ತುಮಕೂರು, ರಾಜ್ಯದಲ್ಲಿ ಮಲೇರಿಯಾ ರೋಗವನ್ನು 2025ಕ್ಕೆ ಸಂಪೂರ್ಣ ನಿವಾರಣೆ ಮಾಡುವ ಗುರಿ ಹೊಂದಲಾಗಿದ್ದು ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡಲು ಚಿಂತನೆ ನಡೆಸಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಬಿ.ಎನ್.ಚಂದ್ರಶೇಖರಯ್ಯ ತಿಳಿಸಿದರು.
ನಗರದ ಅಮಾನಿಕೆರೆ ರಸ್ತೆಯ ಡಿಹೆಚ್‍ಒ ಕಚೇರಿಯಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜನವರಿ 2024ರಿಂದ ಏಪ್ರಿಲ್ 2024ರವರೆಗೆ ಜಿಲ್ಲೆಯಲ್ಲಿ ಯಾವುದೆ ಸ್ಥಳೀಯವಾಗಿ ಮಲೇರಿಯಾ ಪ್ರಕರಣಗಳು ವರದಿಯಾಗಿಲ್ಲ. ಹೊರರಾಜ್ಯದಿಂದ ಬಂದಿರುವ ನಾಲ್ಕು ಜನರಲ್ಲಿ ಈ ರೋಗ ಲಕ್ಷಣಗಳು ಕಂಡು ಬಂದಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ 2022ರಲ್ಲಿ ಜ್ವರಪೀಡಿತರಿಂದ 823306 ರಕ್ತ ಲೇಪನಗಳನ್ನು ಸಂಗ್ರಹಿಸಿ ಜಿಲ್ಲಾ ಮಲೇರಿಯಾ ಪ್ರಯೋಗ ಶಾಲೆ/ಸಾರ್ವಜನಿಕ ಆಸ್ಪತ್ರೆ/ಸಮುದಾಯ ಆರೋಗ್ಯ ಕೇಂದ್ರ/ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರಯೋಗ ಶಾಲೆಯಲ್ಲಿ ಪರೀಕ್ಷೆ ಮಾಡಲಾಗಿ ಯಾವುದೆ ಮಲೇರಿಯಾ ಪ್ರಕರಣಗಳು ದೃಢಪಟ್ಟಿರುವುದಿಲ್ಲ. 2023ರಲ್ಲಿ ಜ್ವರಪೀಡಿತರಿಂದ 685851 ರಕ್ತ ಲೇಪನಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಲಾಗಿ 14 ಪ್ಲಾಸ್ಮೋಡಿಯಂ ವೈವ್ಯಾಕ್ಸ್ ಮಲೇರಿಯಾ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಸ್ಥಳೀಯ ಪ್ರಕರಗಳು ಇರುವುದಿಲ್ಲ. ಈ 14 ಪ್ರಕರಣಗಳು ಜಿಲ್ಲೆಗೆ ವಲಸೆ ಬಂದಂತಹ ಇತರೆ ರಾಜ್ಯದ ಜನರಲ್ಲಿ ಪತ್ತೆಯಾಗಿರುತ್ತವೆ ಎಂದರು.
ಮಲೇರಿಯಾ, ಡೆಂಗ್ಯು, ಚಿಕನ್‍ಗುನ್ಯ, ಮೆದಳುಜ್ವರ, ಆನೆಕಾಲು ರೋಗ ಇವು ಸೊಳ್ಳೆಗಳಿಂದ ಹರಡುವ ರೋಗಗಳಾಗಿದ್ದು ಒಬ್ಬರಿಂದೊಬ್ಬರಿಗೆ ಸೊಳ್ಳೆಗಳ ಮೂಲಕ ಹರಡುತ್ತವೆ. ರೋಗ ಲಕ್ಷಣಗಳು ಕಂಡು ಬಂದರೆ ರೋಗಿಗಳು ತಕ್ಷಣ ಸ್ಥಳೀಯ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದರು.
ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಮೂಲಕ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ ಈ ರೋಗಗಳನ್ನು ನಿಯಂತ್ರಿಸಬಹುದಾಗಿದ್ದು, ಸಮುದಾಯದ ಜನರು ಈ ಬಗ್ಗೆ ವಿಶೇಷ ಆಸಕ್ತಿವಹಿಸಿ ರೋಗ ಮುಕ್ತರಾಗಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಗತ್ಯವಿರುವ ಕಡೆ ಈ ರೋಗಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರಲ್ಲದೆ ಪ್ರತಿ 15 ದಿನಗಳಿಗೊಮ್ಮೆ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಹೊರ ರಾಜ್ಯಗಳಿಂದ ಬಂದ ಕೂಲಿಕಾರ್ಮಿಕರು ವಾಸಿಸುವ ಸ್ಥಳಗಳ ಪರಿಶೀಲನೆ ಮಾಡಿ ಅಗತ್ಯ ಮಾರ್ಗದರ್ಶನ ನೀಡುತ್ತಿರುವುದಾಗಿ ತಿಳಿಸಿದರು.