ಬರು ಅಮ್ಮಂದಿರು ಸಿಕ್ಕಿ ಊಟ ಹಾಕಿ ಸಾಕಿದ್ದಾರೆ, ಈ ಅಮ್ಮಂದಿರ ಪ್ರೀತಿ ನನಗೆ ಕೆಲ ಸಲ ಶೂಲದಂತೆ ಅನ್ನಿಸಿ ಬಿಡುತ್ತದೆ ಯಾಕೆಂದರೆ ನಾನೊಂದು ಸ್ವಲ್ಪ ಭಾವುಕ ಜೀವಿ, ನನಗೆ ಹಿಂದೆ-ಮುಂದೆ ಮಾತನಾಡಿ ಅಭ್ಯಾಸವಿಲ್ಲ, ಇರೋದನ್ನು ಹೇಳಿಕೊಳ್ಳಬೇಕು ಎಂಬ ಮನಸ್ಸಿನವನು, ನನಗೇಕೋ, ಈ ಪ್ರೀತಿ, ನನ್ನನ್ನು ಕರೆದು ಮುದ್ದಿಸುವ ತಾಯಂದಿರೆಲ್ಲರೂ ಬಡ ತಾಯಂದಿರು ಅವರೆಂದೂ ದುಡ್ಡು ಮಾಡಲಿಲ್ಲ, ಅವರೆಲ್ಲಾ ಅವರಿಗೆ ಇರಲಿ ಬಿಡಲಿ ಅವರನ್ನು ಪ್ರೀತಿಸಿದವರಿಗೆ ಒಡಲ ತುಂಬಾ ಅನ್ನವನ್ನು ಇಕ್ಕಿದ ಜೀವಿಗಳು.
ಅಂತಹ ಜೀವಿಗಳು ಚೆನ್ನಾಗಿರಬೇಕು, ಆ ಜೀವಗಳು ಎಂದೂ ಕೊರಗಬಾರದು, ಅಳಬಾರದು, ಅವರೆಲ್ಲಾರ ಮಾತುಗಳನ್ನು ಕೇಳಿ ಆನಂದಿಸಬೇಕು, ಅವರ ಪ್ರೀತಿಗೆ ನಾನು ಏನೂ ಕೊಡಲು ಆಗಲಿಲ್ಲವಲ್ಲ ಅಂತ ನನ್ನ ತಾಯಿ ಈಗ್ಗೆ ಐದಾರು ವರ್ಷಗಳ ಹಿಂದೆ ಸತ್ತೇ ಹೋಗುತ್ತಾರೆ ಎಂಬುವರನ್ನು ಎರಡೂ ಕೈಗಳಲ್ಲಿ ಬಾಚಿ ಎತ್ತಿಕೊಂಡು ಮನೆಗೆ ತಂದು ಅವರು ಇನ್ನು ಉಳಿಯುವುದಿಲ್ಲ ಎಂದು ಬಂದವರೆಲ್ಲಾ ಹೇಳಿದರು, ಅದನ್ನು ಮೆಟ್ಟಿ ನಿಂತು ನನಗೆ ಹರಕೆ ಕಟ್ಟಿ ಜೀವ ಉಳಿಸಿದ ಹಡದವ್ವನನ್ನು ನಾನು, ನನ್ನ ಹೆಂಡತಿ, ನನ್ನ ಮಕ್ಕಳು ಕಣ್ಣಲ್ಲಿ ಕಣ್ಣಿಟ್ಟು, ಅಮ್ಮ ಮಾಡಿಕೊಳ್ಳುತ್ತಿದ್ದ ಒಂದು, ಎರಡನ್ನು ಯಾವ ಬೇಸರವಿಲ್ಲದೆ ಅಮ್ಮ ನಾವು ಚಿಕ್ಕವರಿದ್ದಾಗ ಮಾಡಿಲ್ಲವೇ, ನನ್ನಣ್ಣ ಲಕ್ಷ್ಮಣ ಅಪಘಾತವಾಗಿ ಕೆಳಕ್ಕೆ ಬಿದ್ದಾಗ ನಮ್ಮಮ್ಮ ಅವನ ಸೇವೆ ಮಾಡಿದ್ದನ್ನು ಕಂಡು ನಾನು ದಿನಾ ಕೊರಗುತ್ತಿದ್ದೆ, ಈಗ ಅಮ್ಮನ ಸೇವೆಯನ್ನು ತುತ್ತು ತಿನ್ನಿಸಿ, ಹಾರೈಕೆ ಮಾಡಿ, ಬದುಕಿಸಿದೆ ಈಗಲೂ ಅಮ್ಮ ಚೆನ್ನಾಗಿದ್ದಾರೆ. ಆದರೆ ಅವರು ನನಗೆ ಪೋನ್ ಮಾಡಿ ಜೀವನಕ್ಕೆ ಏನು ಮಾಡಿಕೊಂಡೆ ಏನು ತಿನ್ನುತ್ತೀಯ ಎನ್ನುವಾಗ, ನನ್ನ ಮುಂದೆ ಬಂಗಲೆ ಕಟ್ಟಿಕೊಂಡು, ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡುತ್ತಾ, ಸೂಟು-ಬೂಟು ಹಾಕಿಕೊಂಡು ತತ್ವ-ಸಿದ್ಧಾಂತ ಹೇಳುವ ನೀವು ಅಮ್ಮನನ್ನೂ ಹೇಗೆ ನೋಡಿಕೊಂಡ್ರಿ ಎಂಬುದನ್ನು ನಿಮ್ಮ ಮುಂದಿನ ಕನ್ನಡಿಯಲ್ಲಿ ಒಮ್ಮೆ ಮುಖ ನೋಡಿಕೊಂಡು ಮಾತನಾಡಿ.
ನನ್ನ ಬಳಿ ಹಣವಿಲ್ಲದಿರಬಹುದು, ನಾನು ಹೃದಯ ಹೀನನಲ್ಲ, ಮೋಸ ಮಾಡಿಲ್ಲ, ಇಂದಿಗೂ ಹಳೇ ಟಿವಿಎಸ್ನಲ್ಲಿ ನನ್ನ ಓಡಾಟ, ನನಗೆ ನನ್ನ ಅಮ್ಮಂದಿರ ಪ್ರೀತಿಯೇ ನನ್ನ ಆಸ್ತಿ, ನೀವು ಅಂದುಕೊಂಡಿರುವ, ಗಳಿಸಿರುವ ಎಲ್ಲಾ ಆಸ್ತಿಯನ್ನು ನೀವು ಸತ್ತ ದಿನ ನಿಮಗೆ ಕೊಟ್ಟರೆ ತೆಗೆದುಕೊಂಡು ಹೋಗಿ, ನನಗೆ ನನ್ನ ಅಮ್ಮಂದಿರ ಪ್ರೀತಿ, ಕರುಣೆ, ಮೈತ್ರಿ, ನನ್ನ ಪ್ರೀತಿಸುವ ಗೆಳೆಯರು, ಸಹೋದರಿಯರು, ಸಹೋದರರು ಮತ್ತು ಉಸಿರಾಡುವ ಗಾಳಿ, ಬೆಳಕು, ಬದುಕಲು ಒಂದಿಷ್ಟು ಆಹಾರ, ನೀರು ಮತ್ತು ಆ ದಿನಕ್ಕೆ ಬೇಕಾಗುವ ಹಣ ಇಷ್ಟೇ ಸಾಕು.
ನಿಮಗೆ ಈ ರೀತಿ ಒಂದು ದಿನ ಬದುಕಲು ಸಾಧ್ಯವೇ ನಿಮ್ಮ ಎದೆ ಮುಟ್ಟಿ ನೋಡಿಕೊಳ್ಳಿ, ನಿಮ್ಮ ಹಾಗೆ ನನಗೆ ಬೆಳ್ಳಗಿನ ಮಾತುಗಳು ಗೊತ್ತಿಲ್ಲ, ನಿಮ್ಮ ಆಸ್ತಿ ಅಂತಸ್ತು ಎಷ್ಟು ದಿನ, ಎಲ್ಲಾ ನಶ್ವರ ಇದರ ಮೇಲೂ ನಿಮ್ಮಲ್ಲಿ ಆಹಂ, ಅಧಿಕಾರದ ಮದ, ದುಡ್ಡಿನ ಮದ, “ನಾನು” ಅನ್ನುವುದಿದ್ದರೆ ನಿಮ್ಮಲ್ಲಿಯೇ ಇಟ್ಟುಕೊಳ್ಳಿ ಇನ್ನೊಬ್ಬರ ಮೇಲೆ, ಪಾಮರರ ಮೇಲೆ ಚಲಾಯಿಸಬೇಡಿ.
ಈ ನತ ದೃಷ್ಟ 7 ತಿಂಗಳಿಗೆ ಹುಟ್ಟಿದ್ದರೂ ಬದುಕಿದ್ದಾನೆ, ನಮ್ಮದ್ದನ್ನು ಕಿತ್ತುಕೊಳ್ಳುತ್ತಿದ್ದಾನೆ ಎಂದುಕೊಳ್ಳ ಬೇಡಿ ಇಲ್ಲಿ ಯಾವುದೂ ನಿಮ್ಮದೂ ಇಲ್ಲ, ನನ್ನದೂ ಇಲ್ಲ ಎಲ್ಲಾ ಮಣ್ಣಿನಿಂದ ಆಗಿರೋದು ಒಂದು ದಿನ ಎಲ್ಲರೂ ಮಣ್ಣಿಗೆ ಹೋಗಿ ಸೇರೋದು, ಒಳ್ಳೆಯ ಮನಸ್ಸಿನಿಂದ ಬದುಕಿ, ಬಾಳಿ, ಇದ್ದರೆ ಕೊಡಿ, ಇಲ್ಲದಿದ್ದರೆ ಸುಮ್ಮನಿರಿ ಬೇರೆಯವರನ್ನು ಹೀಯಾಳಿಸಬೇಡಿ, ನೀನ್ಯಾರು ನನಗೆ ಗೊತ್ತಿಲ್ಲ, ನಾನು ನಿನ್ನ ಒಪ್ಪಲ್ಲ ಅನ್ನುವುದಕ್ಕೆ ನಮ್ಮಲ್ಲಿರುವುದು ಉಸಿರು ಮಾತ್ರ, ಉಸಿರಿರುವ ತನಕ ಪ್ರೀತಿ ಇದ್ದರೆ ಜೊತೆ ಸೇರೋಣ, ಇಲ್ಲದಿದ್ದರೆ, ನಿಮ್ಮ ಪಾಡಿಗೆ ನೀವಿರಿ ಬೇರೆಯವರಿಗೆ ನೋವನ್ನು ಉಣ್ಣಿಸಬೇಡಿ.
-ವೆಂಕಟಾಚಲ.ಹೆಚ್.ವಿ.
(ಈಗಿನ ಜಗತ್ತು ಇರುವುದು ಹೀಗೆಯೇ ಅಲ್ಲವೇ !)