ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ : ಜಿ.ಪ್ರಭು ಕರೆ

ತುಮಕೂರು : ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಪೋಷಕರಿಗೆ ಕರೆ ನೀಡಿದರು.

ನಗರದ ಜಿಲ್ಲಾ ಬಾಲ ಭವನ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬಾಲ ಭವನ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನ ಮಂತ್ರಿ ದಿವಂಗತ ಜವಾಹರ್ ಲಾಲ್ ನೆಹರೂ ಅವರ ಸವಿ ನೆನಪಿಗಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. “ಮನೆಯೇ ಮೊದಲ ಪಾಠಶಾಲೆ-ತಾಯಿಯೇ ಮೊದಲ ಗುರು” ಎಂಬ ಗಾದೆ ಮಾತಿನಂತೆ ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರವನ್ನು ಕಲಿಸಬೇಕು. ಮಕ್ಕಳಿಗೆ ಪಠ್ಯಪುಸ್ತಕದ ಹೊರತಾಗಿ ದೈವ ಭಕ್ತಿ, ಸಹಕಾರ ಮನೋಭಾವ, ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ-ಬಲಿದಾನ ಬಗ್ಗೆ ತಿಳಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.

ಮಕ್ಕಳ ಮನಸ್ಸು ಬಿಳಿ ಹಾಳೆಯಿದ್ದಂತೆ. ಪೋಷಕರು ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಸರಿ ದಾರಿಯನ್ನು ತೋರಬೇಕು. ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರವೂ ಇದೆ. ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ಜಯಂತ ಕುಮಾರ್ ಮಾತನಾಡಿ, ಮಕ್ಕಳು ನೋವು-ನಲಿವುಗಳಲ್ಲಿ ಬೆಳೆಯಬೇಕು. ಪೆÇೀಷಕರ ಕಷ್ಟ-ಕಾರ್ಪಣ್ಯಗಳ ಅರಿವು ಅವರಿಗಿರಬೇಕು. ಸಮಾಜದಲ್ಲಿ ಬದುಕುವ ರೀತಿ-ನೀತಿಯನ್ನು ಕಲಿಸುವ ಜವಾಬ್ದಾರಿ ಪೋಷಕರ ಮೇಲಿರುತ್ತದೆ ಎಂದರಲ್ಲದೆ, ರಸ್ತೆಯಲ್ಲಿ ಸಂಚರಿಸುವಾಗ ಎಡ ಬದಿಯಲ್ಲಿಯೇ ಹೋಗುವ, 18 ವರ್ಷದೊಳಗಿನ ಮಕ್ಕಳು ಮೋಟಾರು ವಾಹನಗಳನ್ನು ಚಲಾಯಿಸದಂತೆ, ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಪೆÇೀಷಕರು ಮಕ್ಕಳಿಗೆ ಕಾನೂನಿನ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾತನಾಡಿ, ಬಹುಪಾಲು ಮಕ್ಕಳು ತಂದೆ ತಾಯಿ ನಡೆಯುವ ಮಾರ್ಗವನ್ನೇ ಅನುಸರಿಸುವುದರಿಂದ ತಂದೆ-ತಾಯಿಯರು ಮಕ್ಕಳಿಗೆ ಆದರ್ಶ ಪ್ರಾಯರಾಗಿರಬೇಕು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಿಕೊಡಬೇಕು. ಮಕ್ಕಳಿಗೆ ಡಾ: ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಜವಾಹರಲಾಲ್ ನೆಹರು, ಸುಭಾμï ಚಂದ್ರಬೋಸ್, ಮಹಾತ್ಮಾ ಗಾಂಧೀಜಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ದೇಶಕ್ಕಾಗಿ ದುಡಿದ ಮಹನೀಯರ ವ್ಯಕ್ತಿತ್ವಗಳನ್ನು ತಿಳಿಸಿ ಅವರಂತಾಗಲು ಪ್ರೇರೇಪಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನ್ ಕುಮಾರ್, ಜಿಲ್ಲಾ ಮಹಿಳಾ ಅಭಿವೃದ್ಧಿ ಅಧಿಕಾರಿ ಪವಿತ್ರ ಸೇರಿದಂತೆ ಮಕ್ಕಳು, ಪೆÇೀಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *