ತುಮಕೂರು: ಕಾಶ್ಮೀರದ ಪಹಲ್ಗಾಮ್‍ನಲ್ಲಿ ಧರ್ಮ ಕೇಳಿ ಪ್ರವಾಸಿಗರನ್ನು ಹತ್ಯೆ ಮಾಡಿದ ಪಾಕಿಸ್ತಾನಿ ಪ್ರಾಯೋಜಿತ ಉಗ್ರರಿಗೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಉಗ್ರರ ಅಡಗು ತಾಣಗಳನ್ನು ಧ್ವಂಸ ಮಾಡಲಾಗಿದೆ. ಈ ಪರಿಸ್ಥಿತಿಯಲ್ಲಿ ದೇಶದ ಐಕ್ಯತೆಗಾಗಿ ರಾಷ್ಟ್ರಭಕ್ತಿ ಅನಾವರಣಗೊಳಿಸುವ ತಿರಂಗ ಯಾತ್ರೆಯನ್ನು ಇದೇ 18ರ ಭಾನುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವಿಧ ಸಮಾಜ, ಸಂಘಸಂಸ್ಥೆಗಳ ಮುಖಂಡರು ಹೇಳಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ನಿರ್ದೇಶಕ ಜಿ.ಆರ್.ಸುರೇಶ್, ಪಹಲ್ಗಾಮ್ ಹತ್ಯೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಹಲವಾರು ರಾಜತಾಂತ್ರಿಕ ನಿರ್ಧಾರಗಳನ್ನು ಕೈಗೊಂಡು ಉಗ್ರರ ಹುಟ್ಟಡಗಿಸುವ ಕ್ರಮ ಕೈಗೊಂಡಿದೆ. ಪಾಕಿಸ್ತಾನದಲ್ಲಿರುವ 9 ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿ 100ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿದಿದೆ ಎಂದರು.
ಈ ಸಂದರ್ಭದಲ್ಲಿ ನಮ್ಮ ಸೈನಿಕರಿಗೆ ನೈತಿಕ ಬೆಂಬಲ ನೀಡಲು, ಭಾರತೀಯರೆಲ್ಲಾ ಒಂದಾಗಿ ದೇಶಭಕ್ತಿ ಪ್ರದರ್ಶಿಸುವ ಭಾವನಾತ್ಮಕ ಕಾರ್ಯಕ್ರಮವಾಗಿ ಈ ತಿಂಗಳ 18ರ ಭಾನುವಾರ ನಗರದಲ್ಲಿ ಸಾವಿರಾರು ಜನರು ಒಳಗೊಂಡ ಬೃಹತ್ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಎಸ್‍ಐಟಿ ಕಾಲೇಜು ಮುಂಭಾಗದಿಂದ ಗಂಗೋತ್ರಿ ರಸ್ತೆ, ಎಸ್.ಎಸ್.ಪುರಂ ಮುಖ್ಯರಸ್ತೆ ಮೂಲಕ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದವರೆಗೆ ತಿರಂಗ ಯಾತ್ರೆ ನಡೆಯಲಿದೆ ಎಂದರು.
ವಿವಿಧ ಮಠಾಧೀಶರು, ಚರ್ಚ್ ಪಾದ್ರಿಗಳು, ಮಸೀದಿ ಮೌಲ್ವಿಗಳು, ವಿವಿಧ ರಾಜಕೀಯ ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಅಲ್ಲದೆ, ಕೈಗಾರಿಕೋದ್ಯಮಿಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ಜಿಲ್ಲಾ ವೈದ್ಯರ ಸಂಘ, ಜಿಲ್ಲಾ ವಕೀಲರ ಸಂಘ, ದಲಿತ ಸಂಘಟನೆಗಳು, ಆಟೋ ಚಾಲಕರ ಸಂಘ, ಸಹಕಾರಿ ಬ್ಯಾಂಕುಗಳು, ನಿವೃತ್ತ ಸೈನಿಕರ ಸಂಘ, ದಕ್ಷಿಣ ಕನ್ನಡ ಮಿತ್ರಬಳಗ ಸೇರಿದಂತೆ ಹಲವಾರು ಸಂಘಟನೆಗಳು, ನಾಗರೀಕ ಮುಖಂಡರು ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡು ದೇಶಭಕ್ತಿ ಪ್ರದರ್ಶಿಸುವರು ಎಂದು ಸುರೇಶ್ ಹೇಳಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ಪಹಲ್ಗಾಮ್ ಹತ್ಯೆ ವಿರುದ್ಧ ಪ್ರಧಾನಿ ಮೋದಿ ಸರ್ಕಾರ ಉಗ್ರರಿಗೆ ತಕ್ಕ ಉತ್ತರ ನೀಡಿದೆ. ಭಾರತದ ಯಾವುದೇ ಪ್ರಜೆ, ಹೆಣ್ಣುಮಕ್ಕಳ ತಂಟೆಗೆ ಬಂದರೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂಬುದನ್ನು ಮೋದಿ ಸರ್ಕಾರ ಈ ಮೂಲಕ ಜಗತ್ತಿಗೆ ಸಾರಿದೆ. ಇಂತಹ ಪರಿಸ್ಥಿತಿಯಲ್ಲಿ ಜಾತಿ, ಧರ್ಮ, ಪಕ್ಷ ಮೀರಿ ದೇಶದ ಐಕ್ಯತೆಗೆ ಎಲ್ಲರೂ ಒಂದಾಗಿ ಭಾರತೀಯ ಸೈನಿಕರಿಗೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಹೇಳಿದರು.
ಜಿಲ್ಲಾ ವೈದ್ಯರ ಸಂಘದ ಡಾ.ಕೆ.ಪಿ.ಸುರೇಶ್‍ಬಾಬು ಮಾತನಾಡಿ, ಭಾರತೀಯ ಪ್ರವಾಸಿಗರನ್ನು ಹತ್ಯೆ ಮಾಡಿದ ಭಯೋತ್ಪಾದಕರನ್ನು ರಕ್ಷಣೆ ಮಾಡುತ್ತಿರುವ ಪಾಕಿಸ್ತಾನದ ಮೇಲಿನ ಪ್ರತೀಕಾರದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಪರಾಕ್ರಮದಿಂದ ಪಾಕಿಸ್ತಾನಕ್ಕೆ ಪಾಠ ಕಲಿಸಿದ ಭಾರತೀಯ ಸೈನ್ಯದೊಂದಿಗೆ, ರಾಷ್ಟ್ರ ರಕ್ಷಣೆಗಾಗಿ ನಾವೆಲ್ಲಾ ಜೊತೆಯಾಗಬೇಕಾದ ಸಮಯವಿದು ಎಂದರು.
ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಜೈನ ಸಮಾಜದ ಆರ್.ಎ.ಸುರೇಶ್‍ಕುಮಾರ್, ಮರಾಠ ಸಮಾಜದ ಸುರೇಶ್ ರಾವ್, ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಎಂ.ನಾಗರಾಜು, ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕರ್, ಮೈತ್ರಿ ಸಂಘಟನೆಯ ಗಂಗಾ ಪರಮೇಶ್, ಸುಧಾ ಶಶಿಕುಮಾರ್, ನಾಗಾರ್ಜುನ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವನಂಜಪ್ಪ, ನೇಕಾರರ ಸಮಾಜದ ರಾಮಕೃಷ್ಣಯ್ಯ ಮೊದಲಾದವರು ಭಾಗವಹಿಸಿದ್ದರು