ಸ್ಥಳೀಯ ಸಂಸ್ಥೆಗಳ ಚುನಾವಣೆ, ಕಾಂಗ್ರೆಸ್ ಗೆಲುವಿಗೆ ಟೊಂಕ ಕಟ್ಟಿ ದುಡಿಯಲು ಮಯೂರ ಜಯಕುಮಾರ್ ಕರೆ

ತುಮಕೂರು:ಕೆಲವೇ ವಾರಗಳಲ್ಲಿ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಗೆ ಸಿದ್ದರಾಗುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಮಯೂರ ಜಯಕುಮಾರ್ ಕರೆ ನೀಡಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖಂಡರುಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಪಕ್ಷದ ಆಧಾರಸ್ತಂಭವಾಗಿರುವ,ಎಂ.ಎಲ್.ಎ, ಎಂಪಿ ಚುನಾವಣೆಗೆ ದುಡಿದ ಮುಖಂಡರು ಮತ್ತು ಕಾರ್ಯಕರ್ತರನ್ನು ಜನಪ್ರತಿನಿಧಿಗಳನ್ನಾಗಿಸುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದು,ಎಲ್ಲಾ ಕಾರ್ಯಕರ್ತರು, ಮುಖಂಡರು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಟೊಂಕ ಕಟ್ಟಿ ದುಡಿಯುವಂತೆ ಮನವಿ ಮಾಡಿದರು.

ನಮ್ಮದೇ ಸರಕಾರ ಬಂದು ಎರಡು ವರ್ಷ ಕಳೆದರೂ ಪಕ್ಷಕ್ಕೆ ದುಡಿದ ಕಾರ್ಯಕರ್ತರು ಮತ್ತು ಮುಖಂಡರುಗಳಿಗೆ ಅಧಿಕಾರ ಸಿಕ್ಕಿಲ್ಲ ಎಂಬ ಕೊರಗು ಪಕ್ಷದ ಮುಖಂಡರಲ್ಲಿ ಇರುವುದು ನಮ್ಮ ಗಮನದಲ್ಲಿದೆ. ಈಗಾಗಲೇ ಹಲವು ನಿಗಮ, ಮಂಡಳಿಗಳ ಪದಾಧಿಕಾರಿಗಳ ಪಟ್ಟಿ ರೆಡಿಯಾಗಿದ್ದು,ಪರಿಶೀಲನೆಯಲ್ಲಿದೆ.ಶೀಘ್ರದಲ್ಲಿಯೆ ಅನುಮೋದನೆ ಸಹ ದೊರೆಯ ಲಿದೆ.ಆದರೆ ಒಮ್ಮೆ ಚುನಾವಣೆ ಘೋಷಣೆಯಾದರೆ ಅದನ್ನು ಮುಂದೂಡಲು ಸಾಧ್ಯವಿಲ್ಲ.ಹಾಗಾಗಿ ಅಧಿಕಾರಕ್ಕಾಗಿ ಮುನಿಸು ತೋರದೆ, ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸಿದರೆ, ಮುಂದೊಂದು ದಿನ ಖಂಡಿತವಾಗಿಯೂ ಪಕ್ಷ ನಿಮ್ಮ ಕೈ ಹಿಡಿಯಲಿದೆ ಎಂಬ ವಿಶ್ವಾಸವನ್ನು ಮಯೂರ ಜಯಕುಮಾರ್ ವ್ಯಕ್ತಪಡಿಸಿದರು.

ಚುನಾವಣಾ ದಿನಾಂಕ ಯಾವಾಗ ಬೇಕಾದರೂ ಘೋಷಣೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೊದಲು ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಒರ್ವ ಸಂಚಾಲಕರನ್ನು ನೇಮಕ ಮಾಡಿ, ಅವರಿಗೆ ಬೂತ್ ಕಮಿಟಿಗಳ ಮೇಲುಸ್ತುವಾರಿ ವಹಿಸುವ ಮೂಲಕ ತಳಮಟ್ಟದಲ್ಲಿ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುವ ಕೆಲಸ ಆಗಬೇಕಿದೆ. ಮುಂದಿನ 15 ದಿನದಲ್ಲಿ ಜಿಲ್ಲೆಯಲ್ಲಿರುವ 57 ಜಿ.ಪಂ. ಕ್ಷೇತ್ರಗಳು ಹಾಗೂ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಸಂಚಾಲಕರನ್ನು ನೇಮಿಸಿ ಪಟ್ಟಿ ನೀಡಬೇಕು.ಮುಂದಿನ ಸಭೆಯನ್ನು ಅವರೊಂದಿಗೆ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಿದರು.

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆ ಕಾರ್ಯಕರ್ತರನ್ನು ಜನಪ್ರತಿನಿಧಿಗಳನ್ನಾಗಿಸುವ ಮಹತ್ವದ ಚುನಾವಣೆ.ಇದರಿಂದ ಪಕ್ಷಕ್ಕೆ ತಳಮಟ್ಟದಲ್ಲಿ ಗಟ್ಟಿ ನೆಲೆ ಸಿಕ್ಕಂತಾಗುತ್ತದೆ. ಹಾಗಾಗಿ ಇದನ್ನು ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಬೇಕು. ಚುನಾವಣೆ ಘೋಷಣೆಗೂ ಮುನ್ನವೇ ಅರ್ಹ ಅಭ್ಯರ್ಥಿಯನ್ನು ಗುರುತಿಸುವ ಕೆಲಸ ಆಗಬೇಕಾಗಿದೆ.ಜಿಲ್ಲಾ ಉಸ್ತುವಾರಿಗಳಾಗಿರುವ ಮಯೂರ ಜಯಕುಮಾರ್, ಇಂತಹ ಸಭೆಗಳನ್ನು ತಾಲೂಕು ಮಟ್ಟದಲ್ಲಿ ಮಾಡಿ, ಕಾರ್ಯಕರ್ತರ ಅಹವಾಲು ಕೇಳುವ ಜೊತೆಗೆ, ಆರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಹಕಾರಿಯಾಗುತ್ತದೆ. ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.

ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ಈ ಹಿಂದಿನ ವರ್ಷಗಳಲ್ಲಿ ಅಂದರೆ 2010ರಿಂದ 2024ರವರೆಗೆ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಮಹಾನಗರಪಾಲಿಕೆಯಲ್ಲಿ ಅಧಿಕಾರವನ್ನು ಹಂಚಿಕೊಂಡಿದ್ದೇವು. ಆದರೆ ಈಗ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ನಮ್ಮ ಬಲ ಹೆಚ್ಚಬೇಕಾಗಿದೆ. ಎಲ್ಲರೂ ಒಗ್ಗೂಡಿದರೆ 35 ಕ್ಷೇತ್ರಗಳಲ್ಲಿ ಕನಿಷ್ಟ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಇದಕ್ಕೆ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕೆಂದರು.

ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿ, ಈ ಹಿಂದಿನ ಎರಡು ವರ್ಷ ನಾವು ಎಂ.ಎಲ್.ಎ ಮತ್ತು ಎಂ.ಪಿ ಚುನಾವಣೆ ಎದುರಿಸಿದ್ದೇವೆ. ಈ ವರ್ಷ ಸ್ಥಳೀಯ ಸಂಸ್ಥೆ ಚುನಾವಣೆ ಬಂದಿದೆ.ಬಿಜೆಪಿ-ಜೆಡಿಎಸ್ ಒಂದಾಗಿರುವುದಕ್ಕೆ ಹೆದರುವ ಅಗತ್ಯವಿಲ್ಲ. ಅದು ನಮಗೆ ಪ್ಲಸ್ ಪಾಯಿಂಟ್ ಆಗಲಿದೆ. ಇದುವರೆಗೆ ಸರಕಾರ ನೀಡಿರುವ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳನ್ನು ಜನರು ಮುಂದೆ ತೆಗೆದುಕೊಂಡು ಹೋಗಿ,ಮತದಾರರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡಿದರೆ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಕೆಲವೇ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಲಿದೆ. ಸರಕಾರ ನ್ಯಾಯಾಲಯಗಳ ಅದೇಶದ ನಡುವೆಯೂ ಮುಂದೂಡುವುದು ಕಷ್ಟ. ಹಾಗಾಗಿ ಕಾರ್ಯಕರ್ತರು ಸಜ್ಜಾಗಬೇಕು. ಸ್ವಂತ ಬಲದ ಮೇಲೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿಯೂ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಸ್.ಷಪಿಅಹಮದ್, ಮುಖಂಡರಾದ ನಿಖೇತರಾಜ್ ಮೌರ್ಯ, ಆರ್.ರಾಮಕೃಷ್ಣ, ಮಹಿಳಾ ಕಾಂಗ್ರೆಸ ಅಧ್ಯಕ್ಷೆ ಶ್ರೀಮತಿ ಗೀತಾ ರಾಜಣ್ಣ, ಯುವಕಾಂಗ್ರೆಸ್ ಅಧ್ಯಕ್ಷ ನಿಖಿಲ್ ರಾಜ್ ಅವರುಗಳು ಮಾತನಾಡಿ, ಪಕ್ಷಕ್ಕಾಗಿ ದುಡಿದ ಮಹಿಳೆಯರಿಗೆ, ಯುವಕರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೆಚ್ಚಿನ ಟಿಕೇಟ್ ನೀಡುವಂತೆ ಜಿಲ್ಲಾ ಉಸ್ತುವಾರಿ ಮಯೂರ ಜಯಕುಮಾರ್ ಅವರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಪಾಲಿಕೆ ಮಾಜಿ ಸದಸ್ಯರಾದ ನಯಾಜ್ ಅಹಮದ್,ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಫಯಾಜ್, ಮಹೇಶ್, ಮುಖಂಡರಾದ ಸುಜಾತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *