ಮಾರ್ಚ್ 16 : ತುಮಕೂರಿಗೆ ಒಳಮೀಸಲಾತಿ ಜಾರಿ ಹೋರಾಟ ಪಾದಯಾತ್ರೆ ಸ್ವಾಗತಕ್ಕೆ ಸಭೆ

ತುಮಕೂರು:ಒಳಮೀಸಲಾತಿಗಾಗಿ ಒತ್ತಾಯಿಸಿ ದಸಂಸ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾದಿ ಸ್ಥಳ ಹರಿಹರದಿಂದ ಮಾರ್ಚ್ 05 ರಂದು ಹೊರಟಿರುವ ಕ್ರಾಂತಿಕಾರಿ ಪಾದಯಾತ್ರೆ ಮಾರ್ಚ್ 16ರ ಭಾನುವಾರದಂದು ತುಮಕೂರು ನಗರ ಪ್ರವೇಶಿಸಲಿದ್ದು,ಪಾದಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿ, ಬೀಳ್ಕೋಡುವ ಸಂಬಂಧ ಇಂದು ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮುದಾಯದ ಮುಖಂಡರ ಪೂರ್ವಭಾವಿ ಸಭೆ ನಡೆಯಿತು.

ಸುಮಾರು 30 ವರ್ಷಗಳ ನಿರಂತರ ಹೋರಾಟದ ಫಲವಾಗಿ 2024ರ ಆಗಸ್ಟ್ 01 ರಂದು ಸುಪ್ರಿಂಕೋರ್ಟಿನ 7 ನ್ಯಾಯಾಧೀಶರ ಪೀಠ ಒಳಮೀಸಲಾತಿ ಜಾರಿ ಅಯಾಯ ರಾಜ್ಯ ಸರಕಾರಗಳ ಮಾಡಬಹುದು ಎಂಬ ತೀರ್ಪು ನೀಡಿದೆ. ಎಂಪೇರಿಕಲ್ ಡಾಟಾ ಹೆಸರಿನಲ್ಲಿ ಸರಕಾರಗಳು ವಿಳಂಭ ಧೋರಣೆ ಅನುಸರಿಸುತ್ತಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಎರಡು ವರ್ಷ ಕಳೆದರೂ ಮೀನಾಮೇಷ ಎಣಿಸುತ್ತಿದ್ದು, ಸರಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಪ್ರೊ.ಹರಿರಾಮ್ ಮತ್ತು ಭಾಸ್ಕರ್ ಪ್ರಸಾದ್ ನೇತೃತ್ವದ ಸುಮಾರು 40 ಜನರ ತಂಡ ಈ ಕ್ರಾಂತಿಕಾರಿ ಪಾದಯಾತ್ರೆಯನ್ನು ಕೈಗೊಂಡಿದ್ದು, ಪಾದಯಾತ್ರೆ ಮಾ.13 ರಂದು ತುಮಕೂರು ಜಿಲ್ಲೆಗೆ ಆಗಮಿಸಲಿದ್ದು, ಮಾ.16ರಂದು ತುಮಕೂರು ನಗರಕ್ಕೆ ಆಗಮಿಸಲಿದೆ.ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ತುಮಕೂರು ಜಿಲ್ಲೆಯಲ್ಲಿ ಪಾದಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿ,ಬೀಳ್ಕೊಡುವ ನಿಟ್ಟಿನಲ್ಲಿ ಚರ್ಚೆಗಳು ನಡೆದವು.

ಮಾರ್ಚ್ 15ರ ರಾತ್ರಿ ತುಮಕೂರು ನಗರಕ್ಕೆ ಸಮೀಪದ ಊರುಕೆರೆ ಗ್ರಾಮಕ್ಕೆ ಬಂದು ತಲುಪುವ ಕ್ರಾಂತಿಕಾರಿ ಪಾದಯಾತ್ರೆಯ ವಾಸ್ತವ್ಯಕ್ಕೆ ವ್ಯವಸ್ತೆ ಮಾಡುವ ಜೊತೆಗೆ,ರಾತ್ರಿ ಊಟ ಮತ್ತು ಮಾರ್ಚ್ 16ರ ಬೆಳಗಿನ ತಿಂಡಿ ವ್ಯವಸ್ಥೆ, ಮದ್ಯಾಹ್ನದ ಊಟದ ವ್ಯವಸ್ತೆ ಮಾಡುವುದು,ಊರುಕೆರೆಯಿಂದ ಹೊರಡುವ ಪಾದಯಾತ್ರೆಯನ್ನು ತಮಟೆ ಸದ್ದಿನೊಂದಿಗೆ ನಗರದ ಶಿರಾಗೇಟ್‍ನ ಕಾಳಿದಾಸ ಸರ್ಕಲ್‍ನಲ್ಲಿ ಸ್ವಾಗತಿಸಿ,ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಸ್ವಾತಂತ್ರ ಚೌಕದ ಮೂಲಕ ಬಿಜಿಎಸ್(ಟೌನ್‍ಹಾಲ್)ವೃತ್ತಕ್ಕೆ ಕರೆತರುವುದು. ಟೌನ್‍ಹಾಲ್ ಮುಂಭಾಗದಲ್ಲಿ ಒಂದು ಬಹಿರಂಗ ಸಭೆ ನಡೆಸಿ, ಊಟದ ನಂತರ ಕೆಲ ಕಾಲ ವಿಶ್ರಾಂತಿ ನಂತರ ಸಿದ್ದಗಂಗಾ ಮಠಕ್ಕೆ ತೆರಳಿ ರಾತ್ರಿ ವಾಸ್ತವ್ಯ ಹೂಡಲಿದೆ.ಮಾರ್ಚ 17ರ ಬೆಳಗ್ಗೆ ಸಿದ್ದಗಂಗಾ ಮಠದಿಂದ ಹೊರಡುವ ಕ್ರಾಂತಿಕಾರಿ ಪಾದಯಾತ್ರೆಯನ್ನು ಜಿಲ್ಲೆಯ ಗಡಿಯವರೆಗೆ ತೆರಳಿ ಬಿಳ್ಕೋಡಲು ಸಭೆಯಲ್ಲಿ ತೀರ್ಮಾನ ಕೈಗೊಂಡರು.

ಒಳಮೀಸಲಾತಿ ಸಂಬಂಧ ಈ ಹಿಂದೆಯೂ ದಲಿತ ಮುಖಂಡರ ನೇತೃತ್ವದಲ್ಲಿ ಇಂತಹ ಪಾದಯಾತ್ರೆಗಳು ನಡೆದಾಗ ಜಿಲ್ಲೆಯ ಮಾದಿಗ ಸಮುದಾಯ ಪಾದಯಾತ್ರೆಯಲ್ಲಿ ಬಂದವರಿಗೆ ಒಳ್ಳೆಯ ಅತಿಥ್ಯ ನೀಡಿ ಕಳುಹಿಸಲಾಗಿದೆ. ಈ ಬಾರಿಯೂ ಯಾವುದೇ ಕೊರತೆಯಾಗದ ರೀತಿಯಲ್ಲಿ ಕಾರ್ಯಕ್ರಮ ನಡೆಸಬೇಕು.ಎಲ್ಲರೂ ಪಕ್ಷ ಬೇಧ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸೇರಿದಂತೆ ವಿವಿಧ ಮಾದಿಗ ಪರ ಸಂಘಟನಗಳ ಮುಖಂಡರಾದ ಕೊಟ್ಟ ಶಂಕರ್,ರಂಗಧಾಮಯ್ಯ,ಪಿ.ಎನ್.ರಾಮಯ್ಯ,ಹಿರಿಯರಾದ ಮರಿಚನ್ನಮ್ಮ,ಬಂಡೆ ಕುಮಾರ್, ಡಾ.ರವಿಕುಮಾರ್ ನೀ.ಹ. ರಂಜನ್,ಶಿವಣ್ಣ,ಮೂರ್ತಿ,ಕೆಂಪರಾಜು,ಭಾನುಪ್ರಕಾಶ್,ಜೆಸಿಬಿ ವೆಂಕಟೇಶ್, ಗಣೇಶ್, ಕೇಬಲ ರಘು, ಕಿರಣ್‍ಕುಮಾರ್, ಗೋಪಾಲ್, ನಾಗರಾಜು,ಸಾಗರ್, ಲಕ್ಷ್ಮಿದೇವಯ್ಯ, ರಾಮಾಂಜಿ ಸೇರಿದಂತೆ ದಸಂಸ ಮುಖಂಡರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *